Sunday, August 2, 2026

BDA Apartments

Home Front Page ಮೈಸೂರಿನಲ್ಲಿ ವಿದ್ಯಾರ್ಥಿನಿಲಯಗಳಿಗೆ ಟಿ. ಶ್ಯಾಮ್ ಭಟ್ ಭೇಟಿ, ಪರಿಶೀಲನೆ

ಮೈಸೂರಿನಲ್ಲಿ ವಿದ್ಯಾರ್ಥಿನಿಲಯಗಳಿಗೆ ಟಿ. ಶ್ಯಾಮ್ ಭಟ್ ಭೇಟಿ, ಪರಿಶೀಲನೆ

ಮೈಸೂರು,ಫೆಬ್ರವರಿ,28,2025 (www.justkannada.in): ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ  ಟಿ. ಶ್ಯಾಮ ಭಟ್ ಅವರು ಇಂದು ಮೈಸೂರಿನ ವಿವಿಧ ವಿದ್ಯಾರ್ಥಿನಿಲಯಗಳಿಗೆ ಭೇಟಿಕೊಟ್ಟು ಅಲ್ಲಿನ ಸ್ವಚ್ಚತೆ ಸೇರಿ ವಿವಿಧ ವಿಚಾರಗಳ ಬಗ್ಗೆ ಪರಿಶೀಲನೆ ನಡೆಸಿದರು.

ಜಿಲ್ಲಾ ಪಂಚಾಯತ್  ಬಳಿಯ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ, ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ವೃತ್ತಿಪರ ಕಾಲೇಜು ಬಾಲಕರ ವಿದ್ಯಾರ್ಥಿ ನಿಲಯ ಹಾಗೂ ಚಾಮುಂಡೇಶ್ವರಿ ನಗರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ವೃತ್ತಿಪರ ನಿಲಯ ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ  ಟಿ. ಶ್ಯಾಮ ಭಟ್ ಹಾಗೂ ಸದಸ್ಯರಾದ ಎಸ್. ಕೆ. ವಂಟಿಗೋಡಿ ಅವರು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಅಡುಗೆ ಮನೆಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಬೆಳಿಗ್ಗೆ ಸಿದ್ಧಪಡಿಸಿವಿರುವ ಉಪಹಾರದ ಬಗ್ಗೆ ಮಾಹಿತಿ ಪಡೆದುಕೊಂಡು ವಿದ್ಯಾರ್ಥಿಗಳಿಗೆ ಶುಚಿ ಹಾಗೂ ರುಚಿಯಾದ ಆಹಾರ ನೀಡಬೇಕು ಎಂದು ಸೂಚಿಸಿದರು. ಹಾಗೆಯೇ ಹಾಜರಿದ್ದ ವಿದ್ಯಾರ್ಥಿಗಳ ಬಳಿ ಮೆಸ್ ಸಮಿತಿ ರಚನೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಂಡರು. ಮೆಸ್ ಸಮಿತಿಯು ಪ್ರತಿ ದಿನ ಆಹಾರ ಸಾಮಗ್ರಿಗಳನ್ನು ಅಡುಗೆ ಮಾಡುವ ಸಿಬ್ಬಂದಿಗಳಿಗೆ ನೀಡುವಾಗ ಪರಿಶೀಲನೆ ನಡೆಸಬೇಕು. ಯಾವುದೇ ತೊಂದರೆ ಇದ್ದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಅಡುಗೆ ತಯಾರಿಸುವ ಸಿಬ್ಬಂದಿಗಳು, ಸ್ವಚ್ಛತಾ ಸಿಬ್ಬಂದಿಗಳ ಜೊತೆ ಮಾತನಾಡಿ ಪ್ರತಿ ಮಾಹೆ ಸಂಬಳ ದೊರಕುತ್ತಿರುವ ಬಗ್ಗೆ ಖಾತ್ರಿ ಪಡೆಸಿಕೊಂಡ ಶ್ಯಾ‍ಮ್ ಭಟ್ ಅವರು,  ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಜೊತೆಗೆ ಖುದ್ದು ವಿದ್ಯಾರ್ಥಿಗಳ ಕೊಠಡಿಗೆ ತೆರಳಿ ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು.

ಹಾಸ್ಟೆಲ್ ಗಳಲ್ಲಿ ವಿದ್ಯಾರ್ಥಿಗಳಿಗೆ ಸೊಳ್ಳೆ ಪರದೆಗಳು ಹಾಗೂ ಚಳಿಗಾಲದಲ್ಲಿ ಗೀಸರ್ ಅವಶ್ಯಕತೆ ಇದ್ದು, ಈ ಕುರಿತಂತೆ ಜಿಲ್ಲಾ ಪಂಚಾಯತ್ ಅಥವಾ ಜಿಲ್ಲಾಡಳಿತದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.

ಇದರ ಜೊತೆಯಲ್ಲಿ ಇಂಜಿನಿಯರಿಂಗ್ ಹಾಗೂ ವೃತ್ತಿಪರ ಕೋರ್ಸ್ ಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ದಾಖಲಾತಿ ಎರಡು ಹಾಸ್ಟಲ್ ಗಳಲ್ಲಿ ಹೆಚ್ಚಿದ್ದು, ಶೌಚಾಲಯಗಳ ಅವಶ್ಯಕತೆ ಇದ್ದು, ಈ ಕುರಿತಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು. ಪರಿಶೀಲನೆಯ ಸಂದರ್ಭದಲ್ಲಿ ಹಾಜರಾತಿ ಹಾಗೂ ಸ್ಟಾಕ್ ರಿಜಿಸ್ಟರ್ ಗಳನ್ನು ಸಹ ವೀಕ್ಷಿಸಿದರು.

ಈ ವೇಳೆ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಅರುಣ್ ಪೂಜರ್, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರ್ ಸ್ವಾಮಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಂಜುಳ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಸಿದ್ದಲಿಂಗೇಶ್ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು .

Key words: T. Shyam Bhatt, visits,  inspects, student, hostels, Mysore