ಟಿ-20 ವಿಶ್ವಕಪ್: ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಕದನಕ್ಕೆ ಕ್ಷಣಗಣನೆ.

ನವದೆಹಲಿ,ಅಕ್ಟೋಬರ್,24,2021(www.justkannada.in): ಟಿ20 ವಿಶ್ವಕಪ್  ಜ್ವರ ಕಾವೇರುತ್ತಿದ್ದು, ಇಂದು ಭಾರತ ಸಾಂಪ್ರದಾಯಿಕ ಎದುರಾಳಿ ಪಾಕ್ ನಡುವೆ ಹೈವೋಲ್ಟೇಜ್ ಕದನ ನಡೆಯಲಿದೆ. ಈ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದೆ.

ಟಿ-20 ವಿಶ್ವಕಪ್ ನಲ್ಲಿ ಭಾರತ-ಪಾಕಿಸ್ತಾನ್ ಐದು ಬಾರಿ ಮುಖಾಮುಖಿಯಾಗಿದೆ. ಐದು ಬಾರಿ ಕೂಡ ಟೀಮ್ ಇಂಡಿಯಾ ಪಾಕ್ ತಂಡದ ವಿರುದ್ಧ ಗೆದ್ದು ಬೀಗಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನದ ವಿರುದ್ದ ಆಡುತ್ತಿದ್ದು, ಪಾಕ್ ವಿರುದ್ಧ ಅಬ್ಬರಿಸಲು ಟೀಂ ಇಂಡಿಯಾ ಆಟಗಾರರು ಸಜ್ಜಾಗಿದ್ದಾರೆ. ಪಾಕಿಸ್ತಾನವೂ ಸಹ ಈ ಬಾರಿ ಗೆಲ್ಲಲೇ ಬೇಕೆಂಬ ಆತ್ಮವಿಶ್ವಾಸದಲ್ಲಿದ್ದು,  ಭಾನುವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿದೆ. ಅಷ್ಟೇ ಅಲ್ಲದೆ ಉಭಯ ತಂಡಗಳಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಕುತೂಹಲ ಕೂಡ ಮನೆ ಮಾಡಿದೆ. ಆದರೆ ಈ ಕುತೂಹಲಕ್ಕೆ ಕಿಚ್ಚು ಹಚ್ಚುವಂತೆ ಪಾಕಿಸ್ತಾನ ತಂಡವು ಒಂದು ದಿನ ಮೊದಲೇ ಭಾರತದ ವಿರುದ್ದ ಆಡಲಿರುವ 12 ಆಟಗಾರರನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದ್ದಾರೆ.

ಬಾಬರ್ ಆಜಂ ಮುನ್ನಡೆಸಲಿರುವ ಈ ಬಳಗದಲ್ಲಿ ಅನುಭವಿ ಶೊಯೇಬ್ ಮಲಿಕ್ ಹಾಗೂ ಹಿರಿಯ ಆಟಗಾರ ಮೊಹಮ್ಮದ್ ಹಫೀಜ್ಗೆ ಸ್ಥಾನ ನೀಡಲಾಗಿದೆ. ಅಷ್ಟೇ ಅಲ್ಲದೆ ಟೀಮ್ ಇಂಡಿಯಾ ವಿರುದ್ದ ಚಾಂಪಿಯನ್ಸ್ ಟ್ರೋಫಿಯಲ್ಲಿ ಶತಕ ಸಿಡಿಸಿದ್ದ ಫಖರ್ ಝಾಮಾನ್ ರನ್ನು ಆಯ್ಕೆ ಮಾಡಲಾಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಹಸನ್ ಹಾಗೂ ಶಾಹಿನ್ ಅಫ್ರಿದಿ ವೇಗಿಗಳಾಗಿದ್ದು, ಇಮಾದ್ ವಾಸಿಂ ಹಾಗೂ ಶಾದಾಬ್ ಖಾನ್ ಸ್ಪಿನ್ನರ್ಗಳಾಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಟೀಂ ಇಂಡಿಯಾ ಗೆಲ್ಲಲೆಂದು ದೇಶಾದ್ಯಂತ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸುತ್ತಿದ್ದು ಕರ್ನಾಟಕದ ಮೈಸೂರು, ಮಂಡ್ಯ,ಚಾಮರಾಜನಗರ, ಕೊಪ್ಪಳ ಸೇರಿದಂತೆ ಹಲವು ಕಡೆಗಳಲ್ಲಿ ಕ್ರಿಕೆಟ್ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.ಇನ್ನು ಸಂಜೆ 7.30ಕ್ಕೆ ದುಬೈನಲ್ಲಿ ಪಂದ್ಯ ಆರಂಭವಾಗಲಿದೆ.

ಭಾರತ ತಂಡ

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪ-ನಾಯಕ), ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ಡಬ್ಲ್ಯುಕೆ), ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರಾಹುಲ್ ಚಹರ್, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ

ಮೀಸಲು ಆಟಗಾರರು: ಶ್ರೇಯರ್ ಅಯ್ಯರ್, ದೀಪಕ್ ಚಹಾರ್, ಅಕ್ಷರ್ ಪಟೇಲ್

ಭಾರತದ ವಿರುದ್ದದ ಪಂದ್ಯಕ್ಕೆ ಪಾಕ್ 12 ರ ಬಳಗ ಹೀಗಿದೆ:

ಬಾಜರ್ ಆಜಂ (ನಾಯಕ), ಮೊಹಮ್ಮದ್ ರಿಜ್ವಾನ್, ಫಖರ್ ಝಾಮಾನ್, ಮೊಹಮ್ಮದ್ ಹಫೀಪ್, ಶೊಯೇಬ್ ಮಲಿಕ್, ಆಸಿಫ್ ಅಲಿ, ಇಮಾದ್ ವಾಸಿಂ, ಶಾದಾಬ್ ಖಾನ್, ಹಸನ್ ಅಲಿ, ಶಾಹಿನ್ ಅಫ್ರಿದಿ, ಹಾರಿಸ್ ರೌಫ್, ಹೈದರ್ ಅಲಿ.

ಭಾರತದ ತಂಡದಲ್ಲಿ ಅನುಭವಿಗಳ ಜತೆ ಹೊಸ ಮುಖಗಳಿಗೂ ಮುಖಗಳಿಗೂ ಮಣೆ ಹಾಕಲಾಗಿದ್ದು, ಐಪಿಎಲ್ ನಲ್ಲಿ ಅಬ್ಬರಿಸಿರುವ ಈ ಯುವ ಆಟಗಾರರು ಟಿ-20 ವಿಶ್ವಕಪ್ ನಲ್ಲು ತಮ್ಮ ಪ್ರದರ್ಶನ ಮುಂದುವರೆಸಬೇಕಿದೆ.

Key words: T-20 World Cup-Highvoltage –battle- between- India – Pakistan- today.