ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್ ಶಿಪ್ : ರಾಜ್ಯಕ್ಕೆ ಕೀರ್ತಿ ತಂದ ಮೈಸೂರಿನ ಈಜುಪಟು

ಮೈಸೂರು,ನವೆಂಬರ್,21,2025 (www.justkannada.in):  ಸಾಧನೆಗೆ ದೈಹಿಕ ಮಿತಿ ಅಡ್ಡಿಯಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಮೈಸೂರಿನ ಪ್ರತಿಭಾನ್ವಿತ ಈಜುಪಟು ಮೋಹಿತ್ ಎಸ್. ಬಿ. ಅವರು ಕ್ರೀಡಾ ಜಗತ್ತಿನಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.

ಇತ್ತೀಚೆಗೆ ಹೈದರಾಬಾದ್ ನಲ್ಲಿ ನಡೆದ 25ನೇ ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್ ಶಿಪ್ ನಲ್ಲಿ, ಮೋಹಿತ್ ಅವರು ಅತ್ಯಂತ ಪೈಪೋಟಿಯ 50 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ರಾಜ್ಯಕ್ಕೆ ಅಪೂರ್ವ ಗೌರವ ತಂದಿದ್ದಾರೆ.

ಈ ಸಾಧನೆಗೆ ಮೋಹಿತ್ ಅವರು ತೋರಿದ ಕಠಿಣ ಪರಿಶ್ರಮ ಮತ್ತು ಮಾನಸಿಕ ದೃಢತೆಯು ಇತರೆ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿದಾಯಕವಾಗಿದೆ. ಮೈಸೂರು ನಗರದ ಜೆ.ಪಿ.ನಗರದಲ್ಲಿರುವ ಜಿ.ಎಸ್.ಎ. ಈಜುಕೊಳದಲ್ಲಿ ಪವನ್ ಕುಮಾರ್ ಮಾರ್ಗದರ್ಶನದಲ್ಲಿ ತರಬೇತಿಯನ್ನು ಮುಂದುವರೆಸುತ್ತಿರುವ ಅವರು, ತೀವ್ರ ಅಭ್ಯಾಸ ಹಾಗೂ ಕಠಿಣ ತರಬೇತಿಯ ಪ್ರಯತ್ನದ ಫಲವೇ ಸಾಧನೆಗೆ ಕಾರಣವಾಗಿದೆ.

ಮೋಹಿತ್ ಅವರ ಈ ಮಹೋನ್ನತ ಯಶಸ್ಸಿಗೆ ತರಬೇತುದಾರರ ಬೆಂಬಲ ಅಸಾಧಾರಣವಾಗಿದೆ. ಹಿರಿಯ ಕೋಚ್ ಗಳಾದ ಶಿವಕುಮಾರ್, ಕಿಶೋರ್, ಪ್ರತಾಪ್, ಹರ್ಷ, ಮತ್ತು ಕೃಷ್ಣ ಅವರು ಇವರ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ.

ಮೈಸೂರಿನ ಗುರುಕುಲ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಬಸವರಾಜು ಎಸ್. ಎಸ್. ಮತ್ತು ತೇಜಸ್ವಿನಿ ಡಿ. ಅವರ ಪುತ್ರರಾಗಿದ್ದಾರೆ. ಶಿಕ್ಷಕರ ಕುಟುಂಬದಿಂದ ಬಂದಿರುವ ಮೋಹಿತ್, ಶಿಕ್ಷಣದ ಜೊತೆಗೆ ಕ್ರೀಡೆಯಲ್ಲೂ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿ, ಪೋಷಕರಿಗೂ, ತರಬೇತಿ ಸಂಸ್ಥೆಗೂ ಹಾಗೂ ಇಡೀ ಕರ್ನಾಟಕಕ್ಕೂ ಹೆಮ್ಮೆ ತಂದಿದ್ದಾರೆ.

Key words: National Para Swimming Championship, Mysore, swimmer