ನವದೆಹಲಿ,ಜನವರಿ,29,2026 (www.justkannada.in): ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ)ಹೊರಡಿಸಿದ್ದ ಹೊಸ ನಿಯಮಗಳಿಗೆ ಸುಪ್ರೀಂಕೋರ್ಟ್ ತಡೆ ನೀಡಿದ್ದು ಈ ಮೂಲಕ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ಯುಜಿಸಿ ಜನವರಿ 13, 2026 ರಂದು ಹೊಸ ನಿಯಮಗಳ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಉತ್ತೇಜನ) ಜಾರಿಗೆ ಅಧಿಸೂಚನೆ ಹೊರಡಿಸಿತ್ತು. ಜಾತಿ ತಾರತಮ್ಯ ಪಿಡುಗು ಹೋಗಲಾಡಿಸಲು ವಿವಿ ಕಾಲೇಜುಗಳಲ್ಲಿ ಸಮಾನತೆ ತರಲು ಹೊಸ ನಿಯಮ ಜಾರಿ ಮಾಡಿತ್ತು.
ಈ ಹೊಸ ಯುಜಿಸಿ ನಿಯಮಗಳ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಮೂರು ಅರ್ಜಿಗಳು ಸುಪ್ರೀಂ ಕೋರ್ಟ್ ಸಲ್ಲಿಕೆಯಾಗಿದ್ದು ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಯುಜಿಸಿ ಹೊಸ ನಿಯಮಗಳಿಗೆ ತಡೆ ನೀಡಿ ವಿಚಾರಣೆಯನ್ನ ಮಾರ್ಚ್ 19ಕ್ಕೆ ಮುಂದೂಡಿಕೆ ಮಾಡಿದೆ.
ಈ ಕುರಿತು ಕೇಂದ್ರ ಸರ್ಕಾರ ಹಾಗೂ ಯುಜಿಸಿಗೆ ನ್ಯಾಯಾಲಯವು ನೋಟಿಸ್ ಜಾರಿ ಮಾಡಿದ್ದು, ಮುಂದಿನ ಆದೇಶದವರೆಗೆ ಹೊಸ ನಿಯಮಗಳು ತಡೆಹಿಡಿಯಲ್ಪಟ್ಟಿರುತ್ತವೆ ಎಂದು ಸ್ಪಷ್ಟಪಡಿಸಿದೆ. ಈ ಮಾರ್ಗಸೂಚಿಗಳು ಸಮಾಜವನ್ನು ವಿಭಜಿಸುವ ಸಾಧ್ಯತೆಯಿದೆ ಮತ್ತು ಗಂಭೀರ ಪರಿಣಾಮ ಬೀರಬಹುದು. ಹೊಸ ನಿಯಮದಿಂದ ದುರುಪಯೋಗವಾಗುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಈ ವಿಷಯದಲ್ಲಿ ಹಸ್ತಕ್ಷೇಪ ಅಗತ್ಯ. 2012ರಲ್ಲಿ ಜಾರಿಯಲ್ಲಿದ್ದ ಮಾರ್ಗಸೂಚಿಗಳು ಸಲಹಾ ಸ್ವರೂಪದ್ದಾಗಿದ್ದು, ಅವು ಮುಂದುವರಿಯುತ್ತವೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ಇಕ್ವಿಟಿ ನಿಯಮಗಳು 2026 ರ ಕುರಿತು ದೇಶಾದ್ಯಂತ ಚರ್ಚೆ ತೀವ್ರಗೊಂಡಿದ್ದು ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆಗಳೂ ನಡೆದಿವೆ. ದೇಶಾದ್ಯಂತ ಈ ನಿಯಮಗಳು ಬೆಂಬಲ ಮತ್ತು ವಿರೋಧ ಎರಡನ್ನೂ ಎದುರಿಸುತ್ತಿರುವ ಸಮಯದಲ್ಲಿ ಸುಪ್ರೀಂಕೋರ್ಟ್ ಈ ಆದೇಶ ಹೊರಡಿಸಿದೆ.
Key words: Supreme Court, stays, UGC, new rules







