ಕನ್ನೇರಿ ಮಠದ ಶ್ರೀಗಳ ವಿರುದ್ದ ಸುಪ್ರೀಂಕೋರ್ಟ್ ಗರಂ: ಮೇಲ್ಮನವಿ ಅರ್ಜಿ ವಜಾ

ನವದೆಹಲಿ,ಅಕ್ಟೋಬರ್,29,2025 (www.justkannada.in): ವಿಜಯಪುರ ಜಿಲ್ಲೆಗೆ ಪ್ರವೇಶಿಸದಂತೆ ವಿಧಿಸಿರುವ ನಿರ್ಬಂಧ ತೆರವಿಗೆ ಕೋರಿ ಕನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

ಕನ್ನೇರಿ ಮಠದ ಸ್ವಾಮೀಜಿ ನಡೆಗೆ  ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌, ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ ಎಂದು ಸಲಹೆ ನೀಡಿದೆ. ಲಿಂಗಾಯತ ಸ್ವಾಮೀಜಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿನ್ನೆಲೆ ವಿಜಯಪುರ ಜಿಲ್ಲೆಗೆ ಪ್ರವೇಶಿಸದಂತೆ ಕನ್ನೇರಿ ಶ್ರೀಗಳಿಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು.ಇದನ್ನು ಪ್ರಶ್ನಿಸಿ ಸ್ವಾಮೀಜಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನ ವಜಾಗೊಳಿಸಿದ ಸುಪ್ರೀಂಕೋರ್ಟ್ ನ್ಯಾ. ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಅವರಿದ್ದ ಪೀಠ, ಸ್ವಾಮೀಜಿ ನೀಡಿದ್ದ ಕೀಳುಮಟ್ಟದ ಹೇಳಿಕೆ ಸರಿಯಲ್ಲ. ಪ್ರಚೋದನಕಾರಿ ಹೇಳಿಕೆ ನೀಡಿರುವುದು ನಿಮ್ಮ ಘನತೆಗೆ ತಕ್ಕುದಲ್ಲ ಎಂದು ತರಾಟೆ ತೆಗೆದುಕೊಂಡಿದೆ.

ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ ನ್ಯಾಯಪೀಠ,  ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ನೀವು ಒಳ್ಳೆಯ ಪ್ರಜೆಯಲ್ಲ. ಅವಹೇಳನಕಾರಿ ಭಾಷೆ ಬಳಸಿದ್ದೀರಿ. ವಾಕ್ ಸ್ವಾತಂತ್ರ್ಯ ವ್ಯಾಪ್ತಿಯಲ್ಲಿಲ್ಲ. ನೀವು ಮಾತನಾಡುವುದು ನಿಲ್ಲಿಸಿ ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ ಎಂದು  ಸಲಹೆ ನೀಡಿತು.

Key words: Supreme Court, Kanneri Mutt, Swamiji,  petition, dismissed