ಓಮನ್ ಸುಲ್ತಾನ ನಿಧನ, ನಾಳೆ ದೇಶಾದ್ಯಂತ ಶೋಕಾಚರಣೆ

ನವದೆಹಲಿ, ಜನವರಿ 12, 2019 (www.justkannada.in):  ಆಧುನಿಕ ಅರಬ್ ಜಗತ್ತಿನ ದೀರ್ಘಾವಧಿ ನಾಯಕರಾಗಿದ್ದ ಓಮನ್ ಸುಲ್ತಾನ ಕಾಬೂಸ್ ಬಿನ್ ಸೈದ್ ಅಲ್‍ಸೈದ್(79) ನಿಧನದ ಗೌರವಾರ್ಥ ನಾಳೆ ದೇಶಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯ ಇಂದು ಬೆಳಗ್ಗೆ ಈ ಆದೇಶ ಹೊರಡಿಸಿದ್ದು, ನಾಳೆ ಭಾರತದಾದ್ಯಂತ ಓಮನ್ ಸುಲ್ತಾನರ ಗೌರವಾರ್ಥ ರಾಷ್ಟ್ರೀಯ ಶೋಕಾಚರಣೆ ಆಚರಿಸಲಾಗುವುದು ಎಂದು ತಿಳಿಸಿದೆ.

ಶೋಕಾಚರಣೆ ಸಂದರ್ಭದಲ್ಲಿ ಸಂಸತ್ ಭವನ, ಆಯಾ ರಾಜ್ಯಗಳ ವಿಧಾನಸೌಧ ಮತ್ತು ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧ ಮಟ್ಟಕ್ಕೆ ಹಾರಿಸಲಾಗುವುದು.

1970ರಲ್ಲಿ ಅರಮನೆಯಲ್ಲಿ ನಡೆದ ಕ್ಷಿಪ್ರ ಕ್ರಾಂತಿಯಲ್ಲಿ ತಂದೆಯನ್ನು ಪದಚ್ಯುತಗೊಳಿಸಿ ಕಾಬೂಸ್ ಅರಸೊತ್ತಿಗೆಯ ಗದ್ದುಗೇರಿದ್ದರು. ಆಗಿನಿಂದ ಅವರು ಬಹುತೇಕ ಐದು ದಶಕಗಳ ಕಾಲ ಓಮನ್ ಸುಲ್ತಾನರಾಗಿ ಅಧಿಕಾರದಲ್ಲಿ ಮುಂದುವರೆದಿದ್ದರು.

ಕಾಬೂಸ್‍ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಮಂತ್ರಿಗಳು ಮತ್ತು ಇತರ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದ್ದಾರೆ.