ಮೈಸೂರು,ಜನವರಿ,10,2026 (www.justkannada.in) : ಸಮಾಜದಲ್ಲಿ ಸಂವಿಧಾನ ಜಾಗೃತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಬಹುರೂಪಿ ಅಂಗವಾಗಿ ಬೀದಿ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಇಂದು ನಗರದ ಚಿಕ್ಕ ಗಡಿಯಾರದ ಬಳಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ರಂಗ ನಿರ್ದೇಶಕ ಹಾಗೂ ಕಲಾವಿದ ಮೈಮ್ ರಮೇಶ್ ಅವರು, ಡಾ.ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ, ಸಂವಿಧಾನದ ಮೌಲ್ಯಗಳು ಹಾಗೂ ಮಾನವೀಯತೆಯ ಸಂದೇಶಗಳನ್ನು ಜನರಿಗೆ ತಲುಪಿಸಲು ಬೀದಿ ನಾಟಕ ಅತ್ಯಂತ ಪರಿಣಾಮಕಾರಿ ಮಾಧ್ಯಮವಾಗಿದೆ ಎಂದರು.
ಇಂತಹ ಬೀದಿ ನಾಟಕಗಳನ್ನು ಹೆಚ್ಚು ಹೆಚ್ಚು ಆಯೋಜಿಸಬೇಕು. ವಿಶೇಷವಾಗಿ ಶಾಲಾ ಹಾಗೂ ಕಾಲೇಜುಗಳಲ್ಲಿ ಈ ರೀತಿಯ ನಾಟಕಗಳನ್ನು ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು ಮಹಾನಗರ ಪಾಲಿಕೆ ಪರಿಸರ ಇಂಜಿನಿಯರ್ ಮೈತ್ರಿ ಅವರು, ಇಂದಿನ ಯುವಕರು ಅಗತ್ಯಕ್ಕಿಂತ ಹೆಚ್ಚು ಸಾಮಾಜಿಕ ಮಾಧ್ಯಮವನ್ನು ಉಪಯೋಗ ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಯುವಜನತೆ ಇಂತಹ ಬೀದಿ ನಾಟಕಗಳನ್ನು ಗಮನದಿಂದ ವೀಕ್ಷಿಸಿ, ಅದರ ಹಿನ್ನೆಲೆ ಮತ್ತು ಸಂದೇಶಗಳನ್ನು ಅರ್ಥಮಾಡಿಕೊಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ, ಸಹಾಯಕ ನಿರ್ದೇಶಕ ಡಾ. ಎಂ.ಡಿ. ಸುದರ್ಶನ್ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಬೀದಿ ನಾಟಕ ಪ್ರದರ್ಶನಕ್ಕೆ ಶುಭ ಹಾರೈಸಿದರು.
ಬಹುರೂಪಿ ಬಾಬಾ ಸಾಹೇಬ್ ಬೀದಿ ನಾಟಕ ಪ್ರದರ್ಶನದಲ್ಲಿ ವಿವಿಧ ಕಲಾತಂಡಗಳು ಕಾಲ ನಾಟಕ ಪ್ರದರ್ಶಿಸಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಪಡೆದುಕೊಂಡರು.
Key words: Street drama, BR Ambedkar, ideology, Mysore







