ಮೈಸೂರು ಅಗಸ್ಟ್, 25,2025 (www.justkannada.in): ಮೈಸೂರು ಜಿಲ್ಲೆಯಲ್ಲಿ ಸೆಪ್ಟೆಂಬರ್ 06 ರಂದು ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಲಾಗುತ್ತಿದೆ. ನಿರುದ್ಯೋಗಿ ಯುವಕ ಯುವತಿಯರು ಇದರ ಸದುಪಯೋಗವನ್ನು ಪಡೆದುಕೊಂಡು ಉದ್ಯೋಗಿಗಳಾಗಿ ಎಂದು ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಬೃಹತ್ ಉದ್ಯೋಗ ಮೇಳ ಆಯೋಜನೆ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಡಿಸಿ ಲಕ್ಷ್ಮೀಕಾಂತ ರೆಡ್ಡಿ, ನಿರುದ್ಯೋಗ ಯುವಕ ಯುವತಿಯರ ನೊಂದಣಿ ಪ್ರಕ್ರಿಯೆ ಪ್ರಾರಂಭ ಮಾಡಬೇಕು. ನೋಂದಣಿ ಪ್ರಕ್ರಿಯೆಯ ಡ್ರೈವ್ ಮಾಡಿಸಬೇಕು. ನೋಂದಣಿ ಪ್ರಕ್ರಿಯೆಗೆ ಲಿಂಕ್ ನೀಡಲಾಗುವುದು. ಬೃಹತ್ ಮೇಳದಲ್ಲಿ 120ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುವವು ಎಂದು ಮಾಹಿತಿ ನೀಡಿದರು.
ಉದ್ಯೋಗ ಮೇಳ ಕೇವಲ ಪದವಿ ಪಡೆದವರಿಗೆ ಮಾತ್ರವಲ್ಲ. ಎಸ್ ಎಸ್ ಎಲ್ ಸಿ, ಪಿಯುಸಿ ವಿದ್ಯಾರ್ಹತೆ ಹೊಂದಿರುವ ನಿರುದ್ಯೋಗಿಗಳು ಸಹ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ಪಡೆಯಬಹುದಾಗಿದೆ. ಯುವ ನಿಧಿಯಲ್ಲಿ ನೋಂದಣಿ ಆಗಿರುವವರನ್ನು ನೊಂದಣಿ ಮಾಡಿಸಿ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಮಾಡಬೇಕು. ಉದ್ಯೋಗ ಮೇಳದ ಯಶಸ್ವಿಗೆ ಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯಲ್ಲಿ ಇರುವ ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್ ಯುಕೇಶ್ ಕುಮಾರ್ ಅವರು ಮಾತನಾಡಿ ಜಿಲ್ಲೆಯಲ್ಲಿ 12 ಸಾವಿರ ನಿರುದ್ಯೋಗಿಗಳು ಯುವನಿಧಿ ಯೋಜನೆಯಡಿ ನೋಂದಣಿ ಆಗಿದ್ದಾರೆ. ಇವರೆಲ್ಲರನ್ನೂ ಉದ್ಯೋಗ ಮೇಳದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಮಾಹಿತಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ಕೇವಲ ನೋಂದಣಿ ಆಗುವುದು ಮಾತ್ರವಲ್ಲ ಅವರೆಲ್ಲರೂ ಉದ್ಯೋಗ ಮೇಳದಲ್ಲಿ ಭಾಗವಹಿಸುವಂತೆ ಉದ್ಯೋಗ ವಿನಿಮಯ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ಇರುವ ಖಾಸಗಿ ಕಂಪನಿಗಳು ಎನ್ ರೋಲ್ ಆಗುವಂತೆ ಕೈಗಾರಿಗೆ ಇಲಾಖೆಯ ಜಂಟಿ ನಿರ್ದೇಶಕರು ಕ್ರಮ ವಹಿಸುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶೇಕ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಗಳಾದ ಪಿ ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
Key words: State-level, job fair, September 6,Mysore, DC