ಮತದಾನಕ್ಕೆ ರಾಜ್ಯ ಸಜ್ಜು: ಪೊಲೀಸ್ ಮತ್ತು ಚುನಾವಣಾ ಆಯೋಗದ ಕಟ್ಟೆಚ್ಚರ..

ಬೆಂಗಳೂರು,ಮೇ,9,2023(www.justkannada.in): ನಾಳೆ ನಡೆಯುವ ವಿಧಾನಸಭೆ ಚುನಾವಣೆಗೆ 5.30 ಕೋಟಿ ಅರ್ಹ ಮತದಾರರು ತಮ್ಮ ಹಕ್ಕು ಚಲಾಯಿಸಲು ಸಜ್ಜಾಗಿದ್ದು, 224 ಕ್ಷೇತ್ರಗಳಲ್ಲಿ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿದೆ.

ಮತದಾನ ನ್ಯಾಯ ಸಮ್ಮತ ಹಾಗೂ ಶಾಂತಿಯುತವಾಗಿರುವಂತೆ ನೋಡಿಕೊಳ್ಳಲು ಚುನಾವಣಾ ಆಯೋಗ ಮತ್ತು ಪೋಲಿಸ್ ಇಲಾಖೆ ಹದ್ದಿನ ಕಣ್ಣಿಟ್ಟಿದೆ. ಒಟ್ಡು 2613 ಅಭ್ಯರ್ಥಿಗಳು ಕಣದಲ್ಲಿದ್ದು ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.  ಇದರಲ್ಲಿ 2427 ಪುರುಷರು, 184 ಮಹಿಳಾ ಅಭ್ಯರ್ಥಿಗಳು. ಇಬ್ಬರು ಇತರರು ವರ್ಗಕ್ಕೆ ಸೇರಿದವರು.

ಆಡಳಿತಾರೂಢ ಬಿಜೆಪಿ 224 ಕ್ಷೇತ್ರದಲ್ಲಿ ಸ್ಪರ್ದಿಸುತ್ತಿದ್ದರೆ, ಅಧಿಕಾರದ ಗದ್ದುಗೆಯಿಂದ ಬಿಜೆಪಿಯನ್ನು ಇಳಿಸಲೇಬೇಕು, ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಪಣ ತೊಟ್ಟಿರುವ ಕಾಂಗ್ರೆಸ್ 223 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಡಣ್ಣಯ್ಯ ನವರನ್ನು ಮೇಲುಕೋಟೆಯಲ್ಲಿ ಬೆಂಬಲಿಸಿದೆ.

ಜೆಡಿಎಸ್ 207 ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದು, 123 ಸ್ಥಾನ ಗೆದ್ದು ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಕನಸು ಹೊತ್ತಿದೆ. ಆಮ್ ಆದ್ಮಿ ಪಕ್ಷ 209, ಬಹುಜನ್ ಸಮಾಜವಾದಿ ಪಕ್ಷ 133 ಕ್ಷೇತ್ರದಲ್ಲಿ ಸೆಣಸುತ್ತಿದೆ.

ಬಹುಜನ್ ಸಮಾಜವಾದಿ ಪಕ್ಷದ ಸ್ಪರ್ಧೆ ಕಾಂಗ್ರೆಸ್ ಗೆ ತೊಡಕಾಗಬಹುದು. ಆಮ್ ಆದ್ಮಿ ಪಕ್ಷ ಬಿಜೆಪಿಯ ಕನಸಿಗೆ ತಣ್ಣೀರೆರಚಬಹುದು ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.

ಕಾಂಗ್ರೆಸ್ ಮತ್ತು ಬಿಜೆಪಿ 150 ಸ್ಥಾನ ಗೆಲ್ಲುವ ಗುರಿಯನ್ನು ಹೊಂದಿವೆ. ಕರ್ನಾಟಕದ ಚುನಾವಣಾ ಇತಿಹಾಸವನ್ನೊಮ್ಮೆ ಅವಲೋಕಿಸಿದರೆ, 1985 ರ ನಂತರ ನಡೆದ ಯಾವುದೇ ಚುನಾವಣೆಯಲ್ಲಿ ಆಡಳಿತಾರೂಢ ಪಕ್ಷ ಅಧಿಕಾರ ಉಳಿಸಿಕೊಂಡಿದ್ದೇ ಇಲ್ಲ. ಆಡಳಿತ ವಿರೋಧಿ ಅಲೆಯಲ್ಲಿ ಕೊಚ್ಚಿ ಹೋಗಿವೆ.

ಈ ಬಾರಿ ಬಿಜೆಪಿ ವಿರುಧ್ದ ಎದ್ದಿರುವ ಆಡಳಿತ ವಿರೋಧಿ ಅಲೆ ಬಲು ಹೆಚ್ಚಿನ ಮಟ್ಟದ್ದು ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಇದಕ್ಕೆ ಕಾರಣ, ಬಿಜೆಪಿ ಪಕ್ಷ ಹೀನಾಯವಾಗಿ ಯಡಿಯೂರಪ್ಪ ನವರನ್ನು ಪದಚ್ಯುತಗೊಳಿಸಿ, ವರ್ಚಿಸ್ಸಿಲ್ಲದ ಬಸವರಾಜ ಬೊಮ್ಮಾಯಿಯವರಿಗೆ ಪಟ್ಟ ಕಟ್ಟಿದ್ದು. ಯಡಿಯೂರಪ್ಪನವರ ಪದಚ್ಯುತಿ ಲಿಂಗಾಯತ ಸಮುದಾಯವನ್ನು ಸಿಟ್ಡಿಗೆಬ್ಬಿಸಿದೆ. ಬಿಜೆಪಿಗೆ ದಕ್ಷಿಣ ಭಾರತದ ರಾಜ್ಯದಲ್ಲಿ ಅಧಿಕಾರದ ರುಚಿ ತೋರಿಸಿದ ವ್ಯಕ್ತಿಗೆ ಇಂತಹ ಅವಮಾನವೇ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.

ಬಸವರಾಜ ಬೊಮ್ಮಾಯಿಯವರು ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ದಡಕ್ಕೆ ಮುಟ್ಟಿಸಲಾರರು ಎಂಬ ಸೂಚನೆ ಸಿಕ್ಕ ಬಿಜೆಪಿಯ ವರಿಷ್ಠ ಮಂಡಳಿಯ ನಾಯಕರು ಯಡಿಯೂರಪ್ಪನವರಿಗೆ ಚುನಾವಣಾ ಸಾರಥ್ಯ ನೀಡಿದರೂ, ಲಿಂಗಾಯಿತರು ಇದನ್ನು ಒಪ್ಪಿದಂತೆ ಗೋಚರಿಸುತ್ತಿಲ್ಲ. ಇದಕ್ಕೆ ಕಾರಣ, ಬಿಜೆಪಿ ಅಕಸ್ಮಾತ್ ಅಧಿಕಾರಕ್ಕೆ ಮರಳಿ ಬಂದರೆ, ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಿಲ್ಲ. ಬಿಜೆಪಿ ತನ್ನಿಂದ ತಾನೇ ಇನ್ನೂ ಕೆಲವು ಸಂಕಷ್ಟಗಳನ್ನು ಮೈ ಮೇಲೆ ಎಳೆದುಕೊಂಡಿತು ಎಂದೇ ಭಾವಿಸಲಾಗಿದೆ.

ಸಜ್ಜನ ಜಗದೀಶ್ ಶೆಟ್ಟರ್ ಮತ್ತು ಲಕ್ಷಣ ಸವದಿಯವರಿಗೆ ಟಿಕೆಟ್ ನಿರಾಕರಿಸಿದ್ದು. ಈ ಇರ್ವರು ಕಾಂಗ್ರೆಸ್ ಸೇರಿ ‘ಕೈ’ ಪಕ್ಷಕ್ಕೆ ಬಲ ತುಂಬುವಂತಾದದು ಬಿಜೆಪಿ ತಪ್ಪಿನಿಂದ ಎಂದು ವಿಷ್ಲೇಶಿಸಲಾಗುತ್ತಿದೆ. ಶೆಟ್ಟರ್ ಮತ್ತು ಸವದಿಯವರು ನೀಡಿದ ಶಾಕ್ ನಿಂದ ಸಾವರಿಸಿಕೊಳ್ಳಲು ಬಿಜೆಪಿ ತಡಕಾಡುತ್ತಿದೆ

ಸ್ವತಃ ಶೆಟ್ಟರ್ ರವರು ಅಭಿಪ್ರಾಯ ಪಟ್ಟಂತೆ, ಕನಿಷ್ಠ 25 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಅವರಿಂದ ಅನುಕೂಲ ಅಗಲಿದೆ ಎಂದು. ಶೆಟ್ಟರ್ ಮತ್ತು ಸವದಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಬಲ ಲಿಂಗಾಯತ ನಾಯಕರು ಅನ್ನುವುದನ್ನು ಅಲ್ಲಗಳೆಯಲಾಗದು.

ಈ ಬಾರಿ ರಾಜ್ಯದಲ್ಲಿ ನಡೆದಿರುವ ಚುನಾವಣೆ ಯಾವ ಯಾವ ವಿಷಯಗಳು ಪ್ರಭಾವ ಬೀರಿವೆ ಎಂದರೆ, ಬೆಲೆ ಏರಿಕೆ, ಭ್ರಷ್ಟಾಚಾರ, ಬಿಜೆಪಿ ಸರ್ಕಾರದ ವೈಪಲ್ಯಗಳು, ಎಂಬುದು ಕಾಂಗ್ರೆಸ್ ವಾದ. ಡಬಲ್ ಇಂಜಿನ್ ಸರ್ಕಾರಕ್ಕೆ ಮತ ನೀಡಿ, ಈ ಬಾರಿಯ ನಿರ್ಧಾರ ಬಿಜೆಪಿಯ ಬಹುಮತದ ಸರ್ಕಾರ ಇದು ಪ್ರಧಾನಿ ಮೋದಿ ಯವರ ಚುನಾವಣಾ ಘೋಷಣೆ.

ತಮ್ಮ ಪಕ್ಷದ ಸರ್ಕಾರ ದ ವಿರುದ್ದ ಎದ್ದಿರುವ ಆಡಳಿತ‌ ವಿರೋಧಿ ಅಲೆಯನ್ನು ಗಮನಿಸಿಯೇ ಬಹುಶಃ ಪ್ರಧಾನಿಯವರು ರಾಜ್ಯದಲ್ಲಿ ಹಲವು ದಿನ ಪ್ರಚಾರ ಮಾಡಿದರು. ಮೋದಿ ಪ್ರಚಾರ ಬಿಜೆಪಿಗೆ ಮತ ತಂದು ಕೊಟ್ಟಿತೇ ಇಲ್ಲವೇ ಎಂಬುದು ಮೇ 13 ರಂದು ಗೊತ್ತಾಗುತ್ತದೆ

ಮೋದಿ, ಅಮಿತ್ ಶಾ ರವರ ಮ್ಯಾಜಿಕ್‌ ರಾಜಸ್ಥಾನ, ಮಧ್ಯಪ್ರದೇಶ, ತಮಿಳುನಾಡು, ಛತ್ತಿಸ್ ಗಢ್, ಕೇರಳ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ರಾಜ್ಯದಲ್ಲಿ ನಡೆಯಲಿಲ್ಲ ಎಂಬುದನ್ನು ಬಿಜೆಪಿಗರೆ ಮರೆತಿಲ್ಲ ಎಂದರೆ ಬೇರೆಯವರು ಮರೆಯುವರೆ?

ಬಿಜೆಪಿ ಪಕ್ಷ ಈ ಬಾರಿ ಬಹುತೇಕ ಪ್ರಚಾರದ ಸರಕನ್ನಾಗಿ ಬಳಸಿದ್ದು ಧರ್ಮಾಧಾರಿತ ವಿಚಾರಗಳು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಮೋದಿಯವರು ಸೇರಿದಂತೆ ಯಾರೂ ಪ್ರಸ್ತಾಪಿಸಲಿಲ್ಲ. ಲಿಂಗಾಯಿತರ ವಿಷಯ, ಭಜರಂಗಿ ವಿಷಯ ಹೀಗೆ ಸಾಗಿತ್ತು ಧರ್ಮ ದಂಗಲ್ ಚುನಾವಣೆ.

ಯಾವುದೇ ಆಡಳಿತಾರೂಢ ಪಕ್ಷ ತನ್ನ ಸಾಧನೆಯ ಆಧಾರದಲ್ಲಿ ಮತಯಾಚಿಸಬೇಕು. ಬಿಜೆಪಿ ವಿಚಾರದಲ್ಲಿ ಈ ಬಾರಿ ಆ ರೀತಿ ಆಗಲೇ ಇಲ್ಲ. 2004 ರಲ್ಲಿ ಎಸ್ ಎಂ ಕೃಷ್ಣ ಸರಕಾರ ತನ್ನ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟು ಮತಯಾಚಿಸಿತ್ತು. 2018 ರಲ್ಲಿ ಸಿದ್ದರಾಮಯ್ಯ ತನ್ನ ಕಾಂಗ್ರೆಸ್ ಸರ್ಕಾರ ನೀಡಿದ ಜನಪರ ಕಾರ್ಯವನ್ನು ಮತದಾನ ಮುಂದಿಟ್ಟು ಮತಯಾಚಿಸಿತ್ತು. ಎಸ್ ಎಂ ಕೃಷ್ಣ, ಸಿದ್ದರಾಮಯ್ಯ ನವರು ಚುನಾವಣೆಯಲ್ಲಿ ಅವರ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಸೋತಿರಬಹುದು ಆದರೆ, ಧರ್ಮ ಆಧಾರಿತ ವಿಷಯಗಳನ್ನು ಮತಗಳಿಕೆಗೆ ಉಪಯೋಗಿಸಿರಲಿಲ್ಲ. ಕರ್ನಾಟಕದ ಮತದಾರ ಧರ್ಮ ದಂಗಲ್ ವಿಷಯಗಳಿಂದ ಎಂದೂ ಪ್ರಭಾವಿತನಾಗಿ ಮತ ಚಲಾಯಿಸಿದ ನಿದರ್ಶನ ಇದುವರೆವಿಗೂ ಮಾಡಿಲ್ಲ. ಮಂದಿರ, ಮಸೀದಿ, ವಿಷಯಗಳು ರಾಜ್ಯದ ಚುನಾವಣೆಯನ್ನು ನಡೆಸಿಲ್ಲ. ಮೇ 13 ರವರೆವಿಗೂ ಕಾದು ನೋಡಲೇಬೇಕು ಮತದಾರ ಪ್ರಭುವಿನ ನಿರ್ಣಯಕ್ಕೆ.

ಈ ಬಾರಿಯ ಚುನಾವಣಾ ಪ್ರಚಾರದ ವಿಶೇಷ ವೆಂದರೆ 91ರ ಪ್ರಾಯದ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡರ ಸಕ್ರಿಯ ರಂಗ ಪ್ರವೇಶ, ಹಾಗೂ ಹಳೇ ಮೈಸೂರು ಭಾಗದಲ್ಲಿ ಪ್ರಚಾರ ಮಾಡಿ ತಮ್ಮ ಪುತ್ರ ಕುಮಾರಸ್ವಾಮಿಯ ಜವಾಬ್ದಾರಿಗೆ ಹೆಗಲು ನೀಡಿದ್ದು. ಇಂತಹ ಮುಪ್ಪಿನ ವಯಸ್ಸಲೂ, ತಮ್ಮ ಅನಾರೋಗ್ಯವನ್ನೂ ಬದಿಗಿಟ್ಟು, ಸಮರ ಕಣಕ್ಕೆ ಧುಮುಕಿದರು ಗೌಡರು.

ಜೆಡಿಎಸ್ ಗೆ ಒಬ್ಬರೆ ಸಾರಥಿ, ಅದು ಕುಮಾರಸ್ವಾಮಿ ಮಾತ್ರ. ಅವರ ಸಹೋದರ ರೇವಣ್ಣ ಹಾಸನಕ್ಕೆ ಸೀಮಿತ. ಜೆಡಿಎಸ್ ಗೆ ಈ ಚುನಾಚಣೆ ಅತಿ ದೊಡ್ಡ ಸವಾಲು. ಒಂದೆಡೆ ಹಳೆ ಮೈಸೂರು ಭಾಗದಲ್ಲಿ ಪಕ್ಷ ತಾನು ಇದುವರೆವಿಗೂ ಗಳಿಸಿರುವ ಪ್ರಾಬಲ್ಯವನ್ನು ಉಳಿಸಿಕೊಳ್ಳಲು ಹೆಣಗಾಡುವ ಸ್ಥಿತಿ. ಒಕ್ಕಲಿಗ ಸಮುದಾಯದ ಡಿ.ಕೆ‌ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರಾದ ಕಾರಣ, ಅವರೂ ಸಹ ತಮ್ಮ ಸಮುದಾಯವನ್ನು ಕಾಂಗ್ರೆಸ್ ಕಡೆ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಇದು ದೇವೇಗೌಡರ ಪಕ್ಷಕ್ಕೆ ಸಂಕಷ್ಟ ತಂದೊಡ್ಡಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಜೆಡಿಎಸ್ ಪಕ್ಷ 2004ರಲ್ಲಿ 58 ಸ್ಥಾನ ಗೆದ್ದು ಮಾಡಿದ್ದ ಸಾಧನೆಯನ್ನು ಇದುವರೆವಿಗೂ ಮಾಡಲಾಗಲಿಲ್ಲ. _2004 ರಲ್ಲಿ ಜಾತ್ಯಾತೀತ ಜನತಾದಳ ಪಕ್ಷದಲ್ಲಿ ದಿಗ್ಗಜ ನಾಯಕರಾದ ಎಂ ಪಿ ಪ್ರಕಾಶ್, ಸಿದ್ದರಾಮಯ್ಯ, ಪಿಜಿಆರ್‌ ಸಿಂಧ್ಯ ಇದ್ದರು. ಈಗ ಇವರು ಯಾರೂ ಈ ಪಕ್ಷದಲ್ಲಿ ಇಲ್ಲ. ಕುಮಾರಸ್ವಾಮಿ ಯವರು ಪಂಚರತ್ನಯಾತ್ರೆಯ ಮೂಲಕ ಅಬ್ಬರದ ಪ್ರಚಾರ ಮಾಡಿದ್ದಾರೆ.

ಕಾಂಗ್ರೆಸ್, ಬಿಜೆಪಿಗೆ ಬಂಡಾಯದ ಭೀತಿ ಸಹ ಇದೆ.  ಅತಂತ್ರ ಫಲಿತಾಂಶ ಬಾರದಿರಲಿ ಎಂಬುದೇ ಕಾಂಗ್ರೆಸ್ ಬಿಜೆಪಿಯ ಪ್ರಾರ್ಥನೆ.  ಕೆಲವು ಮಾಧ್ಯಮಗಳು ಈಗಾಗಲೇ ಅತಂತ್ರ ಫಲಿತಾಂಶ ಬರಲಿದೆ, ಕಾಂಗ್ರೆಸ್ ಗೆ ಬಹುಮತ, ಬಿಜೆಪಿಗೆ ಬಹುಮತ ಎಂದು ದಿನಕೊಂದು ತರ ಸುದ್ದಿ ಬಿತ್ತರ ಮಾಡುತ್ತಿವೆ.

M.SIDDARAJU, SENIOR JOURNALIST

 

ಎಂ.ಸಿದ್ಧರಾಜು.

ಹಿರಿಯ ಪತ್ರಕರ್ತರು, ಬೆಂಗಳೂರು

 

 

 

Key words: State- assembly-election-Police – Election -Commission