ಮೈಸೂರು,ಮೇ.9,2025 (www.justkannada.in): 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರಲ್ಲಿ ಪೂರ್ಣ ಉತ್ತೀರ್ಣತೆ ಹೊಂದಿರದ ವಿದ್ಯಾರ್ಥಿಗಳಿಗೆ ಮೇ 26 ರಿಂದ ಜೂನ್ 02 ರವರೆಗೆ ಪರೀಕ್ಷೆ-2 ನಡೆಯಲಿದ್ದು ನೋಂದಣಿಗೆ ನಾಳೆಯೇ(ಮೇ 10) ಕಡೇ ದಿನವಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಈ ಪರೀಕ್ಷೆಗೆ ಎಲ್ಲಾ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದ ಶಾಲೆಗಳಲ್ಲಿ ಶುಲ್ಕ ರಹಿತವಾಗಿ ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ಅವಕಾಶ ಕಲ್ಪಿಸಿದ್ದು, ಮೇ 10 ರಂದು ನೋಂದಣಿಗೆ ಅಂತಿಮ ದಿನಾಂಕವಾಗಿರುತ್ತದೆ. ಜಿಲ್ಲೆಯಲ್ಲಿನ ಎಲ್ಲಾ ಶಾಲೆಗಳಲ್ಲಿ ಪೂರ್ಣ ಉತ್ತೀರ್ಣತೆ ಹೊಂದಿರದ ವಿದ್ಯಾರ್ಥಿಗಳು ಪರೀಕ್ಷೆ-2ಕ್ಕೆ ಕಡ್ಡಾಯವಾಗಿ ನೋಂದಣಿ ಮಾಡಿಸಲು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಂಬಂಧ ಪಟ್ಟ ಶಾಲಾ ಮುಖ್ಯ ಶಿಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಉಪ ನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಮೈಸೂರು ರವರು ಅನುಪಾಲನೆ ಮಾಡಿ ಯಾವುದೇ ವಿದ್ಯಾರ್ಥಿ ಪರೀಕ್ಷೆ-2 ರ ನೋಂದಣಿಯಿoದ ವಂಚಿತರಾಗದಂತೆ ಕ್ರಮವಹಿಸಬೇಕು ಎಂದು ಸೂಚಿಸಿದ್ದಾರೆ.
2024-25 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರಲ್ಲಿ ಹಾಜರಾತಿ ಕೊರತೆಯಿಂದ ಪರೀಕ್ಷೆ ತೆಗೆದುಕೊಳ್ಳಲು ಸಾಧ್ಯವಾಗದೆ ಇರುವ ಹಾಗೂ ಮಾರ್ಚ್ 01.2025 ಕ್ಕೆ 15 ವರ್ಷ ತುಂಬಿದ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ-2 ಗೆ ಖಾಸಗಿ ಅಭ್ಯರ್ಥಿಯಾಗಿ ನೋಂದಣಿ ಮಾಡಿಕೊಳ್ಳಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಇವರು ಅವಕಾಶ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Key words: SSLC Exam-2, May 26, registration, May 9, Last day