ಬೆಂಗಳೂರು,ಮಾರ್ಚ್,27,2026 (www.justkannada.in): ಈ ವರ್ಷದಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆಯ ಅಂಕಗಳಿಗೆ ಕೋಕ್ ನೀಡಲಾಗಿದ್ದು 625 ಅಂಕಗಳ ಬದಲು 525 ಅಂಕಗಳು ಮಾತ್ರ ಇರಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಚಿವ ಮಧು ಬಂಗಾರಪ್ಪ, ಈ ವರ್ಷದಿಂದ ಹಿಂದಿ ಅಂಕ ಪರಿಗಣಿಸಲ್ಲ ಈ ಬಾರಿಯಿಂದ ಎಸ್ ಎಸ್ ಎಲ್ ಸಿ 625ರ ಬದಲು 525 ಅಂಕಕ್ಕೆ ಸೀಮಿತವಾಗಲಿದೆ. ಹಿಂದಿ ಅಂಕಗಳನ್ನ ಪರಿಗಣಿಸಲ್ಲ. ಹಿಂದಿ ಪರೀಕ್ಷೆ ನಡೆಯಲಿದೆ. ಅದರೆ ಅಂಕ ಪರಿಗಣಿಸಲ್ಲ ಹಿಂದಿ ವಿಷಯಕ್ಕೆ ಗ್ರೇಡ್ ಮಾತ್ರ ನೀಡಲಾಗುತ್ತೆ ಸಿಎಂ ಜತೆ ಚರ್ಚೆ ಮಾಡಿ ನಿರ್ಧಾರ ಮಾಡಲಾಗುತ್ತದೆ ಎಂದರು.
ಈವರೆಗೆ 625 ಅಂಕಗಳ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ 100 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇನ್ಮುಂದೆ ತೃತೀಯ ಭಾಷೆಯಲ್ಲಿ ಪಾಸ್ ಅಥವಾ ಫೇಲ್ ಎಂಬ ಪದ್ಧತಿ ಇರುವುದಿಲ್ಲ. ಅಂದರೆ, ಅಂತಿಮ ಫಲಿತಾಂಶದ ಅಂಕಗಳಿಗೆ ತೃತೀಯ ಭಾಷೆಯ ಅಂಕಗಳನ್ನು ಪರಿಗಣಿಸಲಾಗುವುದಿಲ್ಲ. ಬದಲಾಗಿ ಗ್ರೇಡಿಂಗ್ (ಉದಾಹರಣೆಗೆ: ಎ, ಬಿ, ಸಿ, ಡಿ) ನೀಡಲಾಗುತ್ತದೆ,” ಎಂದು ಸಚಿವರು ಸ್ಪಷ್ಟಪಡಿಸಿದರು.
ಇನ್ನು ಎಸ್ ಎಸ್ ಎಲ್ ಸಿಗೆ ಮಾತ್ರ ಈ ಮಾದರಿ ಅನುಸರಿಸಲಾಗಿದ್ದು ಉಳಿದ ತರಗತಿಗಳಿಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಹಿಂದಿ, ಸಂಸ್ಕೃತ, ತುಳು, ಮರಾಠಿ, ಅರೇಬಿಕ್ ಸೇರಿದಂತೆ ಪಠ್ಯಕ್ರಮದಲ್ಲಿರುವ ಎಲ್ಲಾ ತೃತೀಯ ಭಾಷೆಗಳಿಗೂ ಈ ನಿಯಮ ಅನ್ವಯವಾಗಲಿದೆ. ಅಧಿಕೃತ ಆದೇಶವನ್ನು ಶೀಘ್ರದಲ್ಲೇ ಹೊರಡಿಸಲಾಗುವುದು ಎಂದು ತಿಳಿಸಿದರು.
ಮಕ್ಕಳಿಗೆ ‘ನೈತಿಕ ಶಿಕ್ಷಣ’ (Moral Science) ಜಾರಿ: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಉಚಿತವಾಗಿ ‘ನೈತಿಕ ಶಿಕ್ಷಣ’ ಪುಸ್ತಕಗಳನ್ನು ಒದಗಿಸಲಾಗುತ್ತಿದೆ. ಇದು ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುವ ಸರ್ಕಾರದ ಹೆಜ್ಜೆಯಾಗಿದೆ, ಎಂದು ಹೇಳಿದರು.
16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧ: ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ (Social Media) ಬಳಕೆಯನ್ನು ನಿರ್ಬಂಧಿಸುವ ಮಹತ್ವದ ಪ್ರಸ್ತಾಪವನ್ನು ಸದನದಲ್ಲಿ ಚರ್ಚಿಸಲಾಗಿದ್ದು, ಎಲ್ಲರಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಈ ಸಮಸ್ಯೆಯು ಕೇವಲ ಸರ್ಕಾರದ ಮಟ್ಟದಲ್ಲಿ ಬಗೆಹರಿಯುವುದಿಲ್ಲ, ಪೋಷಕರು ತಮ್ಮ ಮಕ್ಕಳ ಮೊಬೈಲ್ ಬಳಕೆಯ ಮೇಲೆ ಹೆಚ್ಚಿನ ಜವಾಬ್ದಾರಿ ವಹಿಸಬೇಕು ಎಂದು ಸಚಿವರು ಕಳಕಳಿಯ ಮನವಿ ಮಾಡಿದರು.
“ನಮ್ಮ ಸರ್ಕಾರದ ಪ್ರಮುಖ ಉದ್ದೇಶ ಸರ್ಕಾರಿ ಶಾಲೆಗಳ ಸಬಲೀಕರಣ, ಪಾರದರ್ಶಕತೆ ಕಾಯ್ದುಕೊಳ್ಳುವುದು ಮತ್ತು ವಿದ್ಯಾರ್ಥಿಗಳನ್ನು ಪರೀಕ್ಷಾ ಒತ್ತಡದಿಂದ ಮುಕ್ತಗೊಳಿಸುವುದಾಗಿದೆ. ಈ ನಿಟ್ಟಿನಲ್ಲಿ ವಾರ್ಷಿಕ 3 ಪರೀಕ್ಷೆಗಳನ್ನು ನಡೆಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಉಳಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ,” ಎಂದು ಸಚಿವ ಶ್ರೀ ಮಧು ಬಂಗಾರಪ್ಪ ಅವರು ತಮ್ಮ ಇಲಾಖೆಯ ಸಾಧನೆ ಮತ್ತು ಮುಂದಿನ ಗುರಿಗಳ ಬಗ್ಗೆ ವಿವರಿಸಿದರು.
Key words: SSLC, 525 marks, limited, Hindi, not considered







