ಡಿ.25 ರಂದು ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಮಣ್ಯ ಬ್ರಹ್ಮರಥೋತ್ಸವ: ಸಕಲ ಸಿದ್ಧತೆ

ಬೆಂಗಳೂರು ಗ್ರಾಮಾಂತರ, ಡಿಸೆಂಬರ್,23,2025 (www.justkannada.in): ಇತಿಹಾಸ ಪ್ರಸಿದ್ಧ ದೊಡ್ಡಬಳ್ಳಾಪುರದ ಶ್ರೀ ಘಾಟಿ ಸುಬ್ರಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್ 25 ರಂದು ಬ್ರಹ್ಮರಥೋತ್ಸವ ನಡೆಯಲಿದ್ದು ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ವತಿಯಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ಅವರು ಮಾಹಿತಿ ನೀಡಿದರು.

ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಎ.ಬಿ ಬಸವರಾಜು ಅವರು ಮಾತನಾಡಿ, ಡಿಸೆಂಬರ್ 25 ರಂದು ಮಧ್ಯಾಹ್ನ 12.00 ರಿಂದ 12.15 ಗಂಟೆಯ ಶುಭ ಮೂಹರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಲಿದೆ. ಕಳೆದ ವರ್ಷ 1.50 ಲಕ್ಷದವರೆಗೂ ಭಕ್ತಾದಿಗಳು ಭಾಗಿಯಾಗಿದ್ದರು.

ಈ ಬಾರಿ ಬ್ರಹ್ಮರಥೋತ್ಸವವು ರಜೆ ದಿನ ಬಂದಿರುವುದರಿಂದ ಸುಮಾರು ಎರಡು ಲಕ್ಷ ಭಕ್ತಾದಿಗಳು ಬರುವ ಸಾಧ್ಯತೆ ಇದೆ. ಟ್ರಾಫಿಕ್ ಸಮಸ್ಯೆ, ಜನಸಂದಣಿ ನಿಯಂತ್ರಿಸಲು ಹಲವು ಕ್ರಮ ಕೈಗೊಳ್ಳಲಾಗಿದೆ ಎಂದರು.

ಘಾಟಿ ಕ್ಷೇತ್ರಕ್ಕೆ ಆಗಮಿಸಲು ಪ್ರಮುಖವಾಗಿ ಎರಡು ರಸ್ತೆ ಸಂಪರ್ಕಗಳಿದ್ದು ಮಾಕಳಿ ಹಾಗೂ ಕಂಟನಕುಂಟೆ ರಸ್ತೆಗಳಲ್ಲಿ ಸ್ವಚ್ಚತೆ ಕಾರ್ಯ, ಫುಟ್ ಪಾತ್ ಒತ್ತುವರಿ ತೆರವು  ಮಾಡಲಾಗಿದೆ. ಇಲ್ಲಿ ಮೂಲಸೌಕರ್ಯ ವ್ಯವಸ್ಥೆ ಮಾಡಲಾಗಿದೆ. ದೇವಾಲಯ ಸುತ್ತಮುತ್ತಲಿನ ಫುಟ್ ಪಾತ್ ಮೇಲಿನ ಅಂಗಡಿಗಳನ್ನು ತೆರವು ಮಾಡಲಾಗಿದ್ದು ಭಕ್ತರ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗದಂತೆ ಕ್ರಮವಹಿಸಲಾಗಿದೆ ಎಂದರು.

ಭಕ್ತರಿಗೆ ಉಚಿತ ಬಸ್ ವ್ಯವಸ್ಥೆ

ರಥೋತ್ಸವಕ್ಕೆ ಬರುವ ಭಕ್ತಾದಿಗಳ ವಾಹನಗಳಿಗೆ ಕಂಟನಕುಂಟೆ ಮಾರ್ಗ ಹಾಗೂ ಮಾಕಳಿ ಮಾರ್ಗ ಬಳಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ಭಕ್ತಾದಿಗಳು ತಮ್ಮ ವಾಹನಗಳನ್ನು ನಿಲ್ಲಿಸಬೇಕು. ಪಾರ್ಕಿಂಗ್ ಸ್ಥಳದಿಂದ ದೇವಾಲಯದ ಬಳಿಗೆ ತೆರಳಲು ಜಿಲ್ಲಾಡಳಿತದಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದ್ದು ಭಕ್ತಾದಿಗಳು ಆ ಬಸ್ ಗಳ ಮೂಲಕವೇ ಬಂದು ದರ್ಶನ ಪಡೆದು ಮತ್ತೇ ಅದೇ ಬಸ್ ಗಳ ಮೂಲಕ ಮರಳಬಹುದು. ದೇವಾಲಯದ ಬಳಿ ವಾಹನ ಸಂಚಾರ ದಟ್ಟಣೆ, ಸಂಚಾರಕ್ಕೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದ್ದು ಭಕ್ತಾದಿಗಳು ಸಹಕರಿಸಬೇಕು ಎಂದರು.

2026ರ ಜನವರಿ 31 ರವರೆಗೆ ಶ್ರೀ ಕ್ಷೇತ್ರಕ್ಕೆ ಬರುವ ವಾಹನಗಳಿಗೆ ಸುಂಕ ವಿನಾಯಿತಿ ನೀಡಲಾಗಿದೆ. ಭಕ್ತರಿಗೆ ಸುಗಮ ದರ್ಶನ ವ್ಯವಸ್ಥೆಗಾಗಿ ಧರ್ಮ ದರ್ಶನ ಮತ್ತು 50 ರೂಪಾಯಿಯ ವಿಶೇಷ ದರ್ಶನ ವ್ಯವಸ್ಥೆ ಇರಲಿದೆ. ಡಿಸೆಂಬರ್ 28 ರವರೆಗೆ ಕ್ಷೇತ್ರದಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದ್ದು, ಬ್ರಹ್ಮರಥೋತ್ಸವಕ್ಕೆ ಬರುವ ಭಕ್ತರಿಗೆ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ಅವರು ಮಾತನಾಡಿ, ಪ್ರತಿ ವರ್ಷದಂತೆ ಬ್ರಹ್ಮರಥೋತ್ಸವದಲ್ಲಿ ಎರಡು ಲಕ್ಷದವರೆಗೂ ಸಾರ್ವಜನಿಕರು ಸೇರುವ ನಿರೀಕ್ಷೆಇದೆ. ಭಕ್ತರಿಗೆ ಪಾರ್ಕಿಂಗ್ ಸಮಸ್ಯೆ ಬಗೆ ಹರಿಸಲು ಕ್ರಮ ವಹಿಸಲಾಗಿದ್ದು, ಕಾರು ಸೇರಿದಂತೆ ಇತರೆ ವಾಹನಗಳಿಗೆ 14 ಪಾರ್ಕಿಂಗ್ ಸ್ಥಳ, ದ್ವಿಚಕ್ರ ವಾಹನಗಳಿಗೆ 4 ಪಾರ್ಕಿಂಗ್ ಸ್ಥಳಗಳನ್ನು ಗುರುತಿಸಲಾಗಿದೆ. ಭದ್ರತೆಗಾಗಿ ಈ ವರ್ಷ 1000 ಮಂದಿ  ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ, ಅಗ್ನಿಶಾಮಕ ವಾಹನ ವ್ಯವಸ್ಥೆ ಮಾಡಲಾಗಿದೆ. ಜತೆಗೆ 100 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಅದರ ವೀಕ್ಷಣೆಗೆ ಕಂಟ್ರೋಲ್ ರೂಂ ಕೂಡ ಸ್ಥಾಪಿಸಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕೆ.ಎನ್ ಅನುರಾಧ ಅವರು ಮಾತನಾಡಿ, ಬ್ರಹ್ಮರಥೋತ್ಸವದ ಹಿನ್ನಲೆ ಘಾಟಿಯ ರಂಗ ಮಂದಿರದಲ್ಲಿ ಡಿಸೆಂಬರ್ 24, 25 ರಂದು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಒಟ್ಟು 70 ಕಲಾ ತಂಡಗಳು ನೋಂದಣಿ ಆಗಿದ್ದು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಈಗಲೂ ಅವಕಾಶವಿದ್ದು ರಂಗ ಮಂದಿರ ಬಳಿ ಸಂಬಂಧಪಟ್ಟ ಅಧಿಕಾರಿಗಳನ್ನು ಭೇಟಿ ಆಗಿ ನೋಂದಾಯಿಸಬಹುದಾಗಿದೆ ಎಂದರು.

ಕಂಟನಕುಂಟೆ , ಹಾಡೋನಹಳ್ಳಿ ಗ್ರಾಪಂ ವ್ಯಾಪ್ತಿಯ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಫುಟ್ ಪಾತ್ ಸ್ವಚ್ಚತೆ, ಅಂಗಡಿಗಳ ತೆರವು ಮಾಡಲಾಗಿದೆ. ಪಾರ್ಕಿಂಗ್ ಸ್ಥಳಗಳಲ್ಲಿ ಹಾಗೂ ತುರ್ತು ಸೇವೆಗಳ ನಿಮಿತ್ತ 04 ಅಂಬುಲೆನ್ಸ್ ವ್ಯವಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪ್ರಥಮ ಚಿಕಿತ್ಸೆ, ಹೆಚ್ಚುವರಿ ಆರೋಗ್ಯ ಸಿಬ್ಬಂದಿ ನೇಮಿಸಲಾಗಿದೆ, ಪಾರ್ಕಿಂಗ್ ಸ್ಲಾಟ್ ಗಳು, ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯುವ ನೀರು, ಮೊಬೈಲ್ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಘಾಟಿ ಸುಬ್ರಹ್ಮಣ್ಯ ದೇವಾಲಯ ಪ್ರಾಧಿಕಾರದ ಸದಸ್ಯರಾದ ರಂಗಪ್ಪ, ಅಪರ ಜಿಲ್ಲಾಧಿಕಾರಿ ಸೈಯೀದಾ ಆಯಿಷಾ, ಘಾಟಿ ಸುಬ್ರಮಣ್ಯ ದೇವಾಲಯದ ಕಾರ್ಯದರ್ಶಿ ದಿನೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರಾದ ಅಶೋಕ್ ಕುಮಾರ್ ಡಿ, ಡಿವೈಎಸ್ಪಿ ಪಾಂಡುರಂಗ, ಇನ್ಸ್ ಪೆಕ್ಟರ್ ಸಾಧಿಕ್ ಪಾಷಾ ಮುಜರಾಯಿ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Key words:, Sri Kshetra Ghati Subramanya, Brahmarathotsav, December 25