ಮೈಸೂರು,ಸೆಪ್ಟಂಬರ್,6,2025 (www.justkannada.in): ಮೈಸೂರು ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರು ಅಧಿಕಾರಿಯಾಗಿದ್ದುಕೊಂಡು ಸಾಹಿತ್ಯ,ಕವಿತೆ ಬರೆಯುವ ಜತೆಗೆ ಸತತ ಮೂರು ವರ್ಷಗಳಿಂದ ನಾಡಹಬ್ಬ ದಸರಾ ಮಹೋತ್ಸವಕ್ಕಾಗಿ ಗೀತೆ ರಚನೆ ಮಾಡಿದ್ದು ಈ ವಿಶೇಷ ಗೀತೆ ಈ ಬಾರಿ ಎಲ್ಲರ ಗಮನ ಸೆಳೆದಿದೆ.
ಹೌದು ಹಿಂದಿನ ಎರಡು ವರ್ಷಗಳಲ್ಲಿ ದಸರಾ ಗೀತೆಯನ್ನು ಬಳಸಿಕೊಂಡಿದ್ದರೂ ತಮ್ಮದೆಂದು ಹೇಳಿಕೊಳ್ಳದ ಪಿ.ಶಿವರಾಜು ಅವರ ಮೂರನೇ ವರ್ಷದ ಗೀತೆಯನ್ನು ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಹಾಡಿರುವ ಪರಿಣಾಮ ಎಲ್ಲರ ಗಮನ ಸೆಳೆಯುವಂತಾಗಿದೆ. ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಗೀತೆಯನ್ನ ಬಿಡುಗಡೆ ಮಾಡಲಾಗಿದೆ. ವಾಟ್ಸ್ ಆ್ಯಪ್ ಗ್ರೂಪ್ ಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಈ ಗೀತೆಯನ್ನ ಅಧಿಕೃತವಾಗಿ ಬಿಡುಗಡೆ ಮಾಡಿದ್ದು, ಈ ಹಾಡನ್ನು ಕೇಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಮಾರ್ಗದರ್ಶನದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಪಿ.ಶಿವರಾಜು ಅವರ ಪರಿಕಲ್ಪನೆ-ಸಾಹಿತ್ಯ-ನಿರ್ದೇಶನದಲ್ಲಿ ‘ಗೀತೆ’ ಮೂಡಿಬಂದಿದೆ. ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ ಅವರು ಹಾಡಿದ್ದು, ನೀತು ನಿನಾದ್ ಸಂಗೀತ ನೀಡಿದ್ದಾರೆ. 5.39 ನಿಮಿಷಗಳ ಈ ಗೀತೆಯು ನಾಡಹಬ್ಬದ ವೈಶಿಷ್ಟ್ಯ, ಮಹತ್ವವನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದೆ.
‘ಡ್ರೋನ್’ ಕ್ಯಾಮೆರಾದಲ್ಲಿ ಸೆರೆ ಹಿಡಿದಿರುವ ಮೈಸೂರಿನ ಸೊಬಗು ಬಿಂಬಿಸುವ ವಿಡಿಯೊಗಳು, ಉತ್ತಮ ಸಂಗೀತದ ಹಿನ್ನೆಲೆಯಲ್ಲಿ ಮೂಡಿಬಂದಿದೆ. ಈ ಹಿಂದಿನ ದಸರಾ ಮಹೋತ್ಸವಗಳಲ್ಲಿ ನಡೆದ ಕಾರ್ಯಕ್ರಮಗಳ ವಿಡಿಯೊಗಳನ್ನು ಇದರಲ್ಲಿ ಜೋಡಿಸಲಾಗಿದ್ದು, ನಾಡಿನ ಕಲೆ, ಸಂಸ್ಕೃತಿಯನ್ನು ಬಿಂಬಿಸುವ ಪ್ರಯತ್ನವನ್ನು ಮಾಡಲಾಗಿದೆ. ಈ ಮೂಲಕ ಜಿಲ್ಲಾಡಳಿತ-ದಿಂದ ಸಾರ್ವಜನಿಕರಿಗೆ ನಾಡಹಬ್ಬಕ್ಕೆ ಸ್ವಾಗತ ಕೋರುವ ಕೆಲಸವನ್ನು ಮಾಡಲಾಗಿದೆ.
ಕರುನಾಡ ಕರುಣೆಯ ಕಡಲಿನಲಿ ಮೈಸೂರು ಮಮತೆಯ ಮಡಿಲಿನಲಿ ಕನ್ನಡದ ಸಂಭ್ರಮದ ನಾಡಹಬ್ಬ ನಾಡದೇವತೆಯ ಸಿರಿ ದಸರಾ ಹಬ್ಬ…ಎಂದು ಗೀತೆ ಆರಂಭವಾಗಿದ್ದು ಮೈಸೂರಿದು ಕರುನಾಡಿಗೆ ಸಂಸ್ಕೃತಿಯ ಹಿರಿಮೆ, ಪರಂಪರೆಯ ಸಂಭ್ರಮದ ಅಸ್ಮಿತೆಯ ಗರಿಮೆ’ ಎಂದು ಬಣ್ಣಿಸಲಾಗಿದೆ. ಊರು, ಸಾಂಸ್ಕೃತಿಕ ವೈಭವದ ಸ್ವರ್ಗವೇ ಇಲ್ಲಿ ಸೂರು, ನವರಾತ್ರಿಯ ಪೂರ್ತಿ ನಮಗೆಲ್ಲವೂ ಸ್ಫೂರ್ತಿ, ಕರುನಾಡಿನ ಪ್ರಗತಿ ಇದು ಜಗದಗಲಕೂ ಕೀರ್ತಿ ಎಂಬಿತ್ಯಾದಿ ಅರ್ಥಗರ್ಭಿತ ಸಾಲುಗಳಿವೆ.
ಕಂದಾಯ ಇಲಾಖೆಯಲ್ಲಿ ಡಿಸಿ ನಂತರ ಎರಡನೇ ಅಧಿಕಾರಿಯಾಗಿರುವ ಡಾ.ಪಿ.ಶಿವರಾಜು ಹಲವಾರು ಒತ್ತಡಗಳ ನಡುವೆ ಸಾಹಿತ್ಯ, ಕವನ, ಕವಿತೆಗಳನ್ನು ಬರೆಯುವುದನ್ನು ತೊಡಗಿಸಿಕೊಂಡಿದ್ದಾರೆ. ಇದುವರೆಗೂ ಹಲವಾರು ಪುಸ್ತಕ, ಕವನ ಸಂಕಲನಗಳನ್ನು ರಚಿಸಿರುವ ಶಿವರಾಜು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಪಿಎಚ್.ಡಿ ಪದವಿಯನ್ನು ಗಳಿಸಿರುವುದು ವಿಶೇಷವಾಗಿದೆ.
ಈ ಗೀತೆಯನ್ನು ವಾರ್ತಾ ಇಲಾಖೆಯ ‘ಮೈಸೂರು ವಾರ್ತೆ’ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಎಲ್ಲ ವೇದಿಕೆಗಳಲ್ಲೂ ಹಾಡು: ಚಾಮುಂಡಿಬೆಟ್ಟದಲ್ಲಿ ನಾಡಹಬ್ಬಕ್ಕೆ ಚಾಲನೆ ನೀಡುವ ಮುಖ್ಯವೇದಿಕೆಯಿಂದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಈ ಗೀತೆಯನ್ನು ಹಾಕಲಾಗುತ್ತದೆ. ರೈತ,ಗ್ರಾಮೀಣ,ಕ್ರೀಡೆ, ಚಲನಚಿತ್ರೋತ್ಸವ, ಕುಸ್ತಿ,ಫಲಪುಷ್ಪ ಪ್ರದರ್ಶನ,ಯುವದಸರಾ ಸೇರಿದಂತೆ ಇನ್ನಿತರ ದಸರಾ ಕಾರ್ಯಕ್ರಮಗಳಲ್ಲಿ ಪ್ಲೇ ಮಾಡಿ ಬಿಂಬಿಸಲಾಗುತ್ತದೆ. ದಸರಾ ಮಹೋತ್ಸವದ ಸಂಸ್ಕೃತಿ, ಇತಿಹಾಸ, ಮೈಸೂರು ರಾಜಮನೆತನ, ಮೈಸೂರಿನ ಸೊಗಡು, ಚಾಮುಂಡಿಬೆಟ್ಟ ಸೇರಿದಂತೆ ಇಡೀ ಕರ್ನಾಟಕದ ಗತವೈಭವದ ಚಿತ್ರವನ್ನು ಬಿಂಬಿಸುವಂತೆ ಮಾಡಿರುವುದು ವಿಶೇಷವಾಗಿದೆ.
Key words: special song, ADC Shivaraj, Mysore Dasara, attracting