ದಕ್ಷಿಣ ಅಯೋಧ್ಯಾ ದೇಗುಲ‌ ನಿರ್ಮಾಣಕ್ಕೆ ವಿಘ್ನ: ದಸಂಸ ಪ್ರತಿಭಟನೆ, ಕಾರ್ಯಕ್ರಮ‌ ರದ್ದು

ಮೈಸೂರು,ಮೇ,23,2025 (www.justkannada.in): ಅಯೋಧ್ಯೆಯ ಮೂಲ ಶಿಲೆ ಸಿಕ್ಕ ಸ್ಥಳದಲ್ಲಿ ದಕ್ಷಿಣ ಅಯೋಧ್ಯಾ ದೇಗುಲ‌ ನಿರ್ಮಾಣ ಮುಂದಾಗಿರುವುದಕ್ಕೆ ವಿಘ್ನ ಎದುರಾಗಿದೆ.

ಮೈಸೂರು ತಾಲೂಕಿನ ಗುಜ್ಜೇಗೌಡನಪುರದಲ್ಲಿ ಮೂಲ ಶಿಲೆ ಸಿಕ್ಕ ಸ್ಥಳದಲ್ಲಿ ದಕ್ಷಿಣ ಅಯೋಧ್ಯೆ ನಿರ್ಮಿಸಲು ಕುಟುಂಬಸ್ಥರು, ಗ್ರಾಮಸ್ಥರು ಮುಂದಾಗಿದ್ದರು. ಆದರೆ ದೇವಸ್ಥಾನ ನಿರ್ಮಾಣಕ್ಕೆ  ದಸಂಸ ವಿರೋಧ ವ್ಯಕ್ತಪಡಿಸಿದ್ದು ಪೂಜಾ ಕೈಂಕರ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಆ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ದೇವಸ್ಥಾನ ನಿರ್ಮಿಸಲು ಬಿಡಲ್ಲ. ದೇವಸ್ಥಾನದ ಸ್ಥಳದಲ್ಲಿ ಅಂಬೇಡ್ಕರ್ ಪ್ರತಿಮೆ ಮಾಡಿ ಎಂದು ದಸಂಸ ಮುಖಂಡರು ಪಟ್ಟು ಹಿಡಿದಿದ್ದಾರೆ. ದಸಂಸ ಮುಖಂಡ ಪುರುಷೋತ್ತಮ್ ನೇತೃತ್ವದಲ್ಲಿ‌ ಪ್ರತಿಭಟನೆ ನಡೆಸಿದ್ದು  ಏಕಾಏಕಿ ಫ್ಲೆಕ್ಸ್ ಗಳನ್ನ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಯಾವುದೇ ಕಾರಣಕ್ಕೂ ಪೂಜೆ ಮಾಡಲು ಬಿಡಲ್ಲ ಎಂದು‌ ಕಿಡಿಕಾರಿದ್ದಾರೆ.

ಗುಜ್ಜೇಗೌಡನಪುರದಲ್ಲಿ  ಬಾಲರಾಮ‌ ಶಿಲೋದ್ಭವಕ್ಕೆ ಪೇಜಾವರ ಶ್ರೀ ಚಾಲನೆ ನೀಡಬೇಕಿತ್ತು. ಮುಖ್ಯ ಅತಿಥಿಗಳಾಗಿ ಸಂಸದ ,ರಾಜವಂಶಸ್ಥ ಯದುವೀರ್ ಒಡೆಯರ್, ಶಾಸಕ ಜಿ.ಟಿ.ದೇವೇಗೌಡ, ಆರ್ ಎಸ್ ಎಸ್ ಮುಖಂಡ ಮಾ.ವೆಂಕಟೇಶ್‌ ಜೀ, ಶಿಲ್ಪಿ ಅರುಣ್ ಯೋಗಿರಾಜ್, ಇತಿಹಾಸ ತಜ್ಞ ಶೆಲ್ವಪಿಲೈ ಅಯ್ಯಂಗಾರ್ ಪಾಲ್ಗೊಳ್ಳಬೇಕಿತ್ತು.

ಶಿಲೆ ಸಿಕ್ಕ ಸ್ಥಳದಲ್ಲಿ ಅದ್ಧೂರಿ ಪೂಜೆ ಸಲ್ಲಿಸಲಾಗಿತ್ತು. ಅಯೋಧ್ಯೆ ರಾಮ ದೇಗುಲ ಉದ್ಘಾಟನೆ ವೇಳೆಯಲ್ಲೂ ಪೂಜೆ ಸಲ್ಲಿಸಲಾಗಿತ್ತು. ವರ್ಷದ ಸಂದರ್ಭದಲ್ಲೂ ಶಿಲೆ ಸಿಕ್ಕ ಸ್ಥಳದಲ್ಲಿ ಗ್ರಾಮಸ್ಥರು, ರಾಜಕೀಯ ಮುಖಂಡರು ಪೂಜೆ ಸಲ್ಲಿಸಿದ್ದರು.

ಆದರೆ ಇದೀಗ ದಕ್ಷಿಣ ಅಯೋಧ್ಯೆ ನಿರ್ಮಾಣ ಕುರಿತು ಪರ- ವಿರೋಧ‌ ಚರ್ಚೆ ಮುನ್ನೆಲೆಗೆ ಬಂದಿದ್ದು, ಯಾವುದೇ ಕಾರಣಕ್ಕೂ ದೇವಸ್ಥಾನ ‌ ನಿರ್ಮಾಣಕ್ಕೆ ಅವಕಾಶ ಇಲ್ಲ.  ಕಾರ್ಯಕ್ರಮ ಉದ್ಘಾಟಿಸಲು ಬಂದವರಿಗೆ ಅಪಮಾನ ಮಾಡುವುದಾಗಿ ದಸಂಸ ಮುಖಂಡರು ಬೆದರಿಕೆ ಹಾಕಿದ್ದು, ಪೂಜೆಗೆ ಅವಕಾಶವಿಲ್ಲ. ಪೂಜೆ ಮಾಡಿದರೆ ಪರಿಣಾಮ ನೆಟ್ಟಗೆ ಇರಲ್ಲ ಎಂದು ದಸಂಸ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಯೋಜಕರು ಇಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಏಕಾಏಕಿ ‌ ರದ್ದು ಮಾಡಿದ್ದಾರೆ.

Key words: Mysore, construction, South,  Ayodhya temple, Dasamsa, protests