ನೋಂದಣಿ ಇಲಾಖೆಯಲ್ಲಿ ಕೆಲವು ಬದಲಾವಣೆ: ಕಾವೇರಿ-2 ಜಾರಿ-ಕಂದಾಯ ಸಚಿವ ಕೃಷ್ಣಬೈರೇಗೌಡ.

ಬೆಂಗಳೂರು,ಜೂನ್,19,2023(www.justkannada.in):  ನೋಂದಣಿ ಇಲಾಖೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು,  ಏಪ್ರಿಲ್​ನಿಂದ ನೋಂದಣಿ ಪ್ರಕ್ರಿಯೆಯಲ್ಲಿ ಕಾವೇರಿ-2 ಅಳವಡಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದ್ದಾರೆ.

ಬೆಂಗಳೂರಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, 251 ನೋಂದಣಿ ಕಚೇರಿಗಳಲ್ಲಿ ಇಂದು (ಜೂ.19) ಸಂಜೆಯೊಳಗೆ ಕಾವೇರಿ-2  ಜಾರಿಯಾಗಲಿದೆ.  ಎಲ್ಲಾ ದಾಖಲೆಗಳನ್ನು ಕಾವೇರಿ-2ನಲ್ಲೇ ಸಲ್ಲಿಕೆ ಮಾಡಬಹುದು. ಸಬ್ ರಿಜಿಸ್ಟ್ರಾರ್ ಕೂಡ ಆನ್ ಲೈನ್ ​​ನಲ್ಲೇ ದಾಖಲೆ ಪರಿಶೀಲಿಸ್ತಾರೆ. ನೋಂದಣಿ ಶುಲ್ಕವನ್ನೂ ಆನ್​​ ಲೈನ್​​ನಲ್ಲೇ ಸಲ್ಲಿಕೆ ಮಾಡಬಹುದು. ಇದರಿಂದ ರಾಜ್ಯ ಸರ್ಕಾರಕ್ಕೂ ಕೂಡ  ನೋಂದಣಿ ಬಗ್ಗೆ ಮಾಹಿತಿ ಸಿಗಲಿದೆ. ಅಲ್ಲದೇ ಜಮೀನು ಅಕ್ರಮಗಳನ್ನು ಕೂಡ ತಡೆಯಬಹುದು ಎಂದು ತಿಳಿಸಿದರು.

ಜನರು ಹಾಗೂ ಸರ್ಕಾರದ ನಡುವೆ ರಿಜಿಸ್ಟ್ರೇಷನ್ ಅತ್ಯಂತ ಪ್ರಮುಖ ಭಾಗ. ನೊಂದಣಿ ಇಲಾಖೆಯಲ್ಲಿ ಬಹಳ ಅಸ್ತವ್ಯಸ್ತತೆ ಇದೆ. ರಿಜಿಸ್ಟ್ರೇಷನ್ ಸಂದರ್ಭದಲ್ಲಿ ಬಹಳಷ್ಟು ವಿಳಂಬ ಆಗುತ್ತಿದೆ. ಜನರು ಅವರ ಆಸ್ತಿ ಅವರು ಮಾರಾಟ ಮಾಡುವುದಕ್ಕೆ ಪಡಬಾರದ ಯಾತನೆ ಅನುಭವಿಸಿದ್ದಾರೆ. ಬಹಳ ವರ್ಷಗಳ ಸುಧಾರಣೆಯಿಂದ ಇದನ್ನು ಬಗೆಹರಿಸಲು ಕಾವೇರಿ-2 ಎಂಬ ಪದ್ದತಿ ತರಲಾಗಿದೆ. ಕಾವೇರಿ-೨ ವ್ಯವಸ್ಥೆ ಬಗ್ಗೆ ಅನುಕೂಲ-ಅನಾನುಕೂಲ ಎರಡೂ ಆಗುತ್ತಿದೆ ಎಂಬ ಮಾಹಿತಿ ಇದೆ  ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

ನೋಂದಣಿ ಪ್ರಕ್ರಿಯೆಯಿಂದ 2022 ಮೇ 1024 ಕೋಟಿ ರೂ. ಆದಾಯ ಬಂದಿತ್ತು. 2023 ರ ಮೇ ನಲ್ಲಿ 1357 ಕೋಟಿ ರೂ. ಆದಾಯ ಬಂದಿದೆ. ಕಳೆದ ಜೂನ್ ತಿಂಗಳಲ್ಲಿ 721 ಕೋಟಿ ರೂ. ಆದಾಯ ಬಂದಿತ್ತು. ಈ ಜೂನ್ ತಿಂಗಳಲ್ಲಿ 840 ಕೋಟಿ ರೂ. ಆದಾಯ ಬಂದಿದೆ ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

Key words: Some change – registration- department- Kaveri-2  -Revenue Minister- Krishnabaire Gowda.