ಸೆ.22ರಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025: ಸಿದ್ದತೆ ಬಗ್ಗೆ ಜಾಗೃತಿ ಅಭಿಯಾನಕ್ಕೆ ಸೂಚನೆ

ಬೆಂಗಳೂರು,ಸೆಪ್ಟಂಬರ್,8,2025 (www.justkannada.in): ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ 2025 ಮನೆಮನೆ ಸಮೀಕ್ಷೆಯನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 7 ರವರೆಗೆ ರಾಜ್ಯದಾದ್ಯಂತ ಹಮ್ಮಿಕೊಂಡಿದೆ.

ಈ ಹಿನ್ನೆಲೆಯಲ್ಲಿ  ಪೂರ್ವ ಸಿದ್ಧತೆಯ ಬಗ್ಗೆ ಅರಿವು ಮೂಡಿಸಲು ಪದವಿ ವಿದ್ಯಾರ್ಥಿಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳಿಗೆ ಸರ್ಕಾರ ಆದೇಶಿಸಿದೆ.

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಎನ್ನುವುದು ರಾಜ್ಯದ ಎಲ್ಲಾ ಜನರ ಸಾಮಾಜಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಂಡು ರಾಜ್ಯದ ಭವಿಷ್ಯದ ನೀತಿ ನಿರೂಪಣೆಯ ಆಧಾರವಾಗುತ್ತದೆ. ಈ ಕಾರ್ಯವು ನಾಗರೀಕರಾದ ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ.

ಸಮೀಕ್ಷೆಯ ಪ್ರಶ್ನಾವಳಿಯಲ್ಲಿ ಸುಮಾರು 60 ಪ್ರಶ್ನೆಗಳಿದ್ದು, ಪಡಿತರ ಚೀಟಿ ಅಥವಾ ಆಧಾರ್ ಸಂಖ್ಯೆಯನ್ನು ದೃಢೀಕರಣ ಪತ್ರವಾಗಿ ಆಧಾರ ಮಾಡಿಕೊಂಡು ಸಮೀಕ್ಷೆ ಕಾರ್ಯವನ್ನು ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಪಡಿತರ ಚೀಟಿ, ಆಧಾರ್ ಕಾರ್ಡ್/ಸಂಖ್ಯೆ, ಮತದಾರರ ಗುರುತಿನ ಚೀಟಿ, ವಿಕಲಚೇತನರಾಗಿದ್ದಲ್ಲಿ UID ಕಾರ್ಡ್ ಅಥವಾ ಪ್ರಮಾಣ ಪತ್ರ ಗಳನ್ನು ಸಿದ್ಧವಾಗಿಟ್ಟು ಕೊಳ್ಳಬೇಕಾಗಿರುತ್ತದೆ.

ಪ್ರತಿ ಕುಟುಂಬದ ಸದಸ್ಯರ ಆಧಾರ್ ಕಾರ್ಡ್‌ಗಳು ಮೊಬೈಲ್ ನಂಬರ್‌ಗಳಿಗೆ ಲಿಂಕ್ ಆಗಿರುವುದನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಸಮೀಕ್ಷೆ ವೇಳೆ ಇ-ಕೆವೈಸಿ ( e-KYC) ಪ್ರಕ್ರಿಯೆಗಾಗಿ OTP ಸಂಖ್ಯೆ ಆ ಸದಸ್ಯರ ಆಧಾರ್ ನಂಬರ್‌ಗೆ ಜೋಡಣೆ ಆಗಿರುವ ಮೊಬೈಲ್ ನಂಬರ್‌ಗೆ ಬರುತ್ತದೆ. ಒಂದು ವೇಳೆ ಆ ಸದಸ್ಯರು ಮನೆಯಲ್ಲಿ ಇಲ್ಲದಿದ್ದರೆ ಕುಟುಂಬದ ಪರವಾಗಿ ಉತ್ತರ ನೀಡುತ್ತಿರುವ ಸದಸ್ಯರು ಫೋನ್ ಮೂಲಕ OTP ಸಂಖ್ಯೆಯನ್ನು ಪಡೆದು ಮಾಹಿತಿ ನೀಡಬೇಕಾಗುತ್ತದೆ.

ಜಾಗೃತಿ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಇಚ್ಛಿಸುವ ವಿದ್ಯಾರ್ಥಿಗಳು 63617-89579 ಈ ನಂಬ‌ರ್ ಗೆ ವಾಟ್ಸಪ್ ಮುಖಾಂತರ Hi ಎಂದು ಸಂದೇಶವನ್ನು ಕಳುಹಿಸಿ ನೋಂದಣಿ ಮಾಡಿಕೊಳ್ಳಬಹುದು.

6 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಸದಸ್ಯನಿಗೂ ಆಧಾರ್ ಕಡ್ಡಾಯವಾಗಿದೆ. ಆಧಾರ್ ಇಲ್ಲದಿದ್ದರೆ ಹತ್ತಿರದ ಆಧಾರ್ ನೋಂದಣಿ ಕೇಂದ್ರದಲ್ಲಿ ವಿವರಗಳನ್ನು ನೋಂದಾಯಿಸಿ ನೋಂದಣಿ ಸಂಖ್ಯೆಯನ್ನು ಪಡೆದುಕೊಂಡು ಸಮೀಕ್ಷೆಯಲ್ಲಿ ಭಾಗವಹಿಸಬಹುದು. ಹಾಗೆಯೇ, ಮೊಬೈಲ್ ನಂಬರ್ ಆಧಾರ್ ನಂಬರ್‌ಗೆ ಲಿಂಕ್ ಆಗಿಲ್ಲದಿದ್ದರೆ ಅದನ್ನು ತಕ್ಷಣವೇ ಲಿಂಕ್ ಮಾಡಿಸಿಕೊಳ್ಳಬೇಕಾಗುತ್ತದೆ.

ಪ್ರಶ್ನಾವಳಿಯಲ್ಲಿ ವ್ಯಾಪಾರ, ಉದ್ಯೋಗ, ವಿದ್ಯಾರ್ಹತೆ, ಕೌಶಲ್ಯ ತರಬೇತಿ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು, ಧರ್ಮ, ಜಾತಿ, ಉಪಜಾತಿ, ಕುಲಕಸುಬು ಮುಂತಾದ ಮಾಹಿತಿಗಳ ಬಗ್ಗೆ ಪ್ರಶ್ನೆಗಳು ಇರುತ್ತವೆ. ಪ್ರತಿ ಕುಟುಂಬವೂ ಮಾಹಿತಿಯನ್ನು ನೀಡಲು ಹಾಗೂ ಈ ಮೇಲೆ ಹೇಳಿದ ಸಂಬಂಧಪಟ್ಟ ದಾಖಲೆಗಳೊಂದಿಗೆ ಸಿದ್ಧವಾಗಿರಬೇಕಾಗುತ್ತದೆ. ಆದ್ದರಿಂದ, ಈ ಪೂರ್ವ ಸಿದ್ಧತೆಯ ಬಗ್ಗೆ ಅರಿವು ಮೂಡಿಸಲು ಪದವಿ ವಿದ್ಯಾರ್ಥಿಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಹಿಂದೂಳಿದ ವರ್ಗಗಳ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿ ತುಲಸಿ ಮದ್ದಿನೇನಿ ಅವರು ಆದೇಶಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ https://kscbc.karnataka.gov.in ಭೇಟಿ ನೀಡಬಹುದು.

Key words: Social and Educational Survey 2025,  September 22, awareness