ಸರಳ ವಿವಾಹದ ಜೊತೆಗೆ ಅಂತರ್ಜಾತಿ ವಿವಾಹಕ್ಕೂ ಸ್ವಾಗತ- ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ  ಹೇಳಿಕೆ…

ಮೈಸೂರು,ಫೆಬ್ರವರಿ,9,2021(www.justkannada.in): ಸರಳ ವಿವಾಹಗಳು ಇವತ್ತಿನ ಪರಿಸ್ಥಿತಿಗೆ ಬಹಳ ಅವಶ್ಯಕ. ಸರಳ ವಿವಾಹದ ಜೊತೆಗೆ ಅಂತರ್ಜಾತಿ ವಿವಾಹಕ್ಕೂ ಸ್ವಾಗತ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.jk

ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮಾಸಿಕ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದು,  ಕಾರ್ಯಕ್ರಮದಲ್ಲಿ 23 ಜೋಡಿಗಳಿಗೆ ವಿವಾಹ ಭಾಗ್ಯ ಲಭಿಸಿದೆ.

ಜಾತ್ರಾ ಮಹೋತ್ಸವದಲ್ಲಿ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗಾಸ್ವಾಮೀಜಿ ಸೇರಿದಂತೆ ವಿವಿಧ ಮಠಾಧಿಪತಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು ಭಾಗಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸಚಿವ ಸೋಮಶೇಖರ್ ಭಾಗಿಯಾಗಿದ್ದು, ಹಲವು ದಿನಗಳ ನಂತರ ಇಬ್ಬರು ನಾಯಕರು  ವೇದಿಕೆ ಹಂಚಿಕೊಂಡಿದ್ದಾರೆ.  ಸಮ್ಮಿಶ್ರ ಸರ್ಕಾರ ಪತನದ ನಂತರ ಇಬ್ಬರು ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದರು. ಇದೀಗ  ಇದೀಗ ಒಂದೇ ವೇದಿಕೆಯಲ್ಲಿ ಸಿದ್ದರಾಮಯ್ಯ- ಸಚಿವ ಎಸ್.ಟಿ ಸೋಮಶೇಖರ್ ಉಪಸ್ಥಿತರಿದ್ದರು.

Rastrapitha-Mahatma Gandhi- Remembrance- Former CM- Siddaramaiah
siddaramaih#profile..

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಾನು ಒಂದು‌ ಗಂಟೆ ತಡವಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಹಾಗಾಗಿ ಎಲ್ಲ ಪೂಜ್ಯರಿಗೆ ಕ್ಷಮೆಯಾಚಿಸುತ್ತೇನೆ‌. ನಾನು ಪ್ರತಿ ವರ್ಷ ಜಾತ್ರಾಮಹೋತ್ಸವದಲ್ಲಿ ಭಾಗವಹಿಸುತ್ತೇನೆ. ಈ ಬಾರಿ ಕೊರೊನಾ ಹಿನ್ನೆಲೆ ಸರಳವಾಗಿ ಕಾರ್ಯಕ್ರಮ ನಡೆಯುತ್ತಿದೆ. ಜನರ ಆರೋಗ್ಯ ದೃಷ್ಠಿಯಿಂದ ಶ್ರೀಗಳು ಸರಳವಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಹಾಗಾಗಿ ಶ್ರೀಗಳು ಕೂಡಾ ಕಾರ್ಯಕ್ರಮದಲ್ಲಿ ಭಾಗಿಯಾಗುವಂತೆ ಸೂಚಿಸಿದ್ದರು. ಸಂತೋಷದಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ ಎಂದರು.

ಸುತ್ತೂರು ನನ್ನ ಮತ ಕ್ಷೇತ್ರ. ಈಗ ನನ್ನ ಮಗ ಎಂಎಲ್ ಎ ಆಗಿದ್ರೂ ಕೂಡಾ ಇದು ನನ್ನ ಕ್ಷೇತ್ರವೇ. ಯಾಕಂದ್ರೆ ಈ ಕ್ಷೇತ್ರದಿಂದ ಗೆದ್ದು ನಾನು ಸಿಎಂ ಆಗಿದ್ದವನು. ಹಾಗಾಗಿ ಸುತ್ತೂರು ಮಠ ನನಗೆ ಆತ್ಮೀಯವಾದ ಮಠಗಳಲ್ಲಿ ಒಂದು. ಸಿದ್ದೇಶ್ವರ ಸ್ವಾಮೀಜಿಗಳು ಪಾಂಡಿತ್ಯ, ಅಪಾರ ಜ್ಞಾನಿಗಳು. ಅವರೂ ಕೂಡಾ ಈ ಕಾರ್ಯಕ್ರಮ ಭಾಗಿಯಾಗಿದ್ದಾರೆ , ಅವರ ಹಿತವಚನ ಕೇಳಲು ನಾನೂ ಕೂಡಾ ಕಾಯುತ್ತಿದ್ದೇನೆ ಎಂದರು.

ಸರಳ ವಿವಾಹಗಳು ಇವತ್ತಿನ ಪರಿಸ್ಥಿತಿಗೆ ಬಹಳ ಅವಶ್ಯಕ. ಸರಳ ವಿವಾಹದ ಜೊತೆಗೆ ಅಂತರ್ಜಾತಿ ವಿವಾಹಕ್ಕೂ ಸ್ವಾಗತ. ಜಾತಿ ವ್ಯವಸ್ಥೆ ಹೋಗಿ ಸಮಸಮಾಜ ನಿರ್ಮಾಣಕ್ಕೆ ಹಾಗೂ ಜಾತ್ಯಾತೀತ ಸಮಾಜಕ್ಕೆ ಈ ಅಂತರ್ಜಾತಿ ವಿವಾಹ ಅಗತ್ಯ. ಮೇಲು ಜಾತಿ ಮತ್ತು ಅಸ್ಪೃಶ್ಯ ಜಾತಿಗೆ ಬಸವಣ್ಣನವರು ಮದುವೆ ಮಾಡಿಸಿದ್ದರು. 850ವರ್ಷಗಳ ಹಿಂದೆಯೇ ಇಂತಹ ಕ್ರಾಂತಿಕಾರಿ ಚಿಂತನೆ ಮಾಡಿದ್ದವರು ಬಸವಣ್ಣ. ಇಂದಿನ ಪಾರ್ಲಿಮೆಂಟ್, ಅಸೆಂಬ್ಲಿಗಳನ್ನ ಅನುಭವ ಮಂಟಪ ನಡೆಸುವ ಮೂಲಕ ಆವಾಗಲೇ ಮಾಡಿದ್ದರು. ಹಾಗಾಗಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಮಾಡಲು ಮುಂದಾಗಿದ್ದೆ. ಆದರೆ ಆರಂಭವಾಗುವಷ್ಠರಲ್ಲಿ ಅಧಿಕಾರ ಕಳೆದುಕೊಂಡೆ ಎಂದು ಸಿದ್ಧರಾಮಯ್ಯ ತಿಳಿಸಿದರು.

ಈಗಿನ ರಾಜ್ಯ ಸರ್ಕಾರ ಈಗತಾನೆ ಗುದ್ದಲಿ ಪೂಜೆ ಮಾಡಿದ್ದಾರೆ. ಶೀಘ್ರದಲ್ಲೇ ಅನುಭವ ಮಂಟಪ ನಿರ್ಮಾಣವಾಗುತ್ತೆ. ಸಮಾಜದಲ್ಲಿ ನಾಲ್ಕು ವರ್ಣಗಳಾಗಿ ವಿಂಗಡಿಸಿಬಿಟ್ಟಿದ್ದಾರೆ. ಇಂತಹ ವರ್ಣ ಭೇದ ಹೋಗಿ ಜಾತಿ ವ್ಯವಸ್ಥೆ ತೊಲಗಬೇಕು. ಸಮಸಮಾಜ ನಿರ್ಮಾಣವಾಗಬೇಕು ಎಂದು ಸಿದ್ಧರಾಮಯ್ಯ ತಿಳಿಸಿದರು.

Key words: Simple weddings –mysore-suttur- farmer cm-Siddaramaiah