ಇನ್ಫೋಸಿಸ್‌ ಜತೆ ಉನ್ನತ ಶಿಕ್ಷಣ ಇಲಾಖೆಯ ಒಡಂಬಡಿಕೆಗೆ ಅಂಕಿತ.

ಬೆಂಗಳೂರು,ಸೆಪ್ಟಂಬರ್,6,2022(www.justkannada.in): ವಿದ್ಯಾರ್ಥಿಗಳನ್ನು ವೃತ್ತಿ ಮತ್ತು ಬದುಕಿಗೆ ಸಜ್ಜುಗೊಳಿಸುವ ಉದ್ದೇಶದೊಂದಿಗೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮತ್ತು ರಾಜ್ಯ ಸರ್ಕಾರದ ಎಲ್ಲ ವಿ.ವಿ.ಗಳು, ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಜತೆ ಮಂಗಳವಾರ ಒಡಂಬಡಿಕೆಗೆ ಅಂಕಿತ ಹಾಕಿದವು. ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ವಿಧಾನಸೌಧದಲ್ಲಿ ಈ ಕಾರ್ಯಕ್ರಮ ನಡೆಯಿತು.

ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ ಮತ್ತು ಇನ್ಫೋಸಿಸ್‌ನ ತಿರುಮಲ ಆರೋಹಿ ಒಡಂಬಡಿಕೆ ವಿನಿಮಯ ಮಾಡಿಕೊಂಡರು. ಉಳಿದಂತೆ ಬೆಂಗಳೂರು, ಮಂಗಳೂರು, ಮೈಸೂರು, ಕರ್ನಾಟಕ, ತುಮಕೂರು, ಗುಲ್ಬರ್ಗ, ಕುವೆಂಪು, ಸಂಗೀತ, ಜಾನಪದ ಸೇರಿದಂತೆ ಎಲ್ಲಾ 24 ವಿ.ವಿ.ಗಳ ಕುಲಪತಿಗಳು ಹಾಜರಿದ್ದು, ಒಡಂಬಡಿಕೆ ಹಸ್ತಾಂತರಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ್, `ಇನ್ಫೋಸಿಸ್ ಸಂಸ್ಥೆಯು ಸಮಾಜದ ಒಳಿತಿಗಾಗಿ ತನ್ನ ಜ್ಞಾನ ಪರಿಣತಿಯನ್ನು ಹಂಚಿಕೊಳ್ಳಲು ಮುಂದೆ ಬಂದಿದೆ. ಆಧುನಿಕ ತಂತ್ರಜ್ಞಾನದ ನೆರವಿನಿಂದ ಅದು ರೂಪಿಸಿರುವ ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್ (https://infyspringboard.onwingspan.com) ವ್ಯವಸ್ಥೆಯಡಿ 12,300 ಕೋರ್ಸುಗಳು ಉಚಿತವಾಗಿ ಲಭ್ಯವಿವೆ. 6ನೇ ತರಗತಿಯಿಂದ ಪಿಎಚ್ ಡಿ ವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಈ ಕೋರ್ಸ್‌ ಗಳನ್ನು ಆನ್ ಲೈನ್ ನಲ್ಲಿ ಕಲಿಯಬಹುದು. ಜತೆಗೆ, ಅದು 800ಕ್ಕೂ ಹೆಚ್ಚು ಶಿಕ್ಷಣ ಪರಿಣತರ ನೆರವನ್ನು ಉನ್ನತ ಶಿಕ್ಷಣ ಕಲಿಯುತ್ತಿರುವ ವಿದ್ಯಾರ್ಥಿಗಳು ಮತ್ತು ಬೋಧಕ ವೃಂದಕ್ಕೆ ನೀಡಲಿದೆ’ ಎಂದರು.

ಈ ಸಲುವಾಗಿ ಇನ್ಫೋಸಿಸ್ ಸುಮಾರು ನೂರು ಕೋಟಿ ಖರ್ಚು‌ ಮಾಡಿರುವುದು ಮೆಚ್ಚುವಂತಹದ್ದು ಎಂದು ಅವರು ಹೇಳಿದರು.

ಈ ಒಡಂಬಡಿಕೆಯಿಂದಾಗಿ ನಮ್ಮ ವಿ.ವಿ.ಗಳು ಸ್ಪ್ರಿಂಗ್‌ ಬೋರ್ಡ್ ವೇದಿಕೆಯಲ್ಲಿರುವ ಕೋರ್ಸುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಈ ಮೂಲಕ ವಿ.ವಿ.ಗಳು ತಮ್ಮ ಪಠ್ಯಕ್ರಮಗಳನ್ನು ಪ್ರಸ್ತುತಗೊಳಿಸಿಕೊಳ್ಳಬೇಕು. ಬಳಿಕ, ಇವುಗಳ ಮೂಲಕ ಬೋಧಕರಿಗೆ ಹಲವು ಉಪಯುಕ್ತ ಬೋಧನಾ ತಂತ್ರಗಳನ್ನು ಕಲಿಸಬೇಕು. ಜತೆಗೆ ಇಲ್ಲಿರುವ ಪರಿಣತರನ್ನು ಕಾಲೇಜುಗಳು ಮತ್ತು ವಿ.ವಿ.ಗಳು ತಮ್ಮ ಅಧ್ಯಯನ ಮಂಡಲಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು.

ಜಾಗತಿಕ ಗುಣಮಟ್ಟದ ಶಿಕ್ಷಣ ಇಂದಿನ ತುರ್ತುಗಳಲ್ಲಿ ಒಂದಾಗಿದೆ. ಇದು ಸಾಧ್ಯವಾಗಬೇಕೆಂದರೆ ದಕ್ಷ ಬೋಧಕ ವೃಂದ ಮತ್ತು ಸಮಕಾಲೀನ ಅಗತ್ಯಗಳಿಗೆ ಸ್ಪಂದಿಸುವ ಪಠ್ಯಕ್ರಮ ಅತ್ಯಗತ್ಯವಾಗಿವೆ. ಹೀಗಾಗಿ ಸರಕಾರವು ಉನ್ನತ ಶಿಕ್ಷಣ ವಲಯವನ್ನು ಅಂತಾರಾಷ್ಟ್ರೀಕರಣ ಪ್ರಕ್ರಿಯೆಗೆ ತೆರೆದಿದ್ದು, ಜಗತ್ತಿನ ಅತ್ಯುತ್ತಮ ಸಂಸ್ಥೆಗಳು ಮತ್ತು ಉದ್ಯಮಗಳೊಂದಿಗೆ ಒಡಂಬಡಿಕೆಗಳನ್ನು ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ನಾಸ್ಕಾಂ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ ಚೇಂಜ್‌ ಸಂಸ್ಥೆಗಳೊಂದಿಗೆ ಇಂತಹ ಉಪಕ್ರಮ ಆರಂಭಿಸಲಾಗಿದ್ದು, ಆಧುನಿಕ ಕೋರ್ಸುಗಳನ್ನು ಕಲಿಕೆಯಲ್ಲಿ ಕಡ್ಡಾಯಗೊಳಿಸಲಾಗಿದೆ. ಇನ್ಫೋಸಿಸ್ ಜತೆಗಿನ ಈ ಒಡಂಬಡಿಕೆ ಮೈಲಿಗಲ್ಲಾಗಿದೆ ಎಂದು ಅವರು ವಿವರಿಸಿದರು.

ಇನ್ಫೋಸಿಸ್ ಸ್ಪ್ರಿಂಗ್‌ ಬೋರ್ಡ್ ವ್ಯವಸ್ಥೆಯಿಂದ ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ನೂತನ ಮತ್ತು ಡಿಜಿಟಲ್ ತಂತ್ರಜ್ಞಾನದ ಕಲಿಕೆ ಸಾಧ್ಯವಾಗಲಿದೆ. ಪರಿಣಾಮಕಾರಿ ಕಲಿಕೆಗೆ ಆನ್‌ ಲೈನ್‌ ವ್ಯವಸ್ಥೆಯನ್ನು ಹೇಗೆ ಬಳಸಿಕೊಳ್ಳಬಹುದು ಎನ್ನುವುದನ್ನು ಇದು ಸಾಬೀತು ಪಡಿಸಲಿದೆ. ವರ್ಚುಯಲ್ ತರಗತಿಗಳನ್ನು ನಡೆಸುವ ಮೂಲಕ, ಆನ್‌ ಲೈನ್‌ನಲ್ಲೇ ವಿದ್ಯಾರ್ಥಿಗಳ ಮೌಲ್ಯಮಾಪನವನ್ನೂ ಕೈಗೊಳ್ಳಬಹುದು ಎಂದು ಅವರು ಮಾಹಿತಿ ನೀಡಿದರು.

ಬೋಧಕರು ತಮ್ಮ ಸಂಸ್ಥೆಗಳ ಪರವಾಗಿ ಸ್ಪ್ರಿಂಗ್‌ ಬೋರ್ಡ್‌ ಮೂಲಕ ಮೈಕ್ರೋಸೈಟ್‌ ಗಳನ್ನು ತೆಗೆಯಬಹುದು. ಇದರಿಂದಾಗಿ ಪದವಿ ಮತ್ತು ಸ್ನಾತಕೋತ್ತರ ಹಂತದ ಕೋರ್ಸುಗಳಿಗೆ ಆಧುನಿಕ ಪಠ್ಯಕ್ರಮಗಳನ್ನು ಅಳವಡಿಸಿಕೊಳ್ಳಲು ಅತ್ಯುತ್ತಮ ಅವಕಾಶವಿದೆ ಎಂದು ಅಶ್ವತ್ ನಾರಾಯಣ್ ನುಡಿದರು.

ವಿಟಿಯು ರೀತಿಯಲ್ಲಿ ‌ಎಲ್ಲ ವಿವಿಗಳು ಕೂಡ ಉದ್ಯಮಗಳ ಮುಖ್ಯ ತಾಂತ್ರಿಕ ಅಧಿಕಾರಿಗಳನ್ನು ತಮ್ಮ ಬೋರ್ಡ್ ಆಫ್ ಸ್ಟಡೀಸ್ ಸದಸ್ಯರನ್ನಾಗಿ‌ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇನ್ಫೋಸಿಸ್‌ ಸಂಸ್ಥೆಯ ಶಿಕ್ಷಣ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ತಿರುಮಲ ಆರೋಹಿ ಮಾತನಾಡಿ, ಸ್ಪ್ರಿಂಗ್‌ ಬೋರ್ಡ್ ಮೂಲಕ ಬೋಧಕರ ಅಗತ್ಯಗಳನ್ನು ಮನಗಂಡು, ಸೂಕ್ತ ತರಬೇತಿ ಕೊಡಲಾಗುವುದು ಇದಕ್ಕಾಗಿ ವಾರ್ಷಿಕ ಯೋಜನೆಯನ್ನು ರೂಪಿಸಲಾಗುವುದು. ಈ ಮೂಲಕ ವಿ.ವಿ.ಗಳು ಮತ್ತು ಅಧೀನ ಕಾಲೇಜುಗಳ ಬೋಧಕರನ್ನು ಜಾಗತಿಕ ಅಗತ್ಯಕ್ಕೆ ತಕ್ಕಂತೆ ಸಜ್ಜುಗೊಳಿಸಲಾಗುವುದು. ನಿಗದಿತವಾಗಿ ಇದರ ಪ್ರಗತಿಯ ಪರಾಮರ್ಶೆಯೂ ನಡೆಯಲಿದೆ ಎಂದರು.

2025ರ ವೇಳೆಗೆ ಒಂದು ಕೋಟಿ ಯುವಜನರಿಗೆ ಡಿಜಿಟಲ್ ಮತ್ತು ಜೀವನ ಕೌಶಲ್ಯಗಳನ್ನು ಕಲಿಸುವುದು ಇನ್ಫೋಸಿಸ್‌ ಸ್ಪ್ರಿಂಗ್‌ ಬೋರ್ಡ್‌ನ ಗುರಿಯಾಗಿದೆ. ಇದರಲ್ಲಿ 10ರಿಂದ 22 ವರ್ಷದೊಳಗಿನ ಯುವಜನರತ್ತ ಗಮನವನ್ನು ಕೇಂದ್ರೀಕರಿಸಿದ್ದೇವೆ. ಇದು ಭಾರತೀಯ ಭಾಷೆಗಳಲ್ಲೂ ಲಭ್ಯವಿದ್ದು, ಈಗಾಗಲೇ 23 ಲಕ್ಷ ವಿದ್ಯಾರ್ಥಿಗಳು ದೇಶಾದ್ಯಂತ ಸ್ಪ್ರಿಂಗ್‌ ಬೋರ್ಡ್ ವೇದಿಕೆಯಲ್ಲಿ ಕಲಿಯುತ್ತಿದ್ದಾರೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ಬಿ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ ಮತ್ತು ರಾಜ್ಯದ ಎಲ್ಲ ವಿ.ವಿ.ಗಳ ಕುಲಪತಿಗಳು ಉಪಸ್ಥಿತರಿದ್ದರು. ಇನ್ಫೋಸಿಸ್ ಪರವಾಗಿ ಕಾರ್ಪೊರೇಟ್‌ ವ್ಯವಹಾರಗಳ ಮುಖ್ಯಸ್ಥ ಸಂತೋಷ ಅನಂತಪುರ, ಸ್ಪ್ರಿಂಗ್‌ಬೋರ್ಡ್ ವಿಭಾಗದ ಮುಖ್ಯಸ್ಥ ವಿಕ್ಟರ್‌ ಸುಂದರರಾಜ್ ಹಾಜರಿದ್ದರು. ಉನ್ನತ ಶಿಕ್ಷಣ ಪರಿಷತ್ತಿನ ಆಡಳಿತಾಧಿಕಾರಿ‌ ಡಾ.ತಾಂಡವಗೌಡ ವಂದಿಸಿದರು.

ಸ್ಪ್ರಿಂಗ್‌ಬೋರ್ಡ್ ಕೋರ್ಸ್‌ಗಳತ್ತ ಪಕ್ಷಿನೋಟ 

ಇನ್ಫೋಸಿಸ್‌ ಸ್ಪ್ರಿಂಗ್‌ ಬೋರ್ಡ್ ವೇದಿಕೆಯ ಮೂಲಕ ವಿದ್ಯಾರ್ಥಿಗಳು ಉಚಿತವಾಗಿ ಜಾವಾ, ಪೈಥಾನ್, ಸಿ# ಮುಂತಾದ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌ ಗಳು, ಬ್ಯಾಂಕಿಂಗ್, ಸ್ಪೇಸ್‌ ನೆಟ್‌ವರ್ಕ್, ರೀಟೇಲ್ ಟೆಲಿಕಾಂ,ಉದ್ಯಮಗಳಿಗೆ ಬೇಕಾದ ಮೂಲಭೂತ ಕೌಶಲ್ಯಗಳು ಮುಂತಾದವನ್ನು ಕಲಿಯಲು ಅವಕಾಶವಿದೆ. ಇದಲ್ಲದೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಬಿಗ್‌ ಡೇಟಾ, ಅನಲಿಟಿಕ್ಸ್, ಬ್ಲಾಕ್‌ ಚೈನ್‌, ಎಪಿಐ ಎಕಾನಮಿ, ಕೋಡಿಂಗ್, ಕ್ಲೌಡ್‌ ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ, ಡಿಸೈನ್ ಥಿಂಕಿಂಗ್, ಡೇಟಾ ವಿಶುಯಲೈಸೇಷನ್, ಎಡ್ಜ್‌ ಕಂಪ್ಯೂಟಿಂಗ್, ಡೇಟಾ ಪ್ರೈವೆಸಿ ಮತ್ತು ಸೆಕ್ಯುರಿಟಿ (ಇ-ಸುರಕ್ಷತೆ) ಇವುಗಳನ್ನು ಕೂಡ ಕಲಿಯಬಹುದು. ಇದಕ್ಕೆ ಸಂಬಂಧಿಸಿದಂತೆ ಇನ್ಫೋಸಿಸ್‌ ಕೂಡ ಕೋರ್ಸೆರಾ, ಸ್ಕಿಲ್‌ಸಾಫ್ಟ್‌, ಐಐಎಚ್‌ಟಿ, ಲರ್ನ್‌ಶಿಪ್‌ ಮುಂತಾದ ಸಂಸ್ಥೆಗಳೊಂದಿಗೆ ಸಹಭಾಗಿತ್ವ ಹೊಂದಿದೆ. ಹೆಚ್ಚಿನ ಮಾಹಿತಿಗೆ ಆಸಕ್ತರು https://infyspringboard.onwingspan.com ನೋಡಬಹುದು.

ಹಲವು ಸಂಸ್ಥೆಗಳ ಸಕ್ರಿಯ ಪಾತ್ರ

ಒಡಂಬಡಿಕೆಗೆ ಸರಕಾರದ ಪರವಾಗಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ವಿಟಿಯು, ರಾಜ್ಯದ ಸಾರ್ವಜನಿಕ ವಿ.ವಿ.ಗಳು, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ, ಬೇಸ್ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿ.ವಿ.ಗಳು ಸಹಿ ಹಾಕಿದವು. ಇನ್ಫೋಸಿಸ್ ಪರವಾಗಿ ಕಾರ್ಪೊರೇಟ್‌ ವ್ಯವಹಾರಗಳ ಮುಖ್ಯಸ್ಥ ಸಂತೋಷ್ ಅನಂತಪುರ, ಸ್ಪ್ರಿಂಗ್‌ ಬೋರ್ಡ್ ವಿಭಾಗದ ಮುಖ್ಯಸ್ಥ ವಿಕ್ಟರ್ ಸುಂದರರಾಜ್ ಉಪಸ್ಥಿತರಿದ್ದರು.

Key words: signed -agreement – Higher -Education- Department – with- Infosys.

ENGLISH SUMMARY…

All the 24 public universities ink MoU with Infosys Springboard

Bengaluru: To better prepare students for their professional life Memorandum Of Understanding was linked on Tuesday between Karnataka State Higher Education Council (SHEC), Visvesvaraiah Technical University, All the Public Universities of the State and IT Pioneer Infosys. MOU was signed in presence of Higher Education Minister, Dr C.N.Ashwath Narayan at Vidhana Soudha.

Gopala Krishna Joshi, Executive Director, SHEC and Tirumala Aarohi of Infosys exchanged the MOU. All the Vice Chancellors of 24 Public Universities including Bengaluru, Mangaluru, Mysore who were present also later involved in exchange the copies of MOU.

Speaking on the occasion, Minister Narayan said, “The Infosys Springboard platform developed by using modern technology has 12,300 courses to offer at free of cost. These can be used by students starting from class 6 upto those who are pursuing Ph.D and can be learnt online. In addition, this will also provide the eminence of more than 800 educational experts to the students and faculty of the Higher Education and also to the faculty”.

For this purpose Infosys has spent rupees 100 crores he stated and lauded the company for the same.

The courses on the Springboard will help Universities to update their syllabus. This also enables to import better teaching techniques to the faculty, Minister opined.

Further, he emphasized that Colleges and Universities should include the experts involved in developing the Springboard platform in their board of studies.

The platform will enable to teach emerging and digital skills for students. This allows to conduct virtual classes and also to evaluate students online, Narayan explained.

The platform allows faculty to open their
microsites on behalf of their institutions.

Tirumala Aarohi, Head, Education and Training, Infosys said, relevant training will be given to the faculty by knowing the needs through the Springboard. He added that an annual plan will be developed for this purpose. This will help to prepare our faculty as per global standards, he stated.

The platform which focuses on students between 10 to 22 years has set a goal to teach digital and life skills for 1 crore students by 2025. At present 23 lakh students have been using the platform which is being available in other Indian languages also, he told.

Rakshmi Mahesh, Principal Secretary, The Department of Higher Education, SHEC Deputy Chairperson Professor B.Thimm Gowda, Executive Director Gopala Krishna Joshi, Santosh Anantapur, Head Corporate affairs, Infosys, Victor Sundar Raju, Head, Springboard Division were present.

The Springboard facilitates learning programming languages like Java Python, C# at free of cost. This also enables learning basic skills needed for banking space network retail telecom and other industries. Emerging skills related to Artificial Intelligence, Big Data, Blockchain,, Coding, Cloud Technology, Cyber Security, Edge Computing, Data Visualisation can also be learnt.