ವರುಣಾ ಕ್ಷೇತ್ರದಿಂದ ಸ್ಪರ್ಧೆಗೆ ಮುಂದಾದ ಸಿದ್ಧರಾಮಯ್ಯಗೆ ಲಿಂಗಾಯತ-ವೀರಶೈವ ಮುಖಂಡರಿಂದ ಬೆಂಬಲ.

ಮೈಸೂರು,ಏಪ್ರಿಲ್,1,2023(www.justkannada.in):  ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿರುವ ಮಾಜಿ ಸಿಎಂ ಸಿದ‍್ಧರಾಮಯ್ಯರಿಗೆ ಲಿಂಗಾಯತ-ವೀರಶೈವ ಮುಖಂಡರು ಬೆಂಬಲ ಸೂಚಿಸಿದ್ದಾರೆ.

ಈ ಸಂಬಂಧ ನಗರದ ಪತ್ರಕರ್ತರ ಭವನದಲ್ಲಿ  ಸುದ್ದಿಗೋಷ್ಠಿ ನಡೆಸಿ ಕೆಪಿಸಿಸಿ ಕಾರ್ಯದರ್ಶಿ ವರುಣ ಮಹೇಶ್  ಮಾತನಾಡಿದರು. ದಾಸನೂರು ಮಹೇಶ್, ಹಡಜನ ಮಂಜುನಾಥ್, ಸಿ.ಮಹೇಶ್, ದಂಡಿಕೆರೆ ನಾಗೇಂದ್ರ, ಮೊಸಂಬಾಯನಹಳ್ಳಿ ಕುಮಾರ್ ಸೇರಿದಂತೆ ಪ್ರಮುಖರು ಸುದ್ದಿಗೋಷ್ಠಿ ನಡೆಸಿ ಸಿದ್ಧರಾಮಯ್ಯಗೆ ಬೆಂಬಲ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ವರುಣ ಮಹೇಶ್, ಸಿದ್ದರಾಮಯ್ಯ ಅವರಿಂದ ವರುಣ ಕ್ಷೇತ್ರದ ಕುಡಿಯುವ ನೀರಿನ ತೊಂದರೆ ಬಗೆಹರಿದಿದೆ. ಶಾಲೆ, ಆಸ್ಪತ್ರೆ, ಸಮುದಾಯ ಭವನ, ದೇವಾಲಯ ಅಭಿವೃದ್ಧಿ ಎಲ್ಲವೂ ಆಗಿದೆ. ಸಿಎಂ ಆಗಿದ್ದಾಗ ಸಿದ್ಧರಾಮಯ್ಯ ಸಾವಿರಾರು ಕೋಟಿ ರೂ ಅನುದಾನ ಕೊಟ್ಟಿದ್ದಾರೆ. ಪುತ್ರ  ಡಾ.ಯತೀಂದ್ರ ಸಿದ್ದರಾಮಯ್ಯ 58 ಸಾವಿರ ಮತಗಳ ಅಂತರದಿಂದ ಗೆದ್ದರು. ಅವರೂ ಸಹ ಜನರೊಂದಿಗೆ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಿದ್ದಾರೆ.  ಇದರ ಪರಿಣಾಮವಾಗಿ ವರುಣ ಕ್ಷೇತ್ರದ ಜನ ಕಾಂಗ್ರೆಸ್ ಪರ ಮತ ಹಾಕಲು ತೀರ್ಮಾನಿಸಿದ್ದಾರೆ. ವೀರಶೈವ-ಲಿಂಗಾಯತ ಸಮುದಾಯದ ಮುಖಂಡರು ಬೆಂಬಲ ಕೊಡಲಿದ್ದಾರೆ ಎಂದು ಹೇಳಿದರು.

25-30 ಸಾವಿರ ಸಮುದಾಯದ ಮತಗಳು ಬರಲಿವೆ. ಸಮುದಾಯ ಗ್ರಾಮ, ತಾಲೂಕು,ಜಿಲ್ಲಾ ಪಂಚಾಯಿತಿ ಹಂತದ ಮುಖಂಡರು ಇದ್ದಾರೆ. ಅವರೆಲ್ಲರೂ ಕಾಂಗ್ರೆಸ್ ಸದಸ್ಯರು. ಸಿದ್ದರಾಮಯ್ಯ ಪರವಾಗಿ ಎಲ್ಲರೂ ಮತ ಹಾಕಲಿದ್ದೇವೆ. ವರುಣದಲ್ಲಿ ವೀರಶೈವ ಲಿಂಗಾಯತ ಸಮುದಾಯದ  63 ಸಾವಿರ, ಎಸ್ಸಿ 58 ಸಾವಿರ, ನಾಯಕ 30 ಸಾವಿರ, ಕುರುಬ 33 ಸಾವಿರ, ಒಕ್ಕಲಿಗ 12 ಸಾವಿರ, ಮುಸ್ಲಿಂ 8 ಸಾವಿರ, ಇತರೆ 18 ಸಾವಿರ ಮತದಾರರು ಇದ್ದಾರೆ. ಎಲ್ಲ ಸಮುದಾಯದವರೂ ಸಿದ್ದರಾಮಯ್ಯ ಪರವಾಗಿ ಇದ್ದಾರೆ ಎಂದು ವರುಣ ಮಹೇಶ್ ತಿಳಿಸಿದರು.

Key words: Siddaramaiah- Varuna constituency- Veerashaiva Lingayat- leaders- Support