ಮಾಹಿತಿಗಾಗಿ ನಾನು ನಿಮ್ಮ ಮನೆಗೆ ಬರ್ಬೇಕಾ..? ಅರಣ್ಯಾಧಿಕಾರಿಗೆ ಚಳಿ ಬಿಡಿಸಿದ ಸಿಎಂ ಸಿದ್ದರಾಮಯ್ಯ

ಮೈಸೂರು,ನವೆಂಬರ್, 10,2025 (www.justkannada.in): ಮೈಸೂರು ಜಿಲ್ಲೆಯಲ್ಲಿ ಸಾಮಾಜಿಕ‌ ಅರಣ್ಯದ ಪ್ರಮಾಣ ಎಷ್ಟಿದೆ? ಯಾವ ಭಾಗಗಳಲ್ಲಿ ವಿಸ್ತರಣೆ ಆಗಿದೆ ಎನ್ನುವ ಮಾಹಿತಿ ನೀಡುವಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗೆ ಪ್ರಶ್ನಿಸಿದ್ದಕ್ಕೆ ಅಧಿಕಾರಿ ಸರಿಯಾದ ಅಂಕಿ ಅಂಶ ನೀಡದೆ, ಮಾಹಿತಿ ನೀಡಲು ತಡಬಡಾಯಿಸಿದ ಹಿನ್ನೆಲೆ ಅಧಿಕಾರಿ ವಿರುದ್ದ ಸಿಎಂ ಸಿದ್ದರಾಮಯ್ಯ ಗರಂ ಆದರು.

ಮೈಸೂರಿನ ಕೆಡಿಪಿ ಸಭೆಯಲ್ಲಿ ಈ ಘಟನೆ ನಡೆದಿದ್ದು, ಅಧಿಕಾರಿ ಸರಿಯಾದ ಅಂಕಿ ಅಂಶ ನೀಡದೆ, ಮಾಹಿತಿ ನೀಡಲು ತಡಬಡಾಯಿಸಿದ ಅಧಿಕಾರಿ ಬಗ್ಗೆ ಗರಂ ಆದ ಸಿಎಂ ಸಿದ್ದರಾಮಯ್ಯ, ಸರಿಯಾದ ಮಾಹಿತಿ ತರದೆ ಅತ್ತೆ ಮನೆಗೆ ಬಂದಂತೆ ಕೈ ಬೀಸಿಕೊಂಡು ಬರ್ತೀರಾ ? 25 ವರ್ಷದಿಂದ ಕೆಲಸ ಮಾಡಿ ರೈತರ ಜಮೀನಿನಲ್ಲಿ ಎಷ್ಟು ಗಿಡ ನೆಟ್ಟಿದ್ದೀರಿ ? ಎಷ್ಟು ಎಕರೆ ಗಿಡ ಬೆಳೆಸಿದ್ದೀರಿ ಎನ್ನುವ ಮಾಹಿತಿ ಇಲ್ಲದಿದ್ದರೆ ನಿಮ್ಮ ಕಾರ್ಯಕ್ಷಮತೆ ಇಷ್ಟೆನಾ? ಮಾಹಿತಿಗಾಗಿ ನಾನು ನಿಮ್ಮ ಮನೆಗೆ ಬರಬೇಕಾ ಎಂದು ಪ್ರಶ್ನಿಸಿದರು.‌

ಇದೇ ವೇಳೆ ಬೇರೆ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ರಾಸುಗಳಿಗೆ ಕಾಲುಬಾಯಿ ರೋಗ ಬರದಂತೆ ತಡೆಯಲು ಹಾಕಲಾದ ಲಸಿಕೆ ಪ್ರಮಾಣ ಎಷ್ಟಿದೆ ಎಂದು ಪ್ರಶ್ನಿಸಿದರು. ಶೇ96.55 ರಷ್ಟು ಲಸಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕುರಿ ಮೇಕೆಗಳಲ್ಲಿ ಕರುಳುಬೇನೆ ರೋಗದ ವಿರುದ್ಧ ಶೇ 101.69 ರಷ್ಟು ಲಸಿಕೆ ಹಾಕಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಾನುವಾರುಗಳಲ್ಲಿ ಕಂದು ರೋಗದ ವಿರುದ್ಧ ಶೇ 93.33 ರಷ್ಟು ಲಸಿಕೆ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

ಕುರಿಗಾಹಿಗಳಿಗೆ ಆಗುತ್ತಿದ್ದ ತೊಂದರೆಗಳು ಮತ್ತು ಕಳ್ಳ ಕಾಕರಿಂದ ರಕ್ಷಣೆ ಕೊಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಕುರಿಗಾಹಿಗಳ ಮೇಲೆ ದೌರ್ಜನ್ಯ ಪ್ರಕರಣಗಳು ನಡೆದಿಲ್ಲ ಎನ್ನುವ ವರದಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು.

ನೀಲಗಿರಿ ನಿಷೇಧ ಆದ ಮೇಲೂ ಮತ್ತೆ ನೀಲಗಿರಿ ಪ್ಲಾಂಟೇಷನ್ ಕಾಣಿಸುತ್ತಿರುವುದರ ಬಗ್ಗೆ ಶಾಸಕರಾದ ತನ್ವೀರ್ ಸೇಠ್ ಅವರು ಸಭೆಯ ಗಮನಕ್ಕೆ ತಂದರು.

ಇದಕ್ಕೆ ಉತ್ತರಿಸಿದ ಅರಣ್ಯಾಧಿಕಾರಿಗಳು ಹೊಸದಾಗಿ ನೀಲಗಿರಿ ಪ್ಲಾಂಟೇಷನ್ ಗೆ ಅವಕಾಶ ನೀಡಿಲ್ಲ. ಇರುವ ಬೆಳೆ ಕಟಾವು ಆದ ಬಳಿಕ ಅಲ್ಲಿ ಮತ್ತೆ ಬೆಳೆಯಲು ಅವಕಾಶವಿಲ್ಲ ಎಂದು ಉತ್ತರಿಸಿದರು.

ಹಾಲಿನ ಉತ್ಪಾದನೆ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವುದರ ಅಂಕಿ ಅಂಶಗಳನ್ನು ಮುಂದಿಟ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ, ಉತ್ಪಾದನೆ ಹೆಚ್ಚಾದ ಹಾಗೆ ಮಾರುಕಟ್ಟೆ ವಿಸ್ತರಿಸಲು ಸಿದ್ಧತೆ ಮಾಡಿಕೊಳ್ಳಿ ಎನ್ನುವ ಸೂಚನೆಯನ್ನು ಅಧಿಕಾರಿಗಳಿಗೆ ಸೂಚಿಸಿದರು.

Key words: Mysore, CM Siddaramaiah, KDP, Meeting