ಬೆಂಗಳೂರು,ಜನವರಿ,9,2026 (www.justkannada.in): ಕೇರಳ ಸರ್ಕಾರ ಅಂಗೀಕರಿಸಿರುವ ಮಲೆಯಾಳಂ ಭಾಷಾ ಮಸೂದೆ- 2025ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಕೂಡಲೇ ಮಲೆಯಾಳಿ ಭಾಷಾ ಮಸೂದೆ – 2025 ಅನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಈಗಾಗಲೇ ಕೇರಳ ಸರ್ಕಾರ ಮಸೂದೆಯನ್ನು ಅಂಗೀಕರಿಸುವ ಮೂಲಕ ಮಕ್ಕಳ ಹಕ್ಕಿನ ಉಲ್ಲಂಘನೆ ಮಾಡಿದ್ದು, ಭಾಷಾ ಸ್ವಾತಂತ್ರ್ಯದ ಉಲ್ಲಂಘನೆ ಕೂಡ ಮಾಡಿದೆ. ಮಲೆಯಾಳಿ ಭಾಷಾ ಮಸೂದೆ – 2025 ಅನ್ನು ಕೇರಳ ಸರ್ಕಾರ ಕೂಡಲೇ ಹಿಂಪಡೆಯಬೇಕು. ಯಾವುದೇ ಸಂದರ್ಭದಲ್ಲಿ ನಮ್ಮ ಸರ್ಕಾರ ಕನ್ನಡದ ಮನಸ್ಸು ಹಾಗೂ ಭಾವನೆಗಳಿಗೆ ಧಕ್ಕೆಯಾಗಲು ಬಿಡುವುದಿಲ್ಲ ಎಂದು ತಿಳಿಸಿದರು.
ಕೇರಳದ ಗಡಿ ಜಿಲ್ಲೆಯಲ್ಲಿ ವಾಸ ಮಾಡುತ್ತಿರುವ ಜನರ ಮನಸ್ಸು ಸಂಪೂರ್ಣ ಕನ್ನಡ ಭಾಷೆಯೊಂದಿಗೆ ಬೆರೆತು ಹೋಗಿದೆ. ಕಾಸರಗೋಡಿನ ಜನರ ಮನಸ್ಸು ಹಾಗೂ ಜೀವನ ಸಂಪೂರ್ಣ ಕನ್ನಡ ಭಾಷಾಮಯವಾಗಿದೆ. ಹೀಗಿರುವಾಗ ಕೇರಳ ಸರ್ಕಾರ ಇಂತಹ ಮಸೂದೆ ಜಾರಿಗೆ ತಂದಿರುವುದು ಸರಿಯಲ್ಲ ಎಂದು ಸಚಿವ ಶಿವರಾಜ್ ತಂಗಡಗಿ ಅಸಮಾಧಾನ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚೆ ನಡೆಸಿ, ನಿಯೋಗವೊಂದನ್ನು ಅಲ್ಲಿನ ರಾಜ್ಯಪಾಲರ ಬಳಿ ಕೊಂಡಯ್ಯಲಾಗುವುದು. ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಭಾಷಾ ನಿರ್ದೇಶಕರನ್ನು ಕೇರಳ ರಾಜ್ಯಕ್ಕೆ ಕಳುಹಿಸಿ ಕೊಡಬೇಕು ಎಂದು ಶಿವರಾಜ್ ತಂಗಡಗಿ ಒತ್ತಾಯಿಸಿದರು.
Key words: Immediately, withdraw, Malayali Language Bill, Minister, Shivaraj Thangadgi







