ಶಾಮನೂರು ಶಿವಶಂಕರಪ್ಪ ನಿಧನ: ಅಂತಿಮ ದರ್ಶನ: ಇಂದು ಅಂತ್ಯಕ್ರಿಯೆ

ದಾವಣಗೆರೆ, ಡಿಸೆಂಬರ್, 15,2025 (www.justkannada.in):  ಕಾಂಗ್ರೆಸ್​​ನ ಹಿರಿಯ ಮುತ್ಸದ್ದಿ ನಾಯಕ, ಶಾಸಕ ಹಾಗೂ ಅಖಿಲ ಭಾರತ ವೀರಶೈವ ಮಹಾ ಸಭೆಯ ರಾಷ್ಟ್ರೀಯ ಅಧ್ಯಕ್ಷ  ಶಾಮನೂರು ಶಿವಶಂಕರಪ್ಪ (94) ಅವರು ವಯೋಸಹಜ ಅನಾರೋಗ್ಯದಿಂದ ನಿನ್ನೆ ನಿಧನರಾಗಿದ್ದು, ಅವರ ಅಂತ್ಯಸಂಸ್ಕಾರ ಇಂದು ದಾವಣಗೆರೆಯಲ್ಲಿ ನಡೆಯಲಿದೆ.

ಇಂದು ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರ ದಾವಣಗೆರೆಗೆ ಆಗಮಿಸಿದ್ದು,  ಬೆಳಗ್ಗೆ 7 ರಿಂದ 12 ರವರೆಗೆ ಶಾಮನೂರ ಪುತ್ರ ಸಚಿವ ಎಸ್​​ಎಸ್​​ ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದೆ. ಇಲ್ಲಿ ಕುಟುಂಬ ಸದಸ್ಯರಷ್ಟೆ ಧಾರ್ಮಿಕ ವಿಧಿ ವಿಧಾನಗಳ ಪ್ರಕಾರ ಪೂಜೆ ಸಲ್ಲಿಸಲಿದ್ದು, ಇಲ್ಲಿ ವಿವಿಐಪಿಗಳಿಗೆ ಮಾತ್ರ ದರ್ಶನಕ್ಕೆ ಅವಕಾಶವಿರಲಿದೆ.

ಇದಾದ ಬಳಿಕ  12 ಗಂಟೆಯಿಂದ ಸಂಜೆ 4 ಗಂಟೆವರೆಗೆ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬಳಿಕ ಪಾರ್ಥಿವ ಶರೀರವನ್ನು ಆನೆಕೊಂಡದ ಶಾಮನೂರ ಮನೆತನದ ಕಲ್ಲೇಶ್ವರ ರೈಸ್ ಮಿಲ್ ಬಳಿ  ಸಂಜೆ ವೀರಶೈವ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಲಿದೆ.

ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಸೇರಿ ಹಲವು ರಾಜಕೀಯ ಗಣ್ಯರು ಅಂತಿಮ ದರ್ಶನ ಪಡೆಯಲಿದ್ದಾರೆ.

Key words: Shamanur Shivashankarappa, passes away, Funeral, today