ಗ್ರಾಪಂ ಸದಸ್ಯನಿಂದ ಅಕ್ರಮವಾಗಿ ಶಾಲಾ ಕಟ್ಟಡ ನೆಲಸಮ: ಆರ್’ಟಿಐ ಕಾರ್ಯಕರ್ತ ರವೀಂದ್ರ ಆರೋಪ

ಮೈಸೂರು, ಮಾರ್ಚ್ 03, 2023 (www.justkannada.in): ಮೈಸೂರು ತಾಲೂಕು ಜಯಪುರ ಹೋಬಳಿ ಚುಂಚರಾಯನಹುಂಡಿ ಸರಕಾರಿ ಶಾಲೆಯ ಬಿಸಿಯೂಟ ತಯಾರಿಕೆ ಕಟ್ಟಡವನ್ನು ಅಕ್ರಮವಾಗಿ ನೆಲಸಮಗೊಳಿಸಲಾಗಿದೆ ಎಂದು ಆರ್ ಟಿಐ ಕಾರ್ಯಕರ್ತ ರವೀಂದ್ರ ದೂರಿದ್ದಾರೆ.

ಸರಕಾರಿ ಶಾಲೆಯ ಕಟ್ಟಡವೊಂದನ್ನು ತೆರವುಗೊಳಿಸುವ ವೇಳೆ ಕೆಲವೊಂದು ಮಾರ್ಗಸೂಚಿಗಳನ್ನು ಪಾಲಿಸಬೇಕು. ಆದರೆ ಇನ್ನೂ ಸುಸ್ಥಿತಿಯಲ್ಲಿರುವ ಕಟ್ಟಡವನ್ನು ಸ್ಥಳೀಯ ಗ್ರಾಪಂ ಸದಸ್ಯರೊಬ್ಬರು ಏಕಾಏಕಿ ನೆಲಸಮ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಗ್ರಾಪಂ ಮಂಜು ಎಂಬುವವರು ನಿಯಮಬಾಹಿರವಾಗಿ ಕಟ್ಟಡವನ್ನು ನೆಲಸಮ ಮಾಡಿ ಸರಕಾರಿ ಹಣವನ್ನು ನಷ್ಟ ಮಾಡಿದ್ದಾರೆ. ಇದರ ಜತೆಗೆ ಶಾಲೆ ಆವರಣದಲ್ಲಿದ್ದ ಮರಗಳನ್ನು ತೆರವುಗೊಳಿಸಿದ್ದು, ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಕಟ್ಟಡ ತೆರವು ಸಂಬಂಧ ಪ್ರಕರಣ ದಾಖಲಿಸಲು ಪೊಲೀಸರು ಮೀನಾಮೇಷ ಎಣಿಸಿದ್ದಾರೆ. ಜತೆಗೆ ಈ ಸಂಬಂಧ ದೂರು ನೀಡಲು ಶಾಲಾ ಮುಖ್ಯ ಶಿಕ್ಷಕರು ಹಿಂದೆಮುಂದೆ ನೋಡುತ್ತಿದ್ದಾರೆ. ಈ ಕುರಿತು ಜಿಪಂ ಹಾಗೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರವೀಂದ್ರ ಆಗ್ರಹಿಸಿದ್ದಾರೆ.

ಸರಕಾರಿ ಕಟ್ಟಡವನ್ನು ನಾಶ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕ ಹಿತಾಸಕ್ತಿಗಾಗಿ ರೈತ ಸಂಘದೊಂದಿಗೆ ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಆರ್ ಟಿಐ ಕಾರ್ಯಕರ್ತ ರವೀಂದ್ರ ಎಚ್ಚರಿಸಿದ್ದಾರೆ.