ಪ್ರಭಾಸ್‌ ಅಭಿನಯದ ‘ಸಾಹೊ‘ ಸಿನಿಮಾ: ತಾಂತ್ರಿಕ ಪ್ರಭೆ, ಸೊರಗಿದ ಚಿತ್ರಕಥೆ”

 

ಬೆಂಗಳೂರು, ಆ.30, 2019 : ತಮಿಳಿನ ‘ಪೆಟ್ಟಾ’ ಸಿನಿಮಾದಲ್ಲಿ ಸ್ಟೈಲಿಶ್‌ ಆದ ಸಸ್ಪೆನ್ಸ್‌ ಥ್ರಿಲ್ಲರ್‌ ಹೇಳಲಾಗಿತ್ತು. ಅದರಲ್ಲಿ ಸಣ್ಣ ಹದದಲ್ಲಿ ಈ ಕಾಲದ ರಾಜಕೀಯವನ್ನೂ ಬೆರೆಸಲಾಗಿತ್ತು. ‘ಸಾಹೋ’ ರಾಕ್ಷಸೀ ಮನಸ್ಥಿತಿಯ, ಹೊಡೆದಾಟಗಳ ಸ್ಟೈಲಿಶ್ ಥ್ರಿಲ್ಲರ್.

ವಾಜಿ ಎಂಬ ಕಲ್ಪಿತ ನಗರಿಯ ಮಾಫಿಯಾ ಕಥನವಿದು. ಅದರ ದೊರೆಯ ಕೊಲೆಯೊಂದಿಗೆ ಕಥೆ ತನ್ನ ಉದ್ದೇಶವನ್ನು ಹೊರಹಾಕುತ್ತದೆ. ಅದೇ ಹೊತ್ತಿಗೆ ಮುಂಬೈನಲ್ಲಿ ಬ್ಯಾಂಕ್‌ಗಳ ದರೋಡೆ ಆಗುತ್ತದೆ. ಅದಕ್ಕೂ ಆ ಸಾಮ್ರಾಜ್ಯಕ್ಕೂ ಇರುವ ಸಂಬಂಧವನ್ನು ಸೂತ್ರದಲ್ಲಿ ಬೆಸೆದು ಸುಜೀತ್ ಸಿನಿಮಾ ಕಟ್ಟಿದ್ದಾರೆ. ಆ ಮಾಫಿಯಾದ ಮಹತ್ವಾಕಾಂಕ್ಷೆ ‘ಬ್ಲ್ಯಾಕ್ ಬಾಕ್ಸ್’. ಅದನ್ನು ಹುಡುಕಿ ತೆಗೆಯುವುದು ಹೂರಣ. ‘ವಿಡಿಯೊ ಗೇಮ್’ ಹಾಗೂ ‘ಟ್ರೆಷರ್‌ ಹಂಟ್‌’ನ ಜಾಯಮಾನದ ಸಿನಿಮಾ ಇದಾಗಿಬಿಡುತ್ತದೆ.

ನಂಬಿಕೆಗೆ ಯಾರೂ ಅರ್ಹರಲ್ಲದ ಮಾಫಿಯಾ ಒಂದು ಕಡೆ. ಅದರ ಜತೆಗೇ ಕೈಜೋಡಿಸಿದ ಪೊಲೀಸ್ ಅಧಿಕಾರಿ ಇನ್ನೊಂದು ಕಡೆ. ಅವರೆಲ್ಲರ ಜತೆಯಲ್ಲಿ ನಾಯಕ–ನಾಯಕಿ. ಅವರಲ್ಲಿ ಪೊಲೀಸರು ಯಾರು, ಕಳ್ಳರು ಯಾರು ಎಂದು ಪ್ರೇಕ್ಷಕನ ತಲೆಯಲ್ಲಿ ಒಂದಿಷ್ಟು ಹುಳುಗಳನ್ನು ನಿರ್ದೇಶಕರು ಇಳಿಬಿಡುತ್ತಾರೆ. ಅವೆಲ್ಲ ದಿಕ್ಕಾಪಾಲಾಗಿ ಓಡಾಡುವ ಹೊತ್ತಿಗೆ ಮಧ್ಯಂತರ. ಅಲ್ಲೊಂದು ತಿರುವು. ಮಧ್ಯೆ ಮಧ್ಯೆ ನಾಯಕ–ನಾಯಕಿಯ ನಡುವೆ ಪ್ರೇಮ ಸಲ್ಲಾಪವನ್ನು ಬಲವಂತವಾಗಿ ತೂರಿಸಲಾಗಿದೆ. ಹಾಡುಗಳೂ ಅಂತೆಯೇ. ಕುಣಿತವೂ ಇಲ್ಲ, ಮಾಧುರ್ಯವೂ ಇಲ್ಲ.
ಗಾಂಭೀರ್ಯವನ್ನು ಗಡ್ಡವಾಗಿ ಬೆಳೆಸಿಕೊಂಡಂತೆ ಕಾಣುವ ಖಳಪಡೆಯ ನಡುವೆ ಕುರುಚಲು ಗಡ್ಡದ ನಾಯಕ ನೋಡಲು ಚೆನ್ನ. ಮಾತಿನಲ್ಲಿ ಹೊಡೆಯುವ ಪಂಚ್ ಸರಿಯಾಗಿ ಕಿವಿಗೆ ಮುಟ್ಟದು. ಕಣ್ನೋಟವೇನೋ ಗುಂಡು ಹೊಡೆದಂತೆ. ಆದರೂ ಏನೋ ‘ಮಿಸ್ಸಿಂಗು’. ನಿರ್ದೇಶಕರು ಪ್ರೇಕ್ಷಕನನ್ನು ಊಹಿಸಲು ಹಚ್ಚಿ ಮೊದಲರ್ಧದ ಚಿತ್ರಕಥೆಯನ್ನು ಹೆಣೆದಿರುವ ಕ್ರಮ ‘ಬೋರ್’ ಹೊಡೆಸುತ್ತದೆ. ದ್ವಿತೀಯಾರ್ಧದಲ್ಲಿ ಇಡೀ ಸಿನಿಮಾ ಮಹಾ ಕೊಲಾಜ್‌ನಂತೆ ವ್ಯಕ್ತವಾಗುತ್ತದೆ. ತಲೆಗೆ ವಿಪರೀತ ಕೆಲಸ ಕೊಟ್ಟು, ಹೃದಯದ ಭಾವ ಒತ್ತಟ್ಟಿಗಿಟ್ಟು ಸುಜೀತ್ ಈ ಸಿನಿಮಾಗೆ ಶಿಲ್ಪಿಯಾಗಿದ್ದಾರೆ. ಮೊಹಮ್ಮದ್ ಗಿಬ್ರಾನ್, ಶಂಕರ್–ಎಹ್‌ಸಾನ್–ಲಾಯ್ ಎಷ್ಟೋ ದೃಶ್ಯಗಳನ್ನು ಮೇಲೆತ್ತಲು ಅಗತ್ಯವಿರುವ ಸಂಗೀತ ಕಿವಿಗೆ ಅಪ್ಪಳಿಸುವಂತೆ ಮಾಡಿದ್ದಾರೆ. ಹಲವು ಸನ್ನಿವೇಶಗಳಲ್ಲಿ ಹಿನ್ನೆಲೆ ಸಂಗೀತವೇ ಮುಂದಾಗಿ ಪಾತ್ರಗಳು ಮಂಕೆನಿಸುತ್ತವೆ. ಆರ್.ಮಧಿ ಸಿನಿಮಾಟೊಗ್ರಫಿಯ ಶ್ರಮ ಹಾಗೂ ಪರಿಣತರ ದೊಡ್ಡ ತಂಡದ ಸಾಹಸ ಸಂಯೋಜನೆ ಆಗೀಗ ಮೈನವಿರೇಳಿಸುತ್ತವೆ.
‘ಬಾಹುಬಲಿ’ಯಾಗಿ ಮನಸೂರೆಗೊಂಡಿದ್ದ ಪ್ರಭಾಸ್‌ ಇಲ್ಲಿ ಅಭಿನಯದಲ್ಲಿ ಕಳೆಗುಂದಿದ್ದಾರೆ. ಅವರ ದೇಹಾಕಾರ, ವೇಷಭೂಷಣಕ್ಕೆ ಒಂದಿಷ್ಟು ಅಂಕಗಳು ಸಲ್ಲಬೇಕು. ಶ್ರದ್ಧಾ ಕಪೂರ್‌ ಮುಖದಲ್ಲಿ ಅಭಿನಯದ ಗೆರೆಗೆ ಹುಡುಕಾಡಬೇಕು. ಅವರ ಪಾತ್ರಕ್ಕೂ ಪೌಷ್ಟಿಕಾಂಶದ ಕೊರತೆ ಇದೆ. ಖಳನ ಪಾತ್ರದಲ್ಲಿ ಚಂಕಿ ಪಾಂಡೆ ಅಭಿನಯ ಚಿತ್ತಾಪಹಾರಿ.
ಬಹು ತಾರಾಗಣ, ತಾಂತ್ರಿಕ ಸೌಕರ್ಯಗಳ ಅತಿ ಬೆಳಕಿನಲ್ಲಿ ಸೊರಗಿರುವ ಚಿತ್ರಕಥೆ ಎದ್ದುಕಾಣುತ್ತದೆ. ಕೊನೆಯ ಅರ್ಧ ತಾಸು ನೋಡಿದರೆ ಕನ್ನಡದ ‘ಕೆಜಿಎಫ್’ ಸಿನಿಮಾದ ಮಬ್ಬು ಬೆಳಕಿನ ರಕ್ತ–ಸಿಕ್ತ ದೃಶ್ಯಗಳು ನೆನಪಾಗುತ್ತವೆ.

( ಕೃಪೆ : ಪ್ರಜಾವಾಣಿ )

key words : sahoo-telugu-film