ಮಂಡ್ಯ ನವೆಂಬರ್,15,2025 (www.justkannada.in): ನವೆಂಬರ್ 25 ರಿಂದ 27ರವರೆಗೆ ಶ್ರೀ ರಂಗನಾಥಸ್ವಾಮಿ ಸಹಸ್ರ ಕಳಶಾಭಿಷೇಕ ಮಹೋತ್ಸವ ಕಾರ್ಯಕ್ರಮದ ನಡೆಯಲ್ಲಿದ್ದು ಈ ಸಂಬಂಧ ಅಗತ್ಯ ಸಿದ್ದತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ್ ಬಂಡಿ ಸಿದ್ದೇಗೌಡ ಅವರು ಸೂಚನೆ ನೀಡಿದರು.
ಇಂದು ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಯಾವುದೇ ಲೋಪ ದೋಷಗಳು ಇಲ್ಲದಂತೆ ಕ್ರಮಬದ್ಧವಾಗಿ ಹಾಗೂ ಶಾಸ್ತ್ರೋಕ್ತವಾಗಿ ಕಾರ್ಯಕ್ರಮ ನಡೆಯುವಂತೆ ಅಗತ್ಯ ಕ್ರಮವಹಿಸಬೇಕು ಎಂದು ತಿಳಿಸಿದ ಅವರು ಮೂರು ದಿನಗಳ ಕಾಲ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದ ಸ್ಧಳದಲ್ಲಿ ಆಂಬುಲೆನ್ಸ್ ಹಾಗೂ ವೈದ್ಯರ ತಂಡ ನಿಯೋಜಿಸುವಂತೆ ಹಾಗೂ ಕಾರ್ಯಕ್ರಮದ ಹೆಚ್ಚಿನ ಪ್ರಚಾರಕ್ಕಾಗಿ ಕಾರ್ಯಕ್ರಮ ಕುರಿತ ಕರಪತ್ರಗಳನ್ನು ಮುದ್ರಿಸಿ ಹಂಚುವುದು ಹಾಗೂ ಆಟೋ ಮೂಲಕ ಪ್ರಚಾರ ಮಾಡುವಂತೆ ಶಾಸಕರು ತಿಳಿಸಿದರು. ದೇವಾಲಯದ ಒಳ ಮತ್ತು ಹೊರಭಾಗದಲ್ಲಿ ತಳಿರು ತೋರಣಗಳಿಂದ ಸಿಂಗಾರ ವ್ಯವಸ್ಥೆ ಹಾಗೂ ದೇವಾಲಯಕ್ಕೆ ವಿಶೇಷ ಹೂವಿನ ಅಲಂಕಾರ ವ್ಯವಸ್ಥೆ ಮಾಡಲು ಅಗತ್ಯ ಕ್ರಮವಹಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ ಕುಮಾರ ಅವರು ಮಹೋತ್ಸವ ವ್ಯವಸ್ಥಿತವಾಗಿ ಒಳ ಮತ್ತು ಹೊರಾಂಗಣದಲ್ಲಿ ಆಯ್ದ ಸ್ಥಳಗಳಲ್ಲಿ ಶಾಮಿಯಾನ, ಕುರ್ಚಿ ಹಾಗೂ ಡಯಾಸ್ ವ್ಯವಸ್ಥೆ ಹಾಗೂ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಮಹೋತ್ಸವಕ್ಕೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ, ಸ್ವಚ್ಚತೆ ಹಾಗೂ ನೈರ್ಮಲ್ಯ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಪೊಲೀಸ್ ಇಲಾಖೆಯಿಂದ ಮಹೋತ್ಸವಕ್ಕೆ ಆಗಮಿಸಿರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ಎಚ್ಚರಿಕೆ ವಹಿಸುವುದು ಹಾಗೂ ಭದ್ರತಾ ವ್ಯವಸ್ಥೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ಮಹೋತ್ಸವ ಅಂಗವಾಗಿ ಸಾಂಸ್ಕೃತಿಕ ಹಾಗೂ ಸಂಗೀತೋತ್ಸವ ವ್ಯವಸ್ಥೆ ಮಾಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ, ಶ್ರೀರಂಗಪಟ್ಟಣದ ತಹಶೀಲ್ದಾರ್ ಚೇತನಾ ಯಾದವ್, ಶ್ರೀರಂಗಪಟ್ಟಣ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೇಣು, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಶ್ರೀ ರಂಗನಾಥಸ್ವಾಮಿ ಪ್ರಧಾನ ಅರ್ಚಕರಾದ ಎಲ್.ವಿಜಯಸಾರಥಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
Key words: Sahasra Kalashabhishekam, festival , Sri Ranganatha Swamy Temple







