ಚುನಾವಣಾ ರಾಜಕೀಯಕ್ಕೆ ಎಸ್.ಎ ರಾಮದಾಸ್ ನಿವೃತ್ತಿ: ಈ ದಿಢೀರ್ ನಿರ್ಧಾರಕ್ಕೆ ಕಾರಣವೇನು? ಹೆಚ್.ಎ ವೆಂಕಟೇಶ್

ಬೆಂಗಳೂರು,ಜನವರಿ,3,2026 (www.justkannada.in): ಮಾಜಿ ಸಚಿವ ಎಸ್ ಎ ರಾಮದಾಸ್ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿರುವುದು ಅತ್ಯಂತ ದುರದೃಷ್ಟಕರ. ಅವರ ಈ ದಿಢೀರ್ ನಿರ್ಧಾರಕ್ಕೆ ಕಾರಣಗಳೇನು ಎಂಬುದನ್ನು ಸಾರ್ವಜನಿಕವಾಗಿ ತಿಳಿಸಬೇಕಿದೆ ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್ ಅವರು,  ರಾಮದಾಸ್ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಹಾಗೂ ವಿವಿಧ ಹುದ್ದೆಗಳನ್ನು ಅಲಂಕರಿಸಿ ಬಿಜೆಪಿಯನ್ನು ಬಲಿಷ್ಠಗೊಳಿಸಲು ದುಡಿದಿದ್ದರು. ಶಾಸಕರಾಗಿ, ಆರೋಗ್ಯ ಸಚಿವರಾಗಿ ಸಾರ್ವಜನಿಕ ಕ್ಷೇತ್ರದಲ್ಲಿ ತಮ್ಮದೇ ಗುರುತುಗಳನ್ನು ಬಿಟ್ಟಿದ್ದಾರೆ.   35 ವರ್ಷಗಳ ಕಾಲ ಸುಧೀರ್ಘ ರಾಜಕೀಯ ಜೀವನ ನಡೆಸಿ ಈ ದಿಢೀರ್ ನಿರ್ಧಾರಕ್ಕೆ ಕಾರಣಗಳನ್ನು ಸಾರ್ವಜನಿಕವಾಗಿ ರಾಮದಾಸ್ ತಿಳಿಸಬೇಕಿದೆ. ರಾಮದಾಸ್ ಅವರನ್ನು ರಾಜಕೀಯವಾಗಿ ಟೀಕೆ ಮಾಡಿದ್ದೆ, ಆದರೆ ಈ ದಿಢೀರ್ ನಿರ್ಧಾರ ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರಿಗೆ ಆಶ್ಚರ್ಯಕರವಾಗಿದೆ. ರಾಮದಾಸ್ ಅವರು ಯಾವ ಕಾರಣಕ್ಕಾಗಿ ಇಂಥ ದೃಢ ನಿರ್ಧಾರ ಕೈಗೊಂಡರು? ಬಿಜೆಪಿಯಲ್ಲಿ ಅವರಿಗೆ ಬೇಸರಪಡಿಸಿದ ವ್ಯಕ್ತಿಗಳು ಯಾರು? ಬಿಜೆಪಿ ಅವರನ್ನು ದುಡಿಸಿಕೊಂಡು ಮೂಲೆಗುಂಪು ಮಾಡಲು ಕಾರಣವೇನು? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೆಸರಿಡಿದು ಕರೆಯುವ ಕೆಲವೇ ವ್ಯಕ್ತಿಗಳಲ್ಲಿ ರಾಮದಾಸ್ ಕೂಡ ಒಬ್ಬರು. ರಾಮದಾಸ್ ಅವರು ಗುಜರಾತ್ ಗೆ ಹೋಗಿ ನರೇಂದ್ರ ಮೋದಿಯವರ ಹಲವಾರು ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಗಮನ ಸೆಳೆದಿದ್ದರು.

ಮೈಸೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಮದಾಸ್ ಅವರನ್ನು ನೋಡುತ್ತಿದ್ದಂತೆಯೇ ಹತ್ತಿರಕ್ಕೆ ಕರೆದು ತಮ್ಮ ಪ್ರೀತಿಯನ್ನು ತೋರಿಸಿದರು. ಅವರ ಕುಟುಂಬದ ಸದಸ್ಯರ ಬಗ್ಗೆ ಕೂಡ ವಿಚಾರಿಸಿದರು. ಸ್ವತಃ ಪ್ರಧಾನಿಯವರೇ ಗೊತ್ತಿದ್ದರೂ ರಾಮದಾಸ್ ಅವರಿಗೆ ರಾಜಕೀಯ ಹಿನ್ನಡೆಯಿಂದ ಮನನೊಂದಿರುವುದು ಅವರ ಹೇಳಿಕೆಯಿಂದ ಸ್ಪಷ್ಟವಾಗಿದೆ. ನರೇಂದ್ರ ಮೋದಿಯವರು ತಮ್ಮ ಅನುಯಾಯಿಯನ್ನು ರಾಜಕೀಯವಾಗಿ ಕೈಹಿಡಿಯಲು ಸಾಧ್ಯವಾಗದೇ ಇರುವುದು , ಮೋದಿ ಇರುವುದು ಮೋದಿಗಾಗಿ ಹೊರತು ಬೇರೆ ಯಾರಿಗೂ ಅಲ್ಲ ಎಂದು ಸಾಬೀತಾದಂತಾಗಿದೆ ಎಂದು ಹೆಚ್.ಎ ವೆಂಕಟೇಶ್  ಟೀಕಿಸಿದ್ದಾರೆ.

ರಾಮದಾಸ್ ಒಂದು ಸಾಮಾನ್ಯ ಕುಟುಂಬದಿಂದ ಬಂದು ರಾಜಕೀಯವಾಗಿ ಎತ್ತರಕ್ಕೆ ಬೆಳೆದು ಇದೀಗ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂಬ ಹೇಳಿಕೆ ಬಿಜೆಪಿಯಲ್ಲಿ ರಾಮದಾಸ್ ಅವರಿಗೆ ಸಿಕ್ಕಬೇಕಾದ ಸ್ಥಾನಮಾನಗಳು ಸಿಕ್ಕಿಲ್ಲವೆಂಬ ಬೇಸರ ದೃಢಪಟ್ಟಿದೆ ಎಂದು ಹೆಚ್.ಎ ವೆಂಕಟೇಶ್ ಬಿಜೆಪಿಗೆ ಕುಟುಕಿದ್ದಾರೆ.

Key words: BJP, SA Ramdas,  retirement, electoral politics, HA Venkatesh