ಬ್ರಾಹ್ಮಣ-ಆರ್ಯ ವೈಶ್ಯ ಸಮಾಜದ 4067 ವಿದ್ಯಾರ್ಥಿಗಳಿಗೆ 5.53 ಕೋಟಿ ರೂ ವಿದ್ಯಾರ್ಥಿ ವೇತನ ಬಿಡುಗಡೆ.

ಬೆಂಗಳೂರು ಫೆಬ್ರವರಿ 27,2024(www.justkannada.in): ಬ್ರಾಹ್ಮಣ ಹಾಗೂ ಆರ್ಯ ವೈಶ್ಯ ಸಮಾಜದ 4067 ವಿದ್ಯಾರ್ಥಿಗಳಿಗೆ ಸಚಿವ ಕೃಷ್ಣ ಬೈರೇಗೌಡ  ಅವರು ಮಂಗಳವಾರ 5.53 ಕೋಟಿ ರೂ ವಿದ್ಯಾರ್ಥಿ ವೇತನವನ್ನು ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿಗಳ ಖಾತೆಗೆ ನೇರ ವರ್ಗಾವಣೆಗೊಳಿಸಿದರು.

ಹಣ ವರ್ಗಾವಣೆ ನಂತರ ವಿದ್ಯಾರ್ಥಿಗಳಿಗೆ ಶುಭ ಕೋರಿದ ಸಚಿವ ಕೃಷ್ಣಭೈರೇಗೌಡ, “ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ  ಕಾರಣಕ್ಕೆ ಬ್ರಾಹ್ಮಣ ಮತ್ತು ಆರ್ಯ ವೈಶ್ಯ ಅಭಿವೃದ್ಧಿ ನಿಗಮದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ.

ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಾಗೂ ವೃತ್ತಿಪರ ಕೋರ್ಸ್ ಅಧ್ಯಯನ ನಡೆಸುತ್ತಿರುವ ಎರಡೂ ಸಮಾಜದ 4 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಈಗಾಗಲೇ  ನೇರ ನಗದು ವರ್ಗಾವಣೆ ಮೂಲಕ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲಾಗಿದೆ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಸಮಾಜಕ್ಕೆ ಬೆಳಕಾಗಬೇಕು” ಎಂದು ಅವರು ಹಾರೈಸಿದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿ ವಿದ್ಯಾರ್ಥಿ ವೇತನದ ವಿವರ:

2023-24ನೇ ಸಾಲಿನಲ್ಲಿ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ 2710 ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಲಾಗಿದೆ. ಪದವಿಪೂರ್ವ (ಪಿಯುಸಿ) ವ್ಯಾಸಾಂಗ ಮಾಡುತ್ತಿರುವ 758 ಬ್ರಾಹ್ಮಣ ವಿದ್ಯಾರ್ಥಿಗಳಿಗೆ 15,000 ರೂ. ಎಂಬಂತೆ 113.70 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಲಾಗಿದೆ. ವೃತ್ತಿಪರ ಕೋರ್ಸ್ ವ್ಯಾಸಾಂಗದ 1952 ವಿದ್ಯಾರ್ಥಿಗಳಿಗೆ ಅವರ ಒಟ್ಟು ಶುಲ್ಕದ 2/3 ಭಾಗ ವಿದ್ಯಾರ್ಥಿ ವೇತನವಾಗಿ 2.65 ಕೋಟಿ ರೂ ಎಂಬಂತೆ ಒಟ್ಟು 3.78 ಕೋಟಿ ರೂ. ನಿಗಮದ ಮೂಲಕ ಪಾವತಿಸಲಾಗಿದೆ.

ಆರ್ಯ ವೈಶ್ಯ ಅಭಿವೃದ್ಧಿ ನಗಮ ವಿದ್ಯಾರ್ಥಿ ವೇತನದ ವಿವರ:

2023-24ನೇ ಸಾಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 1,357 ವಿದ್ಯಾರ್ಥಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿ ವೇತನ ಬಿಡುಗಡೆಗೊಳಿಸಲಾಗಿದೆ.

ವೃತ್ತಿಪರ ಪದವಿ ಮತ್ತು ಸ್ನಾತ್ತಕೋತ್ತರ ಪದವಿಗಳಿಗೆ ಗರಿಷ್ಠ 1.20 ಲಕ್ಷ ರೂ. ವರೆಗೆ ಹಾಗೂ ಪದವಿ-ಪದವಿಪೂರ್ವ ವಿದ್ಯಾರ್ಥಿಗಳಿಗೆ ಗರಿಷ್ಠ 30,000 ರೂ. ಗಳವರೆಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಒಟ್ಟಾರೆ ಈ ಸಾಲಿನಲ್ಲಿ 1357 ವಿದ್ಯಾರ್ಥಿಗಳಿಗೆ 1.75 ಕೋಟಿ ರೂ. ಹಣವನ್ನು ನೇರ ನಗದು ವರ್ಗಾವಣೆ ಮೂಲಕ ವಿದ್ಯಾರ್ಥಿಗಳ ಖಾತೆಗೆ ಜಮಾಗೊಳಿಸಲಾಗಿದೆ.

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕಿಯಾದ ಪೂರ್ಣಿಮಾ.ಪಿ.ವಿ ಹಾಗೂ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾದ ದೀಪಶ್ರೀ .ಕೆ ರವರು ಉಪಸ್ಥಿತಿಯಲ್ಲಿದ್ದರು.

Key words: Rs 5.53 crore –scholarship- released – 4067 students – Brahmin-Arya Vaishya Samaj.