ಮೈಸೂರು ದಸರಾ,ಅಕ್ಟೋಬರ್,21,2026 (www.justkannada.in): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಇಂದು ಕೊನೆಗೊಳ್ಳುತ್ತಿದ್ದು ಅರಮನೆ ಆವರಣದಲ್ಲಿ ನಡೆಯುತ್ತಿದ್ದ ಖಾಸಗಿ ನವರಾತ್ರಿ ಪೂಜಾ ಕೈಂಕರ್ಯಗಳು ಇಂದು ವಿಜಯದಶಮಿಯಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ್ ಒಡೆಯರ್ ಅವರರಿಂದ ಕಂಕಣ ವಿಸರ್ಜನೆಯೊಂದಿಗೆ ಧಾರ್ಮಿಕವಾಗಿ ಸಂಪೂರ್ಣಗೊಂಡಿತು.
ಮೈಸೂರು ಅರಮನೆಯಲ್ಲಿ ಇಂದು ಬೆಳಗ್ಗೆಯಿಂದಲೇ ಧಾರ್ಮಿಕ ವಿಧಿ-ವಿಧಾನಗಳು ಆರಂಭವಾಗಿ ಬಾಗಿಲಿಗೆ ಆಗಮಿಸಿದ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸುಗಳಿಗೆ ಪೂಜೆ ಸಲ್ಲಿಸಲಾಯಿತು.
ಬಳಿಕ ವಿಜಯಯಾತ್ರೆ ಹೊರಟು, ಅರಮನೆ ಮುಂಭಾಗದ ಭುವನೇಶ್ವರಿ ದೇವಾಲಯದ ಒಳಗಡೆ ಇರುವ ಬನ್ನಿ ಮರಕ್ಕೆ (ಶಮಿ ವೃಕ್ಷ) ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿ ಬಳಿಕ ವಾಪಸ್ ಅರಮನೆಗೆ ರಾಜವಂಶಸ್ಥರು ಮರಳಿದರು. ಈ ವಿಜಯಯಾತ್ರೆ ಮುಗಿದ ಬಳಿಕ ಅರಮನೆಯ ಶರನ್ನವರಾತ್ರಿ ಪೂಜಾಕಾರ್ಯಗಳು ಸಂಪೂರ್ಣಗೊಂಡವು.






