ಸಿಂಧೂರಿ ವಿರುದ್ದ ಕಾನೂನು ಸಮರ: IPS ರೂಪಗೆ ಮುಖಭಂಗ.

ಬೆಂಗಳೂರು, ಅಕ್ಟೋಬರ್,3,2025 (www.justkannada.in):  ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ದದ ಕಾನೂನು ಸಮರದಲ್ಲಿ ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಅವರಿಗೆ ಮುಖಭಂಗವಾಗಿದೆ.

ರೋಹಿಣಿ ಸಿಂಧೂರಿ ಅವರ ನಿರ್ದಿಷ್ಟ ಮೊಬೈಲ್‌ ಸಂಖ್ಯೆಯ ಕರೆ ದತ್ತಾಂಶ ದಾಖಲೆ (ಸಿಡಿಆರ್‌) ಕೋರಿ ಐಪಿಎಸ್‌ ಅಧಿಕಾರಿ ರೂಪಾ ಮೌದ್ಗಿಲ್‌ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ವಜಾಗೊಳಿಸಿದ್ದು,   ಆ ರೀತಿ ಸಿಡಿಆರ್‌ ಕೇಳಿರುವ ಮನವಿ ಅಪ್ರಸ್ತುತ ಮತ್ತು ಅನಗತ್ಯ ಎಂದು ಅಭಿಪ್ರಾಯಪಟ್ಟಿದೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಿನ್ನೆಲೆಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ  ತಮ್ಮ ವಿರುದ್ಧ ಹೂಡಿರುವ ಮಾನಹಾನಿ ಮೊಕದ್ದಮೆ ಭಾಗವಾಗಿ ರೋಹಿಣಿ ಅವರ ಸಿಡಿಆರ್‌ ಒದಗಿಸುವಂತೆ ದೂರ­ಸಂಪರ್ಕ ಕಂಪನಿಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ವಜಾಗೊಳಿಸಿದ  ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರಿದ್ದ ಏಕಸದಸ್ಯ ಪೀಠವು, ಈ ಸಂಬಂಧ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ ನೀಡಿರುವ ಆದೇಶ ಎತ್ತಿಹಿಡಿದಿದೆ. ಸಿಡಿಆರ್‌ ಪಡೆಯಲು ನಿರ್ದೇಶನ ಕೋರಿ ರೂಪಾ ಸಲ್ಲಿಸಿರುವ ಹಾಲಿ ಅರ್ಜಿ ವಿಚಾರಣೆ ಮತ್ತಷ್ಟು ವಿಳಂಬಗೊಳಿಸುವ ಮತ್ತೊಂದು ತಂತ್ರವಾಗಿದೆ. ಅಲ್ಲದೆ, ‘‘ರೂಪಾ ಸಿಡಿಆರ್‌ ಹಾಜರುಪಡಿಸಲು ನಿರ್ದೇಶನ ಕೋರಿರುವುದು ದೋಷಪೂರಿತವಾಗಿದೆ.  ಬಾಕಿ ಇರುವ ಪ್ರಕರಣಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ರೋಹಿಣಿ ಬಗ್ಗೆ ರೂಪಾ ಆಕ್ಷೇಪಾರ್ಹ ಪೋಸ್ಟ್‌ ಗಳನ್ನು ಫೇಸ್‌ಬುಕ್‌ ನಲ್ಲಿ ಹಾಕಿರುವುದು, ಐಎಎಸ್‌ ಅಧಿಕಾರಿಯೊಬ್ಬರ ದುರ್ಮರಣಕ್ಕೆ ರೋಹಿಣಿ ಕಾರಣ ಎಂದಿರುವುದು, ಅವರ ಚಿತ್ರಗಳನ್ನು ಸಾರ್ವಜನಿಕಗೊಳಿಸುವ ಮೂಲಕ ಅವರನ್ನು ಕೆಟ್ಟದಾಗಿ ಬಿಂಬಿಸಿರುವ ಆರೋಪವಿದೆ. ಮೇಲ್ನೋಟಕ್ಕೆ ಇದು ಮಾನಹಾನಿಯ ವ್ಯಾಪ್ತಿಗೆ ಬರಲಿದೆ, ಎಂದು ನ್ಯಾಯಪೀಠ ಹೇಳಿದೆ.

Key words: IPS Officer, Roopa Maudgill, Legal war, against, Rohini Sindhuri