ಬೆಂಗಳೂರು,ಅಕ್ಟೋಬರ್,25,2025 (www.justkannada.in): ರಾಜ್ಯದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ನವೀನತೆಯ ಹಾದಿಯತ್ತ ಸಾಗುತ್ತಿರುವ ಶಕ್ತಿಯುತ ಬೆಳವಣಿಗೆಯ ಮತ್ತೊಂದು ಉದಾಹರಣೆಯಾಗಿ, ಮಲ್ಲೇಶ್ವರಂ 18ನೇ ಅಡ್ಡರಸ್ತೆಯ ಸರ್ಕಾರಿ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್ ನಲ್ಲಿ ಕಲಿಯುತ್ತಿರುವ ಐದು ಪ್ರತಿಭಾವಂತ ವಿದ್ಯಾರ್ಥಿಗಳು ಫಸ್ಟ್ ಗ್ಲೋಬಲ್ ಚಾಲೆಂಜ್ 2025ಕ್ಕೆ ಟೀಮ್ ಇಂಡಿಯಾ ಆಗಿ ಆಯ್ಕೆಯಾಗಿದ್ದಾರೆ.
ಅಮೆಜಾನ್ ಫ್ಯೂಚರ್ ಎಂಜಿನಿಯರ್ ಮೇಕರ್ ಸ್ಪೇಸ್ ಲ್ಯಾಬ್ ನಲ್ಲಿ ತರಬೇತಿ ಪಡೆದಿರುವ ಈ ವಿದ್ಯಾರ್ಥಿಗಳು ಅಕ್ಟೋಬರ್ 29 ರಿಂದ ನವೆಂಬರ್ 1. 2025 ರವರೆಗೆ ಉತ್ತರ ಅಮೆರಿಕಾದ ಪನಾಮಾದಲ್ಲಿ ನಡೆಯಲಿರುವ ಜಾಗತಿಕ ರೋಬೋಟಿಕ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಟೀಮ್ ಸದಸ್ಯರು:
ನಿಂಗರಾಜ್ – 11ನೇ ತರಗತಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಮಲ್ಲೇಶ್ವರಂ
ಪರಶುರಾಮ್ ಎಂ. – 11ನೇ ತರಗತಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಮಲ್ಲೇಶ್ವರಂ
ಅರ್ಜುನ್ ಕೆ. ರಾಜ್ – 11ನೇ ತರಗತಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಮಲ್ಲೇಶ್ವರಂ
ಗೌರೀಶ್ ಕೆ. – 10ನೇ ತರಗತಿ, ಸರ್ಕಾರಿ ಪ್ರೌಢಶಾಲೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ
ಜಿ.ಎನ್. ಚಂದನ್ ರಾಜ್ – 9ನೇ ತರಗತಿ, ಸರ್ಕಾರಿ ಪ್ರೌಢಶಾಲೆ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ
ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಈ ವಿದ್ಯಾರ್ಥಿಗಳು ರೋಬೋಟಿಕ್ಸ್, ಕೋಡಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ತಂಡದ ಕೆಲಸದಲ್ಲಿ ಅಸಾಧಾರಣ ಕೌಶಲ್ಯ ತೋರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ, “ಮಲ್ಲೇಶ್ವರಂ ಸರ್ಕಾರಿ ಪ್ರೌಢ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳು ‘ಫಸ್ಟ್ ಗ್ಲೋಬಲ್ ಚಾಲೆಂಜ್ 2025’ ಅಂತರರಾಷ್ಟ್ರೀಯ ರೋಬೋಟಿಕ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ.
ಈ ವಿದ್ಯಾರ್ಥಿಗಳೊಂದಿಗೆ ಮಾತನಾಡಿದಾಗ ಅವರ ಆತ್ಮವಿಶ್ವಾಸ, ಚಿಂತನೆ ಹಾಗೂ ತಾಂತ್ರಿಕ ಜ್ಞಾನದಿಂದ ನಾನು ಅತ್ಯಂತ ಪ್ರಭಾವಿತನಾದೆನು. ಸರ್ಕಾರಿ ಶಾಲೆಯ ತರಗತಿಯಿಂದ ಪ್ರಾರಂಭವಾದ ಇವರ ಪಯಣವು ಇಂದು ಜಾಗತಿಕ ವೇದಿಕೆಯಲ್ಲಿ ಕರ್ನಾಟಕದ ಹೆಸರನ್ನು ಎತ್ತಿ ಹಿಡಿಯುವ ಮಟ್ಟಕ್ಕೇರಿರುವುದು ನಮ್ಮ ರಾಜ್ಯದ ಶಿಕ್ಷಣ ಕ್ಷೇತ್ರದ ಬಲವರ್ಧಿತ ಪರಿಸರದ ಪ್ರತಿಬಿಂಬವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಐದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ಪನಾಮಾದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಅವರು ಯಶಸ್ಸು ಸಾಧಿಸಿ, ವಿಶ್ವದ ಮುಂದೆಯೂ ಕರ್ನಾಟಕದ ಸರ್ಕಾರೀ ಶಾಲಾ ಶಿಕ್ಷಣದ ಕೀರ್ತಿಯನ್ನು ಬೆಳಗಲಿ ಎಂಬುದು ನನ್ನ ಹಾರೈಕೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
Key words: government school, Five students, selected, global robotics, competition.







