ಶಿವಮೊಗ್ಗದಲ್ಲಿ ಗಲಾಟೆ ಪ್ರಕರಣ: ನ್ಯಾಯಾಂಗ ತನಿಖೆಗೆ ವಹಿಸುವಂತೆ ನಳೀನ್ ಕುಮಾರ್ ಕಟೀಲ್ ಆಗ್ರಹ

ಶಿವಮೊಗ್ಗ,ಅಕ್ಟೋಬರ್,5,2023(www.justkannada.in):  ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆಯ ವೇಳೆ ಕಲ್ಲು ತೂರಾಟ, ಗಲಾಟೆ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ವಹಿಸಬೇಕು  ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆಗ್ರಹಿಸಿದರು.

ರಾಗಿಗುಡ್ಡದಲ್ಲಿ ನಡೆದ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬಿಜೆಪಿ ನಿಯೋಗ,  ಸಂತ್ರಸ್ತರ ಮನೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿತು. ನಂತರ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ರಾಗಿಗುಡ್ಡದ ಘಟನೆ ಸಂಪೂರ್ಣ ಪೂರ್ವನಿಯೋಜಿತವಾಗಿದೆ. ಹಿಂದೂಗಳ ಮನೆಗಳನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಸುಮಾರು 2 ಗಂಟೆಗಳ ಕಾಲ ಹಿಂದೂಗಳ ಮನೆ ಮೇಲೆ ಕಲ್ಲು ತೂರಲಾಗಿದೆ. ಮಹಿಳೆಯರ ಮೇಲೂ ಹಲ್ಲೆ ಮಾಡಲಾಗಿದೆ. ಇದನ್ನು ತಪ್ಪಿಸಲು ಬಂದ ಹಿಂದೂ ಯುವಕರ ಮೇಲೆ ಹಲ್ಲೆ ಮಾಡಲಾಗಿದೆ. ಇದೊಂದು ಪೂರ್ವ ನಿಯೋಜಿತ ಘಟನೆ ಎಂದು ಅಲ್ಲಿನ ಪ್ರತ್ಯಕ್ಷ ದರ್ಶಿಗಳ ಹೇಳಿಕೆ ಹಾಗೂ ನಾವು ಕಣ್ಣಾರೆ ನೋಡಿರುವುದರಿಂದ ತಿಳಿಯುತ್ತದೆ  ಎಂದರು.

ಈದ್‍ಮಿಲಾದ್ ಪೂರ್ವದಲ್ಲಿ ನಗರದಲ್ಲಿ ಗಣೇಶನ ಹಬ್ಬದ ಮೆರವಣಿಗೆ ನಡೆದಿತ್ತು. ಅದು  ಸಂಪೂರ್ಣ ಶಾಂತಿಯುತವಾಗಿತ್ತು. ರಾಗಿಗುಡ್ಡದಲ್ಲಿಯೂ ಕೂಡ ಕೂಡ ಗಣಪತಿಗಳನ್ನು ಬಿಡಲಾಗಿತ್ತು. ಆಗಲೂ ಗಲಾಟೆ ಇರಲಿಲ್ಲ. ಆದರೆ ಈದ್ ಮಿಲಾದ್ ಅಂಗವಾಗಿ ನಗರದ ತುಂಬೆಲ್ಲಾ ವಿಶೇಷ ಅಲಂಕಾರ ಮಾಡಲಾಗಿತ್ತು. ಸಂಬಂಧವೇ ಇಲ್ಲದ ಕಟೌಟ್‍ ಗಳನ್ನು ನಿಲ್ಲಿಸಲಾಗಿತ್ತು. ಈ ಎಲ್ಲ ಘಟನೆಗಳ ಹಿಂದೆ ಪೊಲೀಸರ ವೈಫಲ್ಯವಿದೆ. ಸರ್ಕಾರದ ಸಹಕಾರವಿದೆ. ಭಯ ಹುಟ್ಟಿಸುವ ಕತ್ತಿಗಳನ್ನು ಪೊಲೀಸರು ತೆರವುಗೊಳಿಸಬೇಕಿತ್ತು. ಅದೇಕೆ ತೆರವುಗೊಳಿಸಲಿಲ್ಲವೋ ಗೊತ್ತಿಲ್ಲ ಎಂದು ಕಿಡಿಕಾರಿದರು.

Key words: Riot case – Shimoga- Naleen Kumar Kateel -demands -judicial -investigation