ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣ: ರಾಜ್ಯ ಸರ್ಕಾರದ ವಿರುದ್ಧ ಕೆ.ಎಸ್ ಈಶ್ವರಪ್ಪ ಆಕ್ರೋಶ.

ಶಿವಮೊಗ್ಗ,ಅಕ್ಟೋಬರ್,2,2023(www.justkannada.in): ಶಿವಮೊಗ್ಗದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ ಭೇಟಿ ನೀಡಿ ಕಲ್ಲು ತೂರಾಟದಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದರು.ಬಳಿಕ ಗಾಯಗೊಂಡವರಿಗೆ ಆರ್ಥಿಕ ನೆರವು ನೀಡಿದರು.  ಕಲ್ಲು ತೂರಾಟದಲ್ಲಿ 7 ಜನ ಗಾಯಗೊಂಡಿದ್ದರು. ರೋಹನ್, ಧನಂಜಯ್, ಮಾರುತಿ, ಪ್ರದೀಪ್, ಕಿರಣ್, ಭರತ್, ಶಾಂತಮ್ಮಗೆ ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬಳಿಕ ಮಾತನಾಡಿದ ಕೆ.ಎಸ್ ಈಶ್ವರಪ್ಪ, ನಿನ್ನೆ ನಡೆದ ಮುಸಲ್ಮಾನರ ಮೆರವಣಿಗೆ ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು. ಮೆರವಣಿಗೆಯಲ್ಲಿ ಕೈಯಲ್ಲಿ ತಲ್ವಾರ್ ಹಿಡಿದುಕೊಂಡು ಹೋಗಿದ್ದರು. ಇದು ಯಾರಿಗೆ ಎಚ್ಚರಿಕೆ ಹಿಂದೂ ಸಮಾಜದವರಿಗಾ? ಈ ಸರ್ಕಾರದಿಂಧ ಪೊಲೀಸರು ಹೆದರಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ಈದ್ ಮಿಲಾದ್ ಮೆರವಣಿಗೆ ವೇಳೆ ಗಲಾಟೆ ನಡೆಯುತ್ತೆ ಎಂದು ಪೊಲೀಸರು, ಸರ್ಕಾರಕ್ಕೆ ಗೊತ್ತಿರಲಿಲ್ಲವಾ? ಇದು ಮುಸ್ಲಿಮರ ಹಬ್ಬವಲ್ಲ, ಹಿಂದೂಗಳನ್ನು ಹೆದರಿಸಲು ಮಾಡಿದ ಸಂಚು. ರಾಗಿಗುಡ್ಡದಲ್ಲಿ ಮುಖಕ್ಕೆ ಕಪ್ಪು ಬಟ್ಟೆ ಧರಿಸಿಕೊಂಡು ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಪೊಲೀಸ್ ಸಿಬ್ಬಂದಿ ಮೇಲೂ ಹಲ್ಲೆ ನಡೆದಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಲ್ಲೆಯಿಂದ ಪಾರಾಗಿದ್ದಾರೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

ತಲ್ವಾರ್ ಹಿಡಿದು ಮೆರವಣಿಗೆ ಮಾಡಿದವರನ್ನ ಇನ್ನೂ ಬಂಧಿಸಿಲ್ಲ. ಆದರೆ ಗೃಹ ಸಚಿವರು ಯಾರೂ ತಲ್ವಾರ್​ ಹಿಡಿದಿಲ್ಲ ಎಂದಿದ್ದಾರೆ. ಗೃಹ ಮಂತ್ರಿಯಾಗಲು ಪರಮೇಶ್ವರ್ ಯೋಗ್ಯರಲ್ಲ ಎಂದು ಈಶ್ವರಪ್ಪ ಹರಿಹಾಯ್ದರು.

Key words: Riot case – Eid Milad – KS Eshwarappa- outraged -against – state government.