ಎಸಿಬಿ ದಾಳಿಯಿಂದ ಬಿಡಿಎದಲ್ಲಿನ ಸಾಮಾನ್ಯ ‘ಮಾಲಿ’ಯ ಶ್ರೀಮಂತಿಕೆ ಬಹಿರಂಗ.

ಬೆಂಗಳೂರು, ಜೂನ್ 18, 2022(www.justkannada.in): ಶುಕ್ರವಾದಂದು ಭ್ರಷ್ಟಾಚಾರ ನಿರ್ಮೂಲನಾ ದಳ (ಎಸಿಬಿ), 21 ಸರ್ಕಾರಿ ಅಧಿಕಾರಿಗಳ ಕಚೇರಿಗಳ ಮೇಲೆ ನಡೆಸಿದ ದಾಳಿಯಲ್ಲಿ ಶಿವಲಿಂಗಯ್ಯ ಎಂಬುವವರ ಹೆಸರು ವಿಶೇಷವಾಗಿ ಕಂಡು ಬಂದಿದೆ.

ಶಿವಲಿಂಗಯ್ಯ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಬನಶಂಕರಿ ಕಚೇರಿಯಲ್ಲಿ ಸಾಮಾನ್ಯ ಮಾಲಿಯಾಗಿ (ತೋಟಗಾರ) ಸೇವೆ ಸಲ್ಲಿಸುತ್ತಿದ್ದು, ಇವರ ಮಾಸಿಕ ವೇತನ ಕೇವಲ ರೂ.೪೮,೦೦೦ವಾಗಿದೆ. ಆದರೆ ದಾಳಿ ಸಮಯದಲ್ಲಿ ಇವರ ಬಳಿ ಬೆಂಗಳೂರು ನಗರದಲ್ಲಿ ನಾಲ್ಕು ಐಷಾರಾಮಿ ಮನೆಗಳು, ದೊಡ್ಡಕಲ್ಲಸಂದ್ರದಲ್ಲಿ ಒಂದು ನಿವೇಶನ, ೫೧೦ ಗ್ರಾಂ ಚಿನ್ನಾಭರಣ, ೭೦೦ ಗ್ರಾಂ ಬೆಳ್ಳಿ ಆಭರಣಗಳು, ಚನ್ನಪಟ್ಟಣ ತಾಲ್ಲೂಕಿನಲ್ಲಿ ೯.೯ ಎಕರೆ ಜಮೀನು, ಮೂರು ಕಾರುಗಳು, ಹಲವು ದ್ವಿಚಕ್ರ ವಾಹನಗಳು, ರೂ.೮೦,೦೦೦ ನಗದು, ರೂ.೮೦,೦೦೦ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ರೂ.೧೦ ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳಿರುವುದು ಬಹಿರಂಗಗೊಂಡಿದೆ.

ಬಿಡಿಎ ಕಚೇರಿಯಲ್ಲಿ ಕೇವಲ ಸಸಿಗಳು ಹಾಗೂ ಮರಗಳ ನಿರ್ವಹಣೆಯನ್ನು ಮಾಡುವ ಓರ್ವ ಸಾಮಾನ್ಯ ಮಾಲಿ ಕಾನೂನುಬಾಹಿರವಾಗಿ ಇಷ್ಟು ಬೃಹತ್ ಪ್ರಮಾಣದ ಆಸ್ತಿಯನ್ನು ಹೇಗೆ ಗಳಿಸುವುದು ಸಾಧ್ಯವಾಯಿತು ಎಂದು ಊಹಿಸುವುದು ಕಷ್ಟವಾಗಬಹುದು.

ಇಲ್ಲಿ ಸ್ವಾರಸ್ಯಕರವಾಗಿರುವ ವಿಷಯವೇನೆಂದರೆ ಶಿವಲಿಂಗಯ್ಯ ಕೇವಲ ದಾಖಲೆಗಳಲ್ಲಿ ಮಾತ್ರವೇ ಮಾಲಿಯಾಗಿದ್ದಾರೆ. ಆದರೆ ಬಿಡಿಎ ಇವರನ್ನು ಕೆಲವು ವರ್ಷಗಳ ಹಿಂದೆಯೇ ತೋಟಗಾರಿಕಾ ಇಲಾಖೆಗೆ ವರ್ಗಾವಣೆ ಮಾಡಿದ್ದು, ಬನಶಂಕರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಒಬ್ಬರ ಕೈ ಕೆಳಗೆ ವರ್ಕ್ ಇನ್ಸ್ ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ತಿಂಗಳು ನಿವೃತ್ತರಾಗಲಿದ್ದಾರೆ. ಆದರೆ ಇವರ ಹುದ್ದೆಯ ಹೆಸರು ಮಾತ್ರ ಬದಲಾಗಿಲ್ಲ, ಎಂದು ಬಿಡಿಎ ಮೂಲಗಳಿಂದ ತಿಳಿದು ಬಂದಿದೆ. ವರ್ಕ್ ಇನ್ಸ್ಪೆಕ್ಟರ್ ಗ್ರೂಪ್ ‘ಸಿ’ ಅಡಿ ಬರುವಂತಹ ಒಂದು ತಾಂತ್ರಿಕೇತರ ಹುದ್ದೆಯಾಗಿದ್ದು, ಬಿಡಿಎ ಕಾಮಗಾರಿಗಳ ಮೊದಲ ಹಂತದ ಗುಣಮಟ್ಟ ನಿಯಂತ್ರಣದ ಕೆಲಸಗಳಿಗೆ ಜವಾಬ್ದಾರರಾಗಿರುತ್ತಾರೆ.

ಆಶ್ಚರ್ಯಕರವಾಗಿ ಇನ್ನೂ ಇಬ್ಬರು ನಿವೃತ್ತ ಅಧಿಕಾರಿಗಳ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ. ಅವರಲ್ಲಿ ಡಾ. ಕೆ. ಜನಾರ್ಧನ್, ನಿವೃತ್ತ ಕುಲಸಚಿವರು (ಮೌಲ್ಯಮಾಪನ) ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಇವರೂ ಸೇರಿದ್ದಾರೆ. ಇವರು ಬೆಂಗಳೂರಿನಲ್ಲಿ ಮೂರು ಫ್ಲಾಟ್‌ ಗಳು, ಎರಡು ನಿವೇಶನಗಳ ಜೊತೆಗೆ ಒಂದು ವಾಸದ ಮನೆ ಹಾಗೂ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಬಂಗಾರುಪಲೇಂನಲ್ಲಿ ಒಂದು ಶಾಲೆಯನ್ನು ನಡೆಸುತ್ತಿದ್ದಾರೆ. ಜೊತೆಗೆ ಚಿತ್ತೂರಿನಲ್ಲಿ ೭.೩೦ ಎಕರೆ ಜಮೀನು, ೪೦೧ ಗ್ರಾಂ ಚಿನ್ನಾಭರಣ, ೩.೫೭೫ ಗ್ರಾಂ ಬೆಳ್ಳಿ ವಸ್ತುಗಳು, ನಾಲ್ಕು ಕಾರುಗಳೂ, ಮೂರು ದ್ವಿಚಕ್ರ ವಾಹನಗಳು, ರೂ.೩.೧೭ ಲಕ್ಷ ನಗದು, ರೂ.೧೭.೮ ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳ ಒಡೆಯರಾಗಿದ್ದಾರೆ. ಇವರ ಒಬ್ಬ ಮಗ ಬೆಂಗಳೂರಿನ ಐಷಾರಾಮಿ ಬಡಾವಣೆಯಲ್ಲಿರುವ ಕಸ್ತೂರಬಾ ರಸ್ತೆಯಲ್ಲಿ ಹೋಟೆಲ್ ಒಂದನ್ನು ನಿರ್ಮಿಸುತ್ತಿದ್ದಾರೆ. ಇವರ ಪತ್ನಿ ಬೆಂಗಳೂರು ವಿಶ್ವವಿದ್ಯಾಲಯದ ತೆಲುಗು ವಿಭಾಗದ ಮುಖ್ಯಸ್ಥರಾಗಿದ್ದಾರೆ.

ಇನ್ನು ದಾಳಿ ನಡೆಸಿದಂತಹ ಎರಡನೆಯ ನಿವೃತ್ತ ಅಧಿಕಾರಿ ಮಂಜುನಾಥ್ ಜಿ, ಪಿಡಬ್ಲ್ಯುಡಿ ಇಲಾಖೆಯಲ್ಲಿ ಸೂಪರಿಂಟೆಂಡಿಂಗ್ ಇಂಜಿನಿಯರ್ ಆಗಿದ್ದಾರೆ. ಬೆಂಗಳೂರಿನಲ್ಲಿ ಇಬ್ಬರು ಅಧಿಕಾರಿಗಳ ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ. ಆ ಪೈಕಿ ಮಧುಸೂದನ್ ವಿ., ಜಿಲ್ಲಾ ರಿಜಿಸ್ಟ್ರಾರ್, ಇನ್ಸ್ ಪೆಕ್ಟರ್ ಜನರಲ್ ಆಫ್ ರಿಜಿಸ್ಟ್ರೇಷನ್ಸ್ ಹಾಗೂ ಡಿ. ಸಿದ್ದಪ್ಪ, ಉಪ ಮುಖ್ಯ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಸೇರಿದ್ದಾರೆ.

ಇವರ ಜೊತೆಗೆ, ಬಾಗಲಕೋಟೆಯ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಯಲ್ಲಪ್ಪ ಪಡಸಾಲಿ ಅವರ ಕಚೇರಿ ಮತ್ತು ನಿವಾಸಗಳ ಮೇಲೂ ದಾಳಿ ನಡೆಸಲಾಗಿದೆ. ಇವರ ಬಳಿ ಧಾರವಾಡ ಜಿಲ್ಲೆಯಲ್ಲಿ ಎರಡು ಮನೆಗಳು, ಕೊಪ್ಪಳದಲ್ಲಿ ಒಂದು ಮನೆ, ಹುಬ್ಬಳ್ಳಿಯಲ್ಲಿ ಒಂದು ನಿವೇಶನ, ಧಾರವಾಡ ಜಿಲ್ಲೆಯಲ್ಲಿ ಮೂರು ವಾಣಿಜ್ಯ ಸಂಕೀರ್ಣಗಳ ಜೊತೆಗೆ ಇನ್ನೂ ಅಪಾರವಾದ ಆಸ್ತಿ ಇರುವುದು ಕಂಡು ಬಂದಿದೆ. ಎಸಿಬಿ ಅಧಿಕಾರಿಗಳ ಪ್ರಕಾರ ದಾಳಿಯಲ್ಲಿ, ಒಟ್ಟು ೮೦ ತಂಡಗಳಲ್ಲಿ ೫೫೫ ಅಧಿಕಾರಿಗಳು ಪಾಲ್ಗೊಂಡಿದ್ದರು.

ಎಸಿಬಿ ವಿಭಾಗದ ಎಸ್‌ ಪಿ (ಆಡಳಿತ) ಉಮಾ ಪ್ರಶಾಂತ್ ಅವರು ತಿಳಿಸಿರುವಂತೆ ಶನಿವಾರವೂ ಸಹ ದಾಳಿಗಳು ಮುಂದುವರೆಯಲಿದ್ದು, ಬೆಂಗಳೂರಿನಲ್ಲಿ ದಾಳಿಗಳು ಅಂತ್ಯಗೊಂಡಿದೆ.

ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತಿಳಿಸಿರುವಂತೆ ಈ ದಾಳಿಗಳನ್ನು ‘ಸ್ವಚ್ಛ ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತ’ವನ್ನು ಖಾತ್ರಿಪಡಿಸುವ ಸಲುವಾಗಿ ಈ ದಾಳಿಗಳನ್ನು ನಡೆಸಲಾಗಿದೆ. “ದಾಳಿಗಳನ್ನು ನಡೆಸಿದಂತಹ ಸರ್ಕಾರಿ ಅಧಿಕಾರಿಗಳು ಅವರ ಬಳಿ ಅಷ್ಟು ಮೌಲ್ಯದ ಆಸ್ತಿ ಎಲ್ಲಿಂದ ಬಂತು? ಎಂಬುದಕ್ಕೆ ಸ್ಪಷ್ಟನೆಯನ್ನು ನೀಡಬೇಕಾಗುತ್ತದೆ. ಅದಕ್ಕೆ ಕಾಲವಾಕಾಶ ಬೇಕಾಗುತ್ತದೆ. ಅವರು ನ್ಯಾಯಲಯಕ್ಕೂ ಹೋಗಬಹುದು, ಇದರಿಂದ ದೀರ್ಘಾವಧಿಯವರೆಗೂ ನ್ಯಾಯಾಲಯ ಹೋರಾಟ ನಡೆಯುತ್ತದೆ. ಆದರೆ ಒಟ್ಟಾರೆಯಾಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡುವುದು ಇದರ ತಾತ್ಪರ್ಯವಾಗಿದೆ,” ಎಂದು ವಿವರಿಸಿದರು.

ಮಾರ್ಚ್ 16ರಂದು ಎಸಿಬಿ ೧೮ ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಒಟ್ಟು ೭೭ ಸ್ಥಳಗಳ ಮೇಲೆ ದಾಳಿ ನಡೆಸಲಾಯಿತು. ಬೃಹತ್ ಪ್ರಮಾಣದ ಆಸ್ತಿ ಪತ್ತೆಯಾಗಿದೆ ಎಂದರೇ ಅದರರ್ಥ ಅವರು ಕಾನೂನುಬಾಹಿರವಾಗಿಯೇ ಗಳಿಸಿದ್ದಾರೆ ಎಂದಲ್ಲ. ಪ್ರಾಥಮಿಕ ತನಿಖೆಯ ಮೂಲಕ ಆರೋಪ ಮಾಡಿದ ನಂತರ, ಎಸಿಬಿ ಅಂತಹ ಅಧಿಕಾರಿಗಳನ್ನು ಭ್ರಷ್ಟಾಚಾರ ನಿರ್ಮೂಲನಾ ಕಾಯ್ದೆಯಡಿ ಬುಕ್ ಮಾಡುತ್ತದೆ. ಇದಾದ ನಂತರ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಸರ್ಕಾರದ ಇಲಾಖೆಯಿಂದ ಅನುಮೋದನೆ ಪಡೆಯುವ ಪ್ರಕ್ರಿಯೆ ನಡೆಯುತ್ತದೆ. ಇದೊಂದು ಬಹಳ ಶ್ರಮದಾಯಕ ಕೆಲಸ. ಆದರೆ ಇಂತಹ ಪ್ರಕರಣಗಳಲ್ಲಿ ಬಹುಪಾಲು ಅಧಿಕಾರಿಗಳು ಭ್ರಷ್ಟಾಚಾರ ಆರೋಪಗಳಿಂದ ಮುಕ್ತಗೊಂಡು ಪುನಃ ಅವರ ಹುದ್ದೆಗಳಲ್ಲಿ ನೇಮಕಗೊಳ್ಳುತ್ತಾರೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

Key words: richness – BDA – Mali – ACB- attack.