ಇಡಿ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳದಂತೆ ಎಚ್ಚರಿಕೆ ಅಗತ್ಯ- ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಕಿವಿಮಾತು.

ಬೆಂಗಳೂರು,ಸೆಪ್ಟಂಬರ್,24,2021(www.justkannada.in):  ಜನಪರ ಸಮಸ್ಯೆಗಳಿಗೆ ಸ್ಪಂದಿಸಿದಾಗ ಮಾತ್ರ ಜನಪ್ರತಿನಿಧಿಗಳಿಗೆ ಗೌರವ ದೊರಕುತ್ತದೆ. ಇಡಿ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು ಎಂದು ಲೋಕಸಭೆ ಸ್ಪೀಕರ್ ಓಂಬಿರ್ಲಾ ಅವರು ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಶಾಸಕರಿಗೆ ಕಿವಿಮಾತು ಹೇಳಿದರು.

ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಲೋಕಸಭೆ ಸ್ಪೀಕರ್​​ ಓಂ ಬಿರ್ಲಾ ಅವರು, ವಿಧಾನಸೌಧ ನಿರ್ಮಿಸಿದ ಕೆಂಗಲ್ ಹನುಮಂತಯ್ಯರಿಗೆ ಧನ್ಯವಾದ ಹೇಳುತ್ತೇನೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡರನ್ನ ಸ್ಮರಿಸುತ್ತೇನೆ. ಜತೆಗೆ ಯಡಿಯೂರಪ್ಪರನ್ನ ಗೌರವಿಸಿದ್ದು ಹೆಮ್ಮೆಯ ವಿಷಯ.  ವಿಧಾನಸಭೆ, ಪರಿಷತ್ ಸದಸ್ಯರ ಭೇಟಿ ಸಂತಸ ತಂದಿದೆ ಎಂದು ನುಡಿದರು.

ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಲೋಕಸಭೆ ಸ್ಪೀಕರ್ ಭಾಷಣ ಮಾಡಿದ್ದು, ಸಂಸದೀಯ ಮೌಲ್ಯಗಳ ರಕ್ಷಣೆ ಬಗ್ಗೆ ಮಾತನಾಡಿದ ಸ್ಪೀಕರ್​ ಓಂ ಬಿರ್ಲಾ, ಜನಪ್ರತಿನಿಧಿಗಳು ಜನ ಕಲ್ಯಾಣಕ್ಕೆ ಒತ್ತು ನೀಡಬೇಕು. ಜನಪರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನಪರ ಸಮಸ್ಯೆಗಳು ಸದನದಲ್ಲಿ ಚರ್ಚೆಯಾಗಬೇಕು.  ವಿಶ್ವದಲ್ಲೇ ಬಾರದಲ್ಲಿ ಉತ್ತಮ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಇಡಿ ವ್ಯವಸ್ಥೆ ಬಗ್ಗೆ ಜನರು ನಂಬಿಕೆ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಬೇಕು.  ನಾನು ಲಕ್ಷಾಂತರ ಜನರ ಪ್ರತಿನಿಧಿಯಾಗಿದ್ದೇನೆ ಎಂದು ಅರಿತುಕೊಳ್ಳಿ. ಜನಪ್ರತಿನಿಧಿಯಾಗಿ ನನ್ನ ಕೆಲಸ ಏನು ಎಂಬುದನ್ನ ಅರಿತು ಕೆಲಸ ಮಾಡಿ ಎಂದು ಸಲಹೆ ನೀಡಿದರು.

ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಶಕ್ತವಾಗಿದೆ. ಜನತೆಯ ಪರವಾಗಿ ನಾವು ಕೆಲಸ ಮಾಡಬೇಕಿದೆ. ಜನರ ಪರವಾದ ಕಾನೂನುಗಳನ್ನು ತರಬೇಕಿದೆ. ಪ್ರಜಾಪ್ರಭುತ್ವ ರಕ್ಷಣಾ ವ್ಯವಸ್ಥೆ ಅತ್ಯವಶ್ಯಕವಾಗಿದ್ದು, ನಮ್ಮ ಶಾಸನಗಳು ಜನರಿಗೆ ಪೂರಕವಾಗಿರಬೇಕು. ಜನರ‌ಕಲ್ಯಾಣಕ್ಕಾಗಿ ಕಾನೂನು ರಚಿಸಿ, ಅವರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸಬೇಕು ಎಂದರು.

Key words: Respect – people-representatives- only – respond -Lok Sabha Speaker -Om Birla