ವಿವಿಧ ಜಾತಿಗಳಿಗೆ ಮೀಸಲಾತಿ ವಿಚಾರ:  ಪರಿಶೀಲನಾ ಹಂತದಲ್ಲಿದೆ- ಜಯಪ್ರಕಾಶ್ ಹೆಗ್ಡೆ

ಬೆಂಗಳೂರು,ಮಾರ್ಚ್,15,2023(www.justkannada.in): ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಹಾಗೂ  . ಒಕ್ಕಲಿಗ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಮನವಿ ಬಂದಿದ್ದು ಇದು ಪರಿಶೀಲನಾ ಹಂತದಲ್ಲಿದೆ ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದರು.

ವಿವಿಧ ಜಾತಿಗಳಿಗೆ ಮೀಸಲಾತಿ ನೀಡುವ ವಿಚಾರವಾಗಿ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವರದಿಯನ್ನು ಸಿದ್ದಪಡಿಸಿ ರಾಜ್ಯಸರ್ಕಾರಕ್ಕೆ ಈಗಾಗಲೇ ಸಲ್ಲಿಸಿದೆ. ಈ ಬಗ್ಗೆ ನಗರದ ದೇವರಾಜು‌ ಅರಸು‌ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ,  ಹಲವು ಜಿಲ್ಲೆಗಳಲ್ಲಿ ಸಾಮಾಜಿಕ‌, ಶೈಕ್ಷಣಿಕ ಸ್ಥಿತಿಗತಿ ಅಧ್ಯಯನ ‌ನಡೆಯುತ್ತಿದೆ. ಸರ್ಕಾರಿ‌ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಿಂದಲೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಕಂಪ್ಯೂಟರ್ ಮೂಲಕ ಸರ್ಕಾರಿ ನೌಕರರ ದಾಖಲಾತಿ ಸಂಗ್ರಹ ಆಗುತ್ತಿದೆ ಎಂದರು.

ಸಣ್ಣ ಅಥವಾ ದೊಡ್ಡ ಸಮುದಾಯ ಆಗಿರಲಿ ಶೈಕ್ಷಣಿಕ ಹಾಗೂ ಉದ್ಯೋಗ ಸ್ಥಿತಿ ಗತಿ ಗಮನಿಸಿ ಮೀಸಲಾತಿ ನೀಡಬೇಕು. ರಾಜ್ಯದಲ್ಲಿ ಚಿಕ್ಕಪುಟ್ಟ 46 ಸಮುದಾಯ ಇವೆ. ಈ ಪೈಕಿ ಮೂನ್ನೂರಕ್ಕೂ ಕಡಿಮೆ ಜನಸಂಖ್ಯೆ ಇರುವವರನ್ನು ಗುರುತಿಸಿ ವರದಿ ನೀಡಲಾಗಿದೆ. ಸರ್ಕಾರದ ಸೌಲಭ್ಯಗಳು ಈ ಸಮುದಾಯಕ್ಕೆ ಇನ್ನೂ ತಲುಪಲಿಲ್ಲ. ಯಾವ ವರ್ಗದಲ್ಲಿ ಮೀಸಲಾತಿ ಇವೆ ಎಂಬುವುದು ಈ ಸಮುದಾಯದಕ್ಕೆ ಮಾಹಿತಿ ಇಲ್ಲ. ಇಂತಹ ಸಮುದಾಯಕ್ಕೆ ಮೀಸಲಾತಿ ಕೊಡಬೇಕು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿಸಿದರು.

ಕಾಂತರಾಜು ವರದಿ ಜಾರಿ ವಿಚಾರ ಕುರಿತು ಪ್ರತಿಕ್ರಿಯಿಸಿದ ಜಯಪ್ರಕಾಶ ಹೆಗ್ಡೆ, ವರದಿಗೆ ಸದಸ್ಯ ಕಾರ್ಯದರ್ಶಿ ಸಹಿ ಹಾಕಿರಲಿಲ್ಲ. ಹಾಗಾಗಿ ಸರ್ಕಾರ ಅದನ್ನು ಸ್ವೀಕಾರ ಮಾಡಲಿಲ್ಲ, ಈಗ ಆಯೋಗದಿಂದ ಪತ್ರ ಬರೆದು ಹೊಸದಾಗಿ ವರದಿ ಸಿದ್ಧಪಡಿಸಬೇಕೇ ಎಂದು ಕೇಳಲಾಗಿದೆ. ಎಲ್ಲವೂ ಸರ್ಕಾರದ ಮೇಲೆ ಅವಲಂಬಿತವಾಗಿದೆ. ರಾಜ್ಯದಲ್ಲಿ ಸರಿಸುಮಾರು 900 ಜಾತಿಗಳ ಉಲ್ಲೇಖ ಇದೆ. ಮೀಸಲಾತಿಗಾಗಿ ಸೇರ್ಪಡೆ ಅಥವಾ ರದ್ದತಿ ಪ್ರಕ್ರಿಯೆಯಲ್ಲಿ ಕೆಲವೊಂದು ಜಾತಿಗಳು ವರ್ಗಾವಣೆಗೊಂಡಿವೆ. ಈ ಹಿನ್ನಲೆಯಲ್ಲಿ ಜಾತಿಗಳ ಮರುವಿಂಗಡನೆ ಆಗಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ. ಮರುವಿಂಗಡನೆ ಆದ ಪಟ್ಟಿಯನ್ನು ಪ್ರತಿ ಗ್ರಾಮ ಪಂಚಾಯತಿಗೆ ನೀಡುತ್ತೇವೆ. ಇದರಿಂದ ಯಾವ ಜಾತಿ ಯಾವ ವರ್ಗದಲ್ಲಿ ಇದೆ ಎಂದು ತಿಳಿಯುತ್ತದೆ. ಇದು ಆಯೋಗದ ಆಶಯವಾಗಿದೆ ಎಂದರು.

Key words: Reservation- issue – different- castes-consideration – Jayaprakash Hegde