ಜಿ.ಎನ್.ಮೋಹನ್’ರ ಕ್ವಾರಂಟೈನ್ ಓದು: ಇಡೀ ಡಿಕ್ಷನರಿಯನ್ನೇ ಉರು ಹೊಡೆದ ಸುಧಾಮೂರ್ತಿ

‘Ladies need not apply’
ಹಾಗೊಂದು ಸಾಲು ಕಂಡದ್ದೇ ಅವರು ಕುದ್ದು ಹೋದರು.
ತಕ್ಷಣ ಒಂದು ಪೋಸ್ಟ್ ಕಾರ್ಡ್ ತೆಗೆದುಕೊಂಡವರೇ ‘ಹಾಗೆ ಪ್ರಕಟಣೆ ಕೊಡಲು ಮನಸ್ಸು ಹೇಗೆ ಬಂತು’ ಎಂದು ಬರೆದು ಪೋಸ್ಟ್ ಬಾಕ್ಸ್ ಗೆ ಹಾಕಿ ನಿಟ್ಟುಸಿರುಬಿಟ್ಟರು.

ಹಾಗೆ ನೇರಾನೇರ ಪತ್ರ ಬರೆದದ್ದು ಮತ್ಯಾರೂ ಅಲ್ಲ- ಸುಧಾಮೂರ್ತಿ
ಪತ್ರ ಬರೆದದ್ದು ಅಷ್ಟು ದೊಡ್ಡ ಟಾಟಾ ಸಾಮ್ರಾಜ್ಯ ಕಟ್ಟಿದ ಜೆ ಆರ್ ಡಿ ಟಾಟಾ ಅವರಿಗೆ

ಇನ್ಫೋಸಿಸ್ ನ ಆವರಣದಲ್ಲಿ ಇದ್ದ ಚಂದನೆಯ ಹೂಗಳನ್ನು ನೋಡುತ್ತಾ ಇದ್ದವನು ತಕ್ಷಣ ಅವರತ್ತ ತಿರುಗಿದೆ.

‘ಅಷ್ಟೇ ಅಲ್ಲ ಮೋಹನ್, ಆ ಚಿಕ್ಕ ಪೋಸ್ಟ್ ಕಾರ್ಡ್ ದೊಡ್ಡ ಕೆಲಸವನ್ನೇ ಮಾಡಿತು. ಟಾಟಾ ಸಂಸ್ಥೆಯಿಂದ ತಕ್ಷಣ ಮರು ಉತ್ತರ ಬಂತು.
ಹೋದಾಗ ಕೆಲಸಕ್ಕೆ ಸೇರಿಕೊಳ್ಳಿ ಅಂದರು’ ಎಂದಾಗ ಅವರ ಮುಖದಲ್ಲಿ ಒಂದು ಸಮಾಧಾನ

‘ನಾನು ಹುಬ್ಬಳ್ಳಿಯ ಭೂಮರೆಡ್ಡಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಲು ಹೋಗ್ತೀನಿ ಅಂತ ನಿರ್ಧರಿಸಿದಾಗ ಅಪ್ಪನಿಂದ ಹಿಡಿದು ಕಾಲೇಜಿನ ಪ್ರಾಂಶುಪಾಲರವರೆಗೆ ಎಲ್ಲರೂ ಬೆಚ್ಚಿಬಿದ್ದಿದ್ದರು. ಇದುವರೆಗೂ ಎಂಜಿನಿಯರಿಂಗ್ ಓದಲು ಒಬ್ಬ ಹೆಣ್ಣು ಮಗಳು ಬಂದಿಲ್ಲ. ಅಂತಹದ್ದರಲ್ಲಿ ಈಗ ಯಾಕೆ. ಇಲ್ಲಿನ ಗಂಡು ಮಕ್ಕಳಿಗೂ ಇದು ಹೊಸ ರೀತಿಯದ್ದು. ಹಾಗಾಗಿ ಆಕೆಗೆ ತೊಂದರೆ ಕೊಡಬಹುದು ಅಂತೆಲ್ಲಾ ಬ್ರೈನ್ ವಾಶ್ ಆಯ್ತು. ಆದರೆ ನಾನು ನಿರ್ಧರಿಸಿ ಆಗಿತ್ತು. ಕಾಲೇಜು ಸೇರಿಯೇಬಿಟ್ಟೆ’ ಎಂದು ನಕ್ಕರು

‘ನಿಮಗೆ ಗೊತ್ತಿರಲಿ ಮೋಹನ್, ನಾನು ಕಾಲೇಜಿಗೆ ಸೇರಿದಾಗ ಹೆಣ್ಣು ಮಕ್ಕಳಿಗೆ ಶೌಚಾಲಯವೇ ಇರಲಿಲ್ಲ. ಎಂಜನಿಯರಿಂಗ್ ಅಂದ್ರೆ ಗಂಡುಮಕ್ಕಳಿಗೆ ಅನ್ನೋ ಕಾಲದಲ್ಲಿದ್ರು.

ನಾನು ಶೌಚಕ್ಕೆ ಹೋಗಬೇಕು ಎಂದರೆ ಮಧ್ಯಾಹ್ನ ಮನೆಗೆ ಬಂದು ಮತ್ತೆ ಕಾಲೇಜಿಗೆ ಹೋಗಬೇಕಿತ್ತು. ನಾಲ್ಕು ವರ್ಷ ಈ ರೀತಿ ಸುತ್ತಿದ್ದೇನೆ’ ಎಂದವರೇ ‘ಅದು ನನ್ನೊಳಗೆ ಕೊರೆಯುತ್ತಲೇ ಇತ್ತು. ಆ ನಂತರ ನಾನು ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥಳಾದಾಗ ಮೊದಲು ಮಾಡಿದ್ದು ರಾಜ್ಯದ ಎಲ್ಲೆಡೆ 13 ಸಾವಿರ ಹೆಣ್ಣುಮಕ್ಕಳ ಶೌಚಾಲಯ ನಿರ್ಮಿಸಿದ್ದು’ ಎಂದರು.

ನಾನಿನ್ನೂ ಅವರ ಮಾತನ್ನು ನನ್ನೊಳಗೆ ಇಳಿಸಿಕೊಳ್ಳುತ್ತಿದ್ದೆ.

‘ನನಗೆ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ಬಂತು. ನನ್ನ ಅಮ್ಮನಿಗೆ ಚರಿತ್ರೆ ಎಂದರೆ ಪ್ರಾಣ. ಆಕೆಯೇ ನನಗೆ ಚಿಕ್ಕಂದಿನಲ್ಲೇ ಅತ್ತಿಮಬ್ಬೆ ಬಗ್ಗೆ ಹೇಳಿದ್ದರು. ಅವರನ್ನು ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕರೆದುಕೊಂಡು ಹೋಗಬೇಕು ಅಂತಿದ್ದೆ. ಆದರೆ ಅವರು ಆಸ್ಪತ್ರೆ ಸೇರಿದ್ದರು. ನಾನು ಪ್ರಶಸ್ತಿ ಪಡೆದವಳೇ ಸೀದಾ ಆಸ್ಪತ್ರೆಗೆ ಬಂದು ಅಮ್ಮನ ಮುಂದೆ ಅದನ್ನು ಇಟ್ಟೆ.

ಅಮ್ಮ ಹೇಳಿದ್ದು ಒಂದೇ ಮಾತು- ಈ ಪ್ರಶಸ್ತಿ ಹಣ ಎಲ್ಲಾ ದಾನ ಮಾಡಬೇಕು ತಿಳೀತಾ ಅಂತ. ಅದರ ಮಾರನೆಯ ದಿನವೇ ಅವರು ಸಾವನ್ನಪ್ಪಿದರು. ಈ ಮಾತು ಇಂದಿಗೂ ನನ್ನ ಕಿವಿಯಲ್ಲಿ ಗುಂಯ್ಗುಡುತ್ತಿದೆ’ ಎಂದರು.

‘ಶಿವನು ಭಿಕ್ಷಕೆ ಬಂದ ನೋಡುಬಾರೆ ತಂಗಿ..’ ಅಂತ ಹಾಡಿದೆ ಎಂದೆ.
ಅವರು ನೆನಪಿನ ಓಣಿಯಲ್ಲಿ ಕಳೆದುಹೋಗೋದಿಕ್ಕೆ ಅಷ್ಟು ಸಾಕಾಯ್ತು.

ತಕ್ಷಣ ಅವರಿಗೆ ನೆನಪಾದದ್ದು ತಮ್ಮ ಬಾಲ್ಯದ ಕೆಂಪಕ್ಕಿ ಅನ್ನ. ನನಗೆ ದಾನದ ಮಹತ್ವ ಗೊತ್ತಾಗೋದಿಕ್ಕೆ ಒಂದೆರಡಲ್ಲ ನೂರು ಇನ್ಸಿಡೆಂಟ್ ಗಳಿದ್ದಾವೆ.

ನಾನು ಚಿಕ್ಕವಳಾಗಿರುವಾಗ ನಮ್ಮ ಮನೆಯಲ್ಲಿ ಕೆಂಪಕ್ಕಿಯಲ್ಲಿ ಅನ್ನ ಮಾಡ್ತಿದ್ದರು. ಭಿಕ್ಷಕ್ಕೆ ಬಂದವರಿಗೆ ಬಿಳಿ ಅಕ್ಕಿ ಕೊಡ್ತಾ ಇದ್ದರು. usually ಇದು ರಿವರ್ಸ್ ಇರುತ್ತೆ. ಅದಕ್ಕೆ ನಾನು ಅಜ್ಜಿಯನ್ನು ಕೇಳಿದೆ ಯಾಕೆ ಈ ರೀತಿ ಅಂತ ಅವರು ಯಾಚನೆಗೆ ಬರುವವರು ದೇವ ಮಾನವರು ಅವರ ಬಳಿ ಇಲ್ಲ ಅಂತ ಬರೋದಿಲ್ಲ, ನಮಗೆ ಕೊಡುವ ಮನಸ್ಸಿದೆಯಾ ಅಂತ ಟೆಸ್ಟ್ ಮಾಡೋಕೆ ಬರ್ತಾರೆ’ ಅಂದರು. ನಾನು ಆಮೇಲೆ ಗಮನಿಸಿದೆ. ನಮ್ಮ ಮನೆಗೆ ಹಾಗೆ ಬರ್ತಾ ಇದ್ದದ್ದು ಪೀರಸಾಬರು, ಎಲ್ಲಮ್ಮನ ಜೋಗತಿಯರು, ತಿರುಪತಿಯ ಗೋವಿಂದನಿಗೆ ಹರಕೆ ಹೊತ್ತವರು.

ತಕ್ಶಣ ನನಗೆ ಅವ್ರು ‘ಕೆಂಪು ಅಕ್ಕಿಯ ಕಣಜ’ ಎನ್ನುವ ಲೇಖನ ಬರೆದದ್ದು ನೆನಪಿಗೆ ಬಂತು, ಅದನ್ನು ನೆನಪಿಸಲು ಬಾಯಿ ತೆರೆದೆ.

ಆದರೆ ಅವರು ಇನ್ನೊಂದೇ ಲೇಖನದ ಗುಂಗಿನಲ್ಲಿದ್ದರು. ಅದು ಅವರ ಅಜ್ಜಿ 62ನೆಯ ವಯಸ್ಸಿನಲ್ಲಿ ‘ಆ ಆ ಇ ಈ’ ಕಲಿತ ಕಥೆ.

ನನ್ನ ಅಜ್ಜಿ ಶಾಲೆಗೇ ಹೋಗಿರಲಿಲ್ಲ. ಆಮೇಲೆ ನನಗೆ ಒತ್ತಾಯ ಮಾಡಿ ಅಕ್ಷರ ಕಲಿತಳು. ಇದನ್ನು ಬರೆದೆ. ದೂರದರ್ಶನದವರು ಇದನ್ನ ‘ಮೇರಿ ಪೆಹ್ಲಿ ಛಾತ್ರಾ’ ಅಂತ ಪ್ರಸಾರ ಮಾಡಿದರು. ಅದಕ್ಕೆ ಬಹುಮಾನವೂ ಬಂತು. ನನಗೆ ಕಲಿಯುವಿಕೆಯ ಬಗ್ಗೆ ಆಸಕ್ತಿ, ಯಾವಾಗ ಬೇಕಾದರೂ ಕಲಿಯಬಹುದು ಎನ್ನುವ ನಂಬಿಕೆ ಬಂದಿದ್ರೆ ಅದಕ್ಕೆ ನಮ್ಮ ಅಜ್ಜಿಯೇ ಕಾರಣ ಎಂದರು.

ಸುಧಾಮೂರ್ತಿ ಅವರು ಕೆಲವೇ ತಿಂಗಳ ಹಿಂದಷ್ಟೇ ‘ಕೌನ್ ಬನೇಗಾ ಕರೋಡ್ಪತಿ’ ಹಾಟ್ ಸೀಟ್ ನಲ್ಲಿ ಅಮಿತಾಬ್ ಎದುರು ಕುಳಿತಿದ್ದರು.

ತಕ್ಷಣ ನೆನಪಿಗೆ ಬಂದಿದ್ದು ಇವರು ಅಮಿತಾಬ್ ಬಚ್ಚನ್ ಬಳಿ ತಾವು ಚಕ್ಕರ್ ಹಾಕಿ ಸಿನೆಮಾ ನೋಡಿದ್ದು. ಇವರೇ ಟಿಕೆಟ್ ತೆಗೆಸಿ ನಾರಾಯಣ ಮೂರ್ತಿಯವರನ್ನ ಫಿಲಂ ಗೆ ಕರೆದುಕೊಂಡು ಹೋಗ್ತಾ ಇದ್ದದ್ದರ ಬಗ್ಗೆ ಹೇಳಿದ್ದು. ಒಂದೇ ಸಿನೆಮಾವನ್ನು ಬ್ಯಾಕ್ ಟು ಬ್ಯಾಕ್ ನೋಡಿದ ರೆಕಾರ್ಡ್ ಕೂಡಾ ಇವರ ಬಳಿ ಇದೆ.

ಸಮಾಜಸೇವೆ ಮೇಲೆ ಭಾಷಣ ಮಾಡೋದಿಕ್ಕೆ ಅಂತ ಇವರು ಪಾಕಿಸ್ತಾನಕ್ಕೆ ಹೋದಾಗ ಎಲ್ಲರೂ ಶಾಪಿಂಗ್ ಗೆ ಸಜ್ಜಾದ್ರು.
ಸುಧಾ ಮೂರ್ತಿ ಮಾತ್ರ ನನಗೆ ಮೊಘಲ್ ಎ ಅಜಂ ನ ಅನಾರ್ಕಲಿ ಬೇಕು ಅಂತ ಅವಳನ್ನ ಹುಡುಕ್ತಾ ಹೋದರು.
ಪಾಪ ಅನಾರ್ಕಲಿ ಊರ ಮಧ್ಯದಲ್ಲಿಯೇ ಅನಾಥವಾಗಿ ಮಲಗಿದ್ದಾಳೆ ಅಂತ ನಿಟ್ಟುಸಿರಿಟ್ಟರು.

ನಾರಾಯಣಮೂರ್ತಿಗಳಿಗೆ ಇವರೇ ಸಿನೆಮಾ ಟಿಕೆಟ್ ತೆಗೆಸಿದ್ದು ನನ್ನ ಮನಸ್ಸಲ್ಲಿ ಉಳಿದಿತ್ತು. ನೀವು ಸಿಕ್ಕಾಪಟ್ಟೆ ಲೆಕ್ಕಾಚಾರಾನಾ ಅಂದೆ.

ನಾವು ಹೇಳಿ ಕೇಳಿ ಕುಲಕರ್ಣಿಗಳು. ಪೈ ಟು ಪೈ ಲೆಕ್ಕ ಅಂದವರೇ ನಾರಾಯಣಮೂರ್ತಿಗಳಿಗೆ ಇನ್ನೂ ಕೆಲಸ ಸಿಕ್ಕಿರಲಿಲ್ಲ ಆಗ ನಾನು ಹಣ ಕೊಡ್ತಿದ್ದೆ. ನೋಡ್ರಿ ಇದು ದಾನ ಅಲ್ಲ, ಸಾಲ ಅಂತ ಹೇಳಿಯೇ ಕೊಟ್ಟಿದ್ದೆ. ಅಷ್ಟೇ ಅಲ್ಲ ಒಂದು ಪುಸ್ತಕದಲ್ಲಿ ಅದನ್ನ ಬರೆದೂ ಇಟ್ಟಿದ್ದೆ. ಆಮೇಲೆ ಏನು ಮಾಡೋದು ಅವರ ಜೊತೇನೇ ಮದುವೆ ಆಯ್ತು. ಇನ್ನು ಗಂಡನ ಅಕೌಂಟು, ಹೆಂಡತಿ ಅಕೌಂಟು ಅಂತ ಬೇರೆ ಬೇರೆ ಏನು ಅಂತ ನಾನೇ ಆ ಪುಸ್ತಕ ಹರಿದು ಹಾಕಿದೆ ಎಂದು ನಕ್ಕರು.

ಹಾಗೆ ಸುಧಾಮೂರ್ತಿ ಪೈ ಟು ಪೈ ಲೆಕ್ಕ ಹಾಕಿ ಕೂಡಿಸಿಟ್ಟಿದ್ದ 10 ಸಾವಿರ ಹಣವೇ ಇನ್ಫೋಸಿಸ್ ಎದ್ದು ನಿಲ್ಲಲು ಕಾರಣ ಆಯ್ತು ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ.

ನಾನು ಕೂಡಿಟ್ಟದ್ದು 10250 ರೂಪಾಯಿ ಅಂತ ಜೋರಾಗಿ ನಗುತ್ತಾ ನನ್ನ ಲೆಕ್ಕ ತಿದ್ದಿದರು. ನಾನು 250 ರೂ ನನಗಿಟ್ಟುಕೊಂಡೆ. 10 ಸಾವಿರ ಇನ್ಫೋಸಿಸ್ ಹುಟ್ಟು ಹಾಕಲು ಕೊಟ್ಟೆ ಎಂದರು.


ಹಾಡು ಬಾಯಿ ಪಾಠ ಮಾಡೋದು, ಕವಿತೆ ಉರು ಹಚ್ಚೊದು ಗೊತ್ತು
ಆದರೆ ಸುಧಾಮೂರ್ತಿ ವಿಷಯದಲ್ಲಿ ಒಂದು ಮಜಾ ಇದೆ
ಅವರು ಇಡೀ ಡಿಕ್ಷನರಿಯನ್ನೇ ಬಾಯಿ ಪಾಠ ಮಾಡಿಬಿಟ್ಟಿದ್ದರು

‘ಚಿಕ್ಕವಳಿರುವಾಗ ಬೇಸಿಗೆ ರಜೆಯಲ್ಲಿ ಹೇಗೆ ಸಮಯ ಕಳೆಯೋದು ಅಂತಾನೇ ಗೊತ್ತಾಗ್ತಿರಲಿಲ್ಲ. ಆಗ ನನ್ನ ತಮ್ಮನಿಗೆ ನೀನು ಭಾರದ್ವಾಜ್ ಡಿಕ್ಷನರಿ ಉರು ಹೊಡಿ ನಾನು ‘ಕನ್ನಡ ಕಸ್ತೂರಿ ಕೋಶ’ ಉರು ಹೊಡೀತೀನಿ ಅಂದೆ . ಈಗಲೂ ಕಸ್ತೂರಿ ಕೋಶ ನನ್ನ ಬಾಯಲ್ಲಿದೆ ಎಂದು ನಕ್ಕರು.

ಇವತ್ತು ವಿಶ್ವ ಪುಸ್ತಕ ದಿನಾಚರಣೆ ಆಲ್ವಾ
ನೆನಪಿಗೆ ಬಂತು.