RELIANCE CAMPA COLA: ಮುಳವಾಡದಲ್ಲಿ ₹1,622 ಕೋಟಿ ಹೂಡಿಕೆಗೆ ಅನುಮೋದನೆ : ಸಚಿವ ಎಂ ಬಿ ಪಾಟೀಲ

Various industrial groups in the soft drinks, grain processing, wind power blades, CVC/PVC pipes, solar wafers, paints and chemicals, and renewable energy sectors have come forward to invest a total of more than Rs 17,000 crore in Vijayapura district. Out of this, an investment of Rs 1,622 crore has been approved for the establishment of a soft drinks and bottling unit of Campa Cola, a part of the Reliance Group, said Large and Medium Industries Minister M B Patil.

 

ಬೆಂಗಳೂರು, ಆ.೦೪,೨೦೨೫ : ತಂಪು ಪಾನೀಯ, ಧಾನ್ಯ ಸಂಸ್ಕರಣೆ, ಪವನ ವಿದ್ಯುತ್‌ ಬ್ಲೇಡ್‌, ಸಿವಿಸಿ/ಪಿವಿಸಿ ಪೈಪ್‌, ಸೋಲಾರ್‌ ವೇಫರ್‌, ಬಣ್ಣ ಮತ್ತು ರಾಸಾಯನಿಕಗಳು, ಹಾಗೂ ಮರುಬಳಕೆ ಇಂಧನ ತಯಾರಿಕೆ ವಲಯದಲ್ಲಿ ಬೇರೆಬೇರೆ ಉದ್ಯಮ ಸಮೂಹಗಳು ವಿಜಯಪುರ ಜಿಲ್ಲೆಯಲ್ಲಿ ಒಟ್ಟು 17 ಸಾವಿರ ಕೋಟಿ ರೂ.ಗಳಿಗೂ ಹೆಚ್ಚು ಬಂಡವಾಳ ತೊಡಗಿಸಲು ಮುಂದೆ ಬಂದಿವೆ. ಇವುಗಳ ಪೈಕಿ ರಿಲಯನ್ಸ್‌ ಸಮೂಹದ ಭಾಗವಾಗಿರುವ ಕ್ಯಾಂಪಾಕೋಲಾದ ತಂಪು ಪಾನೀಯ ಮತ್ತು ಬಾಟ್ಲಿಂಗ್‌ ಘಟಕದ ಸ್ಥಾಪನೆಗಾಗಿ 1,622 ಕೋಟಿ ರೂ. ಮೊತ್ತದ ಹೂಡಿಕೆಗೆ ಅನುಮೋದನೆ ಕೊಡಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ತಮ್ಮ ತವರು ಜಿಲ್ಲೆಯಲ್ಲಿನ ಉದ್ದೇಶಿತ ಹೂಡಿಕೆ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಸೋಮವಾರ ಅವರು ಖನಿಜ ಭವನದಲ್ಲಿ ಮಹತ್ತ್ವದ ಸಭೆ ನಡೆಸಿದರು.

ಬಳಿಕ ಮಾಹಿತಿ ನೀಡಿರುವ ಅವರು, ತಂಪು ಪಾನೀಯ, ಕುಡಿಯುವ ನೀರು ಮತ್ತು ಬಾಟ್ಲಿಂಗ್‌ ಚಟುವಟಿಕೆಗಳಿಗೆ ಕ್ಯಾಂಪಾಕೋಲಾ ಹೂಡಿಕೆಯಿಂದ 1,200 ಜನರಿಗೆ ನೇರ ಉದ್ಯೋಗ ಸಿಗಲಿದೆ. ಈ ಯೋಜನೆಗಾಗಿ ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದ 2ನೇ ಹಂತದ ವ್ಯಾಪ್ತಿಯಲ್ಲಿ 100 ಎಕರೆ ಕೊಡಲಾಗುವುದು. ಈ ಸಂಬಂಧ ಅಧಿಕೃತ ಆದೇಶ ಕೂಡ ಆಗಿದೆ ಎಂದು ಅವರು ವಿವರಿಸಿದರು.

ತೊಗರಿ ಸೇರಿದಂತೆ ಇತರ ಧಾನ್ಯ ಸಂಸ್ಕರಣೆಗೆ ಹೆಸರಾಗಿರುವ ವಿಂಗ್ಸ್‌ ವಿಟೆರಾ ಕಂಪನಿಯು 350 ಕೋಟಿ ರೂ, ಪವನ ವಿದ್ಯುತ್‌ ಕ್ಷೇತ್ರದಲ್ಲಿ ಬೇಕಾಗುವ ದೈತ್ಯ ಅಲಗುಗಳ (ಬ್ಲೇಡ್‌) ತಯಾರಿಕೆಗೆ ಹೆಸರಾಗಿರುವ ಸುಜ್ಲಾನ್‌ ಕಂಪನಿ 360 ಕೋಟಿ ರೂ. ಹೂಡಿಕೆ ಮಾಡಲಿ. ಅಲ್ಲದೆ, ಮೆಲ್‌ಸ್ಟಾರ್‌ ಕಂಪನಿಯು ವಿಜಯಪುರದಲ್ಲಿ ಸದ್ಯದಲ್ಲೇ ವಿಮಾನ ನಿಲ್ದಾಣ ಆರಂಭವಾಗಲಿರುವುದನ್ನು ಪರಿಗಣಿಸಿ ವಿಮಾನ ಹಾರಾಟ ತರಬೇತಿ ಶಾಲೆ ಪ್ರಾರಂಭಿಸಲು ಮುಂದೆ ಬಂದಿದೆ. ಇದೇ ರೀತಿ ಶಾಲೆ ತೆರೆಯಲು ಮತ್ತೊಂದು‌ ಕಂಪನಿ ಬರುತ್ತಿದ್ದು, ಅದಕ್ಕೂ ಅವಕಾಶ ನೀಡಲಾಗುವುದು. ಸಿವಿಸಿ/ಪಿವಿಪಿ ಪೈಪ್‌ ತಯಾರಿಸುವ ಪೊದ್ದಾರ್‌ ಕಂಪನಿಯು ಜಿಲ್ಲೆಯಲ್ಲಿ ತನ್ನ ಘಟಕ ತೆರೆಯಲು ತೀರ್ಮಾನಿಸಿವೆ. ಇವುಗಳ ಪ್ರಸ್ತಾವನೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸಲಾಗುವುದು. ಈ ಪೈಕಿ ಒಂದೆರಡು ಕಂಪನಿಗಳೊಂದಿಗೆ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು ಎಂದು ಅವರು ವಿವರಿಸಿದ್ದಾರೆ.

ಉಳಿದಂತೆ, ಮರುಬಳಕೆ ಮಾಡಬಹುದಾದ ಇಂಧನ ಕ್ಷೇತ್ರದಲ್ಲಿ ರೆನ್ಯೂ ಪವರ್‌, ಆರ್ಸೊಲೆಕ್‌ ಮತ್ತು ಹೆಕ್ಲಾ ಕ್ಲೈಮೇಟ್‌ ಕಂಪನಿಗಳು ವಿಜಯಪುರ ಜಿಲ್ಲೆಯಲ್ಲಿ ಕ್ರಮವಾಗಿ 4,700 ಕೋಟಿ ರೂ, 4 ಸಾವಿರ ಕೋಟಿ ರೂ. ಮತ್ತು 8 ಸಾವಿರ ಕೋಟಿ ರೂ. ಹೂಡಿಕೆಯ ಪ್ರಸ್ತಾವನೆ ಮುಂದಿಟ್ಟಿವೆ. ಇವು ಕಾರ್ಯಗತಗೊಂಡರೆ 16,700 ಕೋಟಿ ರೂ. ಜಿಲ್ಲೆಗೆ ಹರಿಯಲಿದೆ. ಹಾಗೆಯೇ, ಬಣ್ಣ ಮತ್ತು ರಾಸಾಯನಿಕಗಳ ಕ್ಷೇತ್ರದಲ್ಲಿ ಗ್ರಾಸಿಂ ಕಂಪನಿ ಕೂಡ ಹೂಡಿಕೆಯ ಒಲವು ಹೊಂದಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಎಫ್‌ಎಂಸಿಜಿ ವಲಯದಲ್ಲಿ 30, ಸೋಲಾರ್‌ ವಲಯದಲ್ಲಿ 25 ಮತ್ತು ಜವಳಿ ವಲಯದಲ್ಲಿ 15ಕ್ಕೂ ಹೆಚ್ಚು ಕಂಪನಿಗಳು ಮುಂದಾಗಿವೆ. ಆಹಾರ ಸಂಸ್ಕರಣೆ ವಲಯದಲ್ಲಿ ಕಬ್ಬನ್ನು ಆಧರಿಸಿ ಎಥೆನಾಲ್‌, ಚಾಕೊಲೇಟ್‌ ಮತ್ತು ತಂಪು ಪಾನೀಯ ತಯಾರಿಕೆ ಘಟಕಗಳಿಗೆ ಹೆಚ್ಚು ಅವಕಾಶವಿದ್ದು, 20ಕ್ಕೂ ಹೆಚ್ಚು ಕಂಪನಿಗಳು ಬಂಡವಾಳ ಹೂಡಿಕೆಗೆ ಆಸಕ್ತವಾಗಿದ್ದು, ಇವುಗಳೊಂದಿಗೆ ಮಾತುಕತೆ ಪ್ರಗತಿಯಲ್ಲಿದೆ ಎಂದು ಅವರು ನುಡಿದಿದ್ದಾರೆ.

ರಾಜ್ಯದಲ್ಲಿ ಜೆನ್‌ಫೋಲ್ಡ್‌, ವಿಪ್ರೋ ಹೂಡಿಕೆ :

ಫಾರ್ಮಾ ಕ್ಷೇತ್ರದಲ್ಲಿ ಜೆನ್‌ಫೋಲ್ಡ್‌ ಬಯೋಸೈನ್ಸಸ್‌ 490 ಕೋಟಿ ರೂ, ಬಣ್ಣ ಮತ್ತು ಅಡ್ಹೆಸೀವ್‌ ತಯಾರಿಸುವ ಆಸ್ಟ್ರಾಲ್‌ ಕೋಟಿಂಗ್ಸ್‌ 174.79 ಕೋಟಿ ರೂ. ಮತ್ತು ವಿಪ್ರೋ ಹೈಡ್ರಾಲಿಕ್ಸ್‌ ಕಂಪನಿ 499 ಕೋಟಿ ರೂ. ಬಂಡವಾಳವನ್ನು ರಾಜ್ಯದಲ್ಲಿ ಹೂಡಲಿದ್ದು (ಒಟ್ಟು 1,163 ಕೋಟಿ ರೂ.ಗಳಿಗೂ ಹೆಚ್ಚು), ಅನುಮೋದನೆ ನೀಡಲಾಗಿದೆ ಎಂದು ಸಚಿವರು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

ಜೆನ್‌ಫೋಲ್ಡ್‌ ಕಂಪನಿಯು ಫಾರ್ಮಾ ಕ್ಷೇತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಕಿಣ್ವಗಳ (ಎಂಝೈಮ್ಸ್‌) ತಯಾರಿಕಾ ಘಟಕ ಆರಂಭಿಸಲಿದ್ದು, ಚಾಮರಾಜನಗರ ಜಿಲ್ಲೆಯ ಬದನಗುಪ್ಪೆ-ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ 60 ಎಕರೆ ಜಮೀನು ನೀಡಲಾಗಿದೆ. ಇದರಿಂದ 226 ಉದ್ಯೋಗಗಳು ಸೃಷ್ಟಿಯಾಗಲಿವೆ. ಬಣ್ಣ ಮತ್ತು ಅಡ್ಹೆಸೀವ್‌ ತಯಾರಿಸುವ ಆಸ್ಟ್ರಾಲ್‌ ಕೋಟಿಂಗ್ಸ್‌ ಕಂಪನಿಯು ವೇಮಗಲ್‌ನಲ್ಲಿ ಉತ್ಪಾದನಾ ಘಟಕ ಸ್ಥಾಪಿಸಲಿದ್ದು, 300 ಜನರಿಗೆ ಕೆಲಸ ಕೊಡಲಿದೆ. ಇದಕ್ಕಾಗಿ 20 ಎಕರೆ ಕೊಡಲಾಗಿದೆ. ವಿಪ್ರೋ ಹೈಡ್ರಾಲಿಕ್ಸ್‌ ತಾಮ್ರದ ಲ್ಯಾಮಿನೇಟ್‌ ತಯಾರಿಕಾ ಘಟಕ ಆರಂಭಿಸಲಿದ್ದು, ದೇವನಹಳ್ಳಿ ಸಮೀಪದ ಆದಿನಾರಾಯಣ ಹೊಸಹಳ್ಳಿಯಲ್ಲಿ 19 ಎಕರೆ ಭೂಮಿ ಕೊಡಲಾಗಿದೆ. ಇದರಿಂದ 365 ಉದ್ಯೋಗ ಸೃಷ್ಟಿ ಆಗಲಿದೆ. ಎಂದು ಅವರು ಹೇಳಿದ್ದಾರೆ.

ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ , ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎಂ.ಮಹೇಶ, ವಿಶೇಷ ಜಿಲ್ಲಾಧಿಕಾರಿ ರಘುನಂದನ್ ಸೇರಿದಂತೆ ಇತರ ಅಧಿಕಾರಿಗಳು ಇದ್ದರು.

key words: Reliance Campacola unit, Mulwad, investment of ₹1,622 crore, M B Patil

vtu

SUMMARY:

Reliance Campacola unit in Mulwad, investment of ₹1,622 crore approved: Minister M B Patil.

Various industrial groups in the soft drinks, grain processing, wind power blades, CVC/PVC pipes, solar wafers, paints and chemicals, and renewable energy sectors have come forward to invest a total of more than Rs 17,000 crore in Vijayapura district. Out of this, an investment of Rs 1,622 crore has been approved for the establishment of a soft drinks and bottling unit of Campa Cola, a part of the Reliance Group, said Large and Medium Industries Minister M B Patil.