ಕೊರೊನಾ ಸೋಂಕಿನ ಆತಂಕದ‍ಲ್ಲಿರುವ ಜನರಿಗೆ ಧೈರ್ಯ ತುಂಬಿ: ಸಚಿವ ಸೋಮಶೇಖರ್

ಬೆಂಗಳೂರು, ಜುಲೈ 13, 2020: ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಾರ್ವಜನಿಕರ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಬಗ್ಗೆ ಮೊದಲು ಸಂದೇಶವನ್ನು ಕೊಡಬೇಕು. ಅವರ ಆರೋಗ್ಯದ ಸಮಸ್ಯೆಗಳಿದ್ದಲ್ಲಿ ತುರ್ತು ಸಂಪರ್ಕಕ್ಕೆ ಅಗತ್ಯ ಕ್ರಮ ವಹಿಸಬೇಕು ಎಂದು ಸಹಕಾರ, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜರಾಜಶ್ವರಿ ನಗರ ವಲಯ ಉಸ್ತುವಾರಿಗಳಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಅವರು ರಾಜರಾಜೇಶ್ವರಿ ನಗರದ ಬಿಬಿಎಂಪಿ ಕಚೇರಿಯಲ್ಲಿ ರಾಜರಾಜೇಶ್ವರಿ ನಗರ ವಲಯದ ವಾರ್ಡ್ ಗಳ ಕಾರ್ಪೋರೇಟರ್ ಗಳೊಂದಿಗೆ ಸಭೆ ನಡೆಸಿ ಮಾತನಾಡಿ, ತಮಗೆ ಯಾವುದೇ ಸಮಸ್ಯೆ ಇದ್ದರೂ ನಮಗೆ ತಿಳಿಸಿಕೊಟ್ಟರೆ ನಾವು ಪರಿಹರಿಸುತ್ತೇವೆ. ಅಧಿಕಾರಿಗಳು ನಮ್ಮ ಗಮನಕ್ಕೆ ತರದಿದ್ದರೆ ನಮಗೆ ತಿಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಕೋವಿಡ್ ಪ್ರಕರಣಗಳ ನಿಯಂತ್ರಣ ಮಾಡಲೇಬೇಕಿದ್ದು, ಇದಕ್ಕೋಸ್ಕರ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಸಮುದಾಯಕ್ಕೆ ಸೋಂಕು ಹರಡುವ ಸಾಧ್ಯತೆ ಇದ್ದು, ಇಂಥ ಪರಿಸ್ಥಿತಿಗೆ ಹೋಗಲು ಬಿಡಬಾರದು ಎಂದು ಸಚಿವರು ಸೂಚನೆ ನೀಡಿದರು. ಸಾರ್ವಜನಿಕರು ಆತಂಕಗೊಳ್ಳುವ ಪರಿಸ್ಥಿತಿ ಯಾವುದೇ ಕಾರಣಕ್ಕೂ ಬರಕೂಡದು. ಅವರ ಅಗತ್ಯಗಳಿಗೆ ತಕ್ಷಣ ಸ್ಪಂದಿಸುವ ಕೆಲಸವಾಗಬೇಕು. ಜೊತೆಗೆ ತಕ್ಷಣ ಮಾಹಿತಿಗಳ ರವಾನೆ ಆಗಬೇಕಿದೆ ಎಂದು ಸಚಿವರು ತಿಳಿಸಿದರು.

ಆರ್ ಆರ್ ನಗರ ಹಾಗೂ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದು ಬೇಕು ಎಂಬ ಬಗ್ಗೆ ಮಾಹಿತಿ ಕೊಟ್ಟರೆ ನೂರಕ್ಕೆ ನೂರು ಒದಗಿಸಿಕೊಡುವ ಮೂಲಕ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು ಎಂದು ಸಚಿವರು ತಿಳಿಸಿದರು.

ಸಾರ್ವಜನಿಕರಿಗೆ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಯಾರನ್ನು ಸಂಪರ್ಕ ಮಾಡಬೇಕು ಎಂಬ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಪಟ್ಟಿಯನ್ನು ಸಿದ್ಧಪಡಿಸಿ ನಮಗೆ ಕೊಟ್ಟರೆ ನಾವೂ ಸಹ ಅದನ್ನು ಜಾಹೀರಾತುಗಳ ಮೂಲಕ ಮಾಹಿತಿಯನ್ನು ನೀಡುತ್ತೇವೆ ಎಂದು ಸಚಿವರು ತಿಳಿಸಿದರು.

ಆರ್ ಆರ್ ನಗರ ವ್ಯಾಪ್ತಿಯ ವಾರ್ಡ್ ಗಳ ರಸ್ತೆಗಳಲ್ಲಿ ಸ್ಯಾನಿಟೈಸ್ ಮಾಡಬೇಕಾದಲ್ಲಿ ಎಲ್ಲರ ಗಮನಕ್ಕೆ ತರುವುದು ಉತ್ತಮ. ಕಂಟೈನ್ಮೆಂಟ್ ಝೋನ್ ಹಾಗೂ ಮೈಕ್ರೋ ಕಂಟೈನ್ಮೆಂಟ್ ಝೋನ್ ಮಾಡಬೇಕು. ಅಲ್ಲದೆ, ಸಾರ್ವಜನಿಕರ ಬಳಿ ಸೌಮ್ಯ ರೀತಿಯಲ್ಲೇ ಮನವಿ ಮಾಡಿ ಸ್ಪಂದಿಸುವಂತೆ ಮೊದಲಿಗೆ ಮನವಿ ಮಾಡುವುದು, ಅದಕ್ಕೂ ಕೇಳದಿದ್ದಲ್ಲಿ ಹಾಗೂ ಪರಿಸ್ಥಿತಿ ಕೈಮೀರುವ ಹಂತ ತಲುಪುತ್ತದೆ ಎಂಬ ಸುಳಿವು ಸಿಕ್ಕರೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂಬಿತ್ಯಾದಿ ಸಲಹೆಗಳನ್ನು ಈ ಭಾಗದ ಪಾಲಿಕೆ ಸದಸ್ಯರು ನೀಡಿದರು.

ಬಳಿಕ ಮಾತನಾಡಿದ ಮಾಜಿ ಶಾಸಕರು, ಬಿಜೆಪಿ ಮುಖಂಡರಾದ ಮುನಿರತ್ನ ಮಾತನಾಡಿ, ಬಿಬಿಎಂಪಿ ಅಧಿಕಾರಿಗಳಿರಬಹುದು, ಉಳಿದ ಅಧಿಕಾರಿಗಳು ಇರಬಹುದು ನಿಮ್ಮ ಮನೆಯಲ್ಲೇ ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ಯಾವ ರೀತಿ ಕೆಲಸ ಮಾಡುತ್ತೀರಿ ಎಂಬುದನ್ನು ಗಮನದಲ್ಲಿಟ್ಟು ಕೆಲಸ ಮಾಡಿ. ಜೀವದ ಬೆಲೆ ಅರ್ಥಮಾಡಿಕೊಳ್ಳಬೇಕು, ಒಂದು ಕುಟುಂಬದಲ್ಲಿ ವ್ಯಕ್ತಿಯೊಬ್ಬ ಇಲ್ಲದಿದ್ದರೆ ಹೇಗಾಗುತ್ತದೆ. ಹೀಗಾಗಿ ಇದನ್ನು ವೃತ್ತಿ ಎಂದುಕೊಳ್ಳದೆ ಸೇವೆ ಎಂದು ತಿಳಿದು ಕೆಲಸ ಮಾಡಿ ನ್ಯಾಯ ಒದಗಿಸಿ ಎಂದು ಮನವಿ ಮಾಡಿದರು.

ಈ ವೇಳೆ ಐಎಎಸ್ ಅಧಿಕಾರಿ ಹಾಗೂ ರಾಜರಾಜೇಶ್ವರಿ ನಗರ ವಲಯ ಕೋವಿಡ್ ನಿಯಂತ್ರಣ ವಿಭಾಗದ ಮುಖ್ಯಸ್ಥರಾದ ವಿಶಾಲ್ , ರಾಜರಾಜೇಶ್ವರಿ ವಲಯದ ಎಲ್ಲ ಕಾರ್ಪೊರೇಟರ್ ಗಳು ಉಪಸ್ಥಿತರಿದ್ದರು.