ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಮೈಸೂರು,ಜನವರಿ,27,2024(www.justkannada.in): ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ  ಅಪರಾಧಿಗೆ 30 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಪರಮಾನಂದ ಬಿನ್ ಸಿದ್ಧರೂಢ (31) ಜೈಲು ಶಿಕ್ಷೆಗೆ ಗುರಿಯಾದ ಆರೋಪಿ.  ನವಲಗುಂದ ತಾಲ್ಲೂಕು, ಧಾರವಾಡ ಜಿಲ್ಲೆ ಮೂಲದವನು.  ಈತನು ಕೆ.ಆರ್ ಮೊಹಲ್ಲಾ ಹೊಸಬಂಡಿಕೇರಿ ಮನೆ ನಂ 2607ರ ಮೊದಲನೇ ಮಹಡಿಯಲ್ಲಿ ವಾಸವಾಗಿದ್ದ. ಈ ಕೇಸಿನ ಅಪ್ರಾಪ್ತ ಬಾಲಕಿ (4) ತಾಯಿಯೊಂದಿಗೆ ವಾಸವಾಗಿದ್ದಳು. ಆರೋಪಿ ನೊಂದ ಬಾಲಕಿಯ ತಾಯಿಯನ್ನು ಎರಡನೇ ವಿವಾಹವಾಗಿದ್ದು ನೊಂದ ಬಾಲಕಿಗೆ ಮಲತಂದೆಯಾಗಿದ್ದಾನೆ.ಈ ನಡುವೆ ಒಟ್ಟಿಗೆ ಮನೆಯಲ್ಲಿ ವಾಸವಿದ್ದಾಗ ಆರೋಪಿ ಪರಮಾನಂದ ಅಪ್ರಾಪ್ತ ಬಾಲಕಿಯೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವನ್ನು ಯಾರಿಗೂ ತಿಳಿಸದಂತೆ ಬಾಲಕಿಗೆ ಬೆದರಿಕೆ ಹಾಕಿ ಹಾಗೂ ಆಕೆಯನ್ನು ಮದುವೆ ಮಾಡಿಕೊಳ್ಳಲು ಹಿಂಸೆ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಅಪ್ರಾಪ್ತ ಬಾಲಕಿಯ ತಾಯಿ ಕೆ.ಆರ್. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ತನಿಖೆಯನ್ನು ನಡೆಸಿದ ಕೆ.ಆರ್.ಪೊಲೀಸ್ ಠಾಣೆ ಪಿಐ ಮಹೇಶ್ ಆರೋಪಿಯ ವಿರುದ್ಧ ಪೋಕ್ಸೋ ಕಾಯಿದೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆಯನ್ನು ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶೈಮಾ ಖಮೋಜ್ ಅವರು ಆರೋಪಿಯ ವಿರುದ್ಧ ಆರೋಪ ಸಾಬೀತಾಗಿದೆ ಎಂದು ತಿಳಿಸಿ ಆರೋಪಿಗೆ ಪೋಕ್ಸೋ ಕಾಯಿದೆ ಅಡಿಯಲ್ಲಿನ ಅಪರಾಧಗಳಿಗಾಗಿ ಒಟ್ಟು 30 ವರ್ಷಗಳ ಕಠಿಣ ಶಿಕ್ಷೆಯನ್ನು ಮತ್ತು 1,00,000/- ರೂ.ಗಳ ದಂಡವನ್ನು ವಿಧಿಸಿ ಶಿಕ್ಷೆ ನೀಡಿದ್ದಾರೆ.

ಬಾಲಕಿಗೆ ಕೊಲೆ ಬೆದರಿಕೆ ಹಾಕಿದ ಅಪರಾಧಕ್ಕಾಗಿ 6 ತಿಂಗಳ ಸಾದಾ ಸಜೆಯನ್ನು ಹಾಗೂ 1,000/- ರೂ. ದಂಡವನ್ನು ಪಾವತಿಸುವಂತೆ ಶಿಕ್ಷೆಯ ತೀರ್ಪು ನೀಡಿದೆ. ದಂಡದ ಮೊತ್ತದಲ್ಲಿ ಬಾಲಕಿಗೆ 75,000/- ಗಳ ಪರಿಹಾರವನ್ನು ಪಾವತಿಸುವಂತೆ ಆದೇಶಿಸಿದೆ. ನೊಂದ ಅಪ್ರಾಪ್ತ ಬಾಲಕಿಯು ರೂ.5,00,000/- ಗಳ ಪರಿಹಾರಕ್ಕೆ ಅರ್ಹಳು ಎಂದು ತೀರ್ಪು ನೀಡಿದೆ.

ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಕೆ.ಬಿ. ಜಯಂತಿ ರವರು ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

Key words: Rape – minor girl- court -sentenced – culprit – 30 years -rigorous imprisonment