ಮಾ.5ರಿಂದ ರಂಗಾಯಣದ ಅಂಗಳದಲ್ಲಿ ಜನಪದರು ವಿಶೇಷ ಕಾರ್ಯಕ್ರಮ- ಅಡ್ಡಂಡ ಕಾರ್ಯಪ್ಪ.

ಮೈಸೂರು,ಫೆಬ್ರವರಿ,24,2022(www.justkannada.in):  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ‘ರಂಗಾಯಣದಂಗಳದಲ್ಲಿ ಮಾರ್ಚ್ 5. ಮತ್ತು 6.ರಂದು ಜನಪದರು ವಿಶೇಷ ಕಾರ್ಯಕ್ರಮ  ಆಯೋಜನೆ ಮಾಡಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಜನಪದರು ವಿಶೇಷ ಕಾರ್ಯಕ್ರಮದಲ್ಲಿ ರಾಜ್ಯದ 50ಕ್ಕೂ ಹೆಚ್ಚು ಕಲಾತಂಡಗಳು, 900 ಕ್ಕೂ ಹೆಚ್ವು ಕಲಾವಿದರು ಭಾಗಿಯಾಗಲಿದ್ದು ಎರಡು ದಿನಗಳ ಕಾಲ ಸಂಭ್ರಮ‌ ಮೇಳೈಸಲಿದೆ.  ಮಾರ್ಚ್ 5 ರಂದು ಜನಪದರು ‘ಎಂಬ ವಿಶೇಷ ಜನಪರ ಉತ್ಸವ ನಡೆಯಲಿದ್ದು  ಅರಮನೆ ಆವರಣದ ಕೋಟೆ ಆಂಜನೇಯ ಸ್ವಾಮಿ‌ ದೇವಸ್ಥಾನದಿಂದ ಮೆರವಣಿಗೆ ನಡೆಯಲಿದೆ.  ಕಾರ್ಯಕ್ರಮಕ್ಕೆ ಶಾಸಕ ರಾಮದಾಸ್ ಚಾಲನೆ ನೀಡಲಿದ್ದು, ಮೆರವಣಿಗೆ ನಂತರ ಸಂಜೆ ಉತ್ಸವಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಲಿದ್ದಾರೆ. ಬಳಿಕ ಕಲಾವಿದರಿಂದ ಗಾಯನ, ನೃತ್ಯ ಯಕ್ಷಗಾನ,ವಿಚಾರ ಸಂಕಿರಣ,ಶಾಸ್ತ್ರೀಯ ಸಂಗೀತ ಸೇರಿದಂತೆ ಹತ್ತು ಹಲವು ಕಾರ್ಯಕ್ರಮ ಆಯೋಜನೆ ‌ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ ವರ್ಷಕ್ಕಿಂತ ಈ ಬಾರಿ  ಭಿನ್ನ ನಾಟಕಗಳು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿಯ ಬಜೆಟ್ ನಲ್ಲಿ‌ ರಂಗಾಯಣಕ್ಕೆ 50 ಲಕ್ಷ ರೂ ಗಳ ಅನುದಾನಕ್ಕೆ ಮನವಿ‌ ಮಾಡಿದ್ದೇವೆ. ರಂಗಾಯಣದ ಅಭಿವೃದ್ಧಿ ಹಾಗೂ ಹೆಚ್ಚಿನ ಕಲಾವಿದರ ಪೋಷಣೆಗೆ ಒತ್ತು ನೀಡುವ ಉದ್ದೇಶ ಇದೆ. ಕಲಾವಿದರ ಸಂಭಾವನೆಗೆ ಹಾಗೂ  ಇತರ ಮೇಂಟೇನೆನ್ಸ್ ಗೆ ಸಾಕಷ್ಟು ಹಣ ಬೇಕಾಗುತ್ತೆ. ಹಾಗಾಗಿ ನಿರಂತರವಾದ ಬೇಡಿಕೆ‌ಯನ್ನ ಸರ್ಕಾರದ ಮುಂದೆ  ಇಟ್ಟಿದ್ದೇವೆ ಎಂದು ಅಡ್ಡಂಡ ಕಾರ್ಯಪ್ಪ ಹೇಳಿದರು.

ರಂಗಾಯಣ ಹಾಗೂ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಗಡಿಯಲ್ಲಿ ಕನ್ನಡ ನಾಟಕ ವಿನೂತ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಫೆಬ್ರವರಿ 26. 28 ಹಾಗೂ ಮಾರ್ಚ್ 3 ರಂದು ಕಾರ್ಯಕ್ರಮ ನಡೆಯಲಿದ್ದು, ಚಾಮರಾಜನಗರದ ಗುಂಡ್ಲುಪೇಟೆಯಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ನಂತರ ಕೊಡಗಿನ ಪೊನ್ನಂಪೇಟೆ ಹಾಗೂ ಎಚ್.ಡಿ ಕೋಟೆಯ ಮಗ್ಗೆ ಗ್ರಾಮದಲ್ಲಿ ಕನ್ನಡ ನಾಟಗಳ ಪ್ರದರ್ಶನ. ಗಡಿಭಾಗದಲ್ಲಿ ಕನ್ನಡವನ್ನು ಶಕ್ತಿಗಳಗೊಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು.

Key words: Rangayana-director-addanda Kariyappa