ರಮೇಶ್ ಕತ್ತಿಗೆ  ರಾಜ್ಯಸಭಾ ಟಿಕೇಟ್ ಗಾಗಿ ಮನವಿ ಮಾಡಿದ್ದೇನೆ- ದೆಹಲಿಯಲ್ಲಿ ಶಾಸಕ ಉಮೇಶ್ ಕತ್ತಿ ಹೇಳಿಕೆ..

ನವದೆಹಲಿ,ಫೆ 12,2020(www.justkannada.in): ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಹಿರಿಯ ಶಾಸಕ ಉಮೇಶ್ ಕತ್ತಿಗೆ ಮಂತ್ರಿಗಿರಿ ಕೈ ತಪ್ಪಿದ್ದು ಈ ನಡುವೆ ಉಮೇಶ್ ಕತ್ತಿ ಅವರಿಗೆ ಮುಂದಿನದಿನಗಳಲ್ಲಿ ಸಚಿವ ಸ್ಥಾನ ನೀಡುವುದು ಖಚಿತ ಎಂದು ಈಗಾಗಲೇ ಸಿಎಂ ಬಿಎಸ್ ವೈ ಭರವಸೆ ನೀಡಿದ್ದಾರೆ. ಈ ಮಧ್ಯೆ ಶಾಸಕ ಉಮೇಶ್ ಕತ್ತಿ ಇದೀಗ ತಮ್ಮ ಸಹೋದರ ರಮೇಶ್ ಕತ್ತಿಗೆ ರಾಜ್ಯ ಸಭಾ ಟಿಕೇಟ್ ಗಾಗಿ ಲಾಭಿ ನಡೆಸುತ್ತಿದ್ದಾರೆ.

ಈ ಸಂಬಂಧ ದೆಹಲಿಗೆ ತೆರಳಿರುವ ಶಾಸಕ ಉಮೇಶ್ ಕತ್ತಿ ಮಾಧ್ಯಮಗಳ ಜತೆ ಮಾತನಾಡಿ, ರಮೇಶ್​​ ಕತ್ತಿಗೆ ರಾಜ್ಯಸಭಾ ಟಿಕೆಟ್ ಕೇಳುತ್ತೇನೆ. ಜೂನ್ ನಲ್ಲಿ 4 ರಾಜ್ಯಸಭಾ ಸ್ಥಾನಗಳು ಖಾಲಿಯಾಗಲಿವೆ. ಹೀಗಾಗಿ ಒಂದು ಸ್ಥಾನವನ್ನ ರಮೇಶ್ ಕತ್ತಿಗೆ ನೀಡುವಂತೆ ಕೇಳಿದ್ದೇನೆ.  ಉಮೇಶ್ ಕತ್ತಿ ಬೇರೆ, ರಮೇಶ್ ಕತ್ತಿ ಬೇರೆ. ನಾವಿಬ್ಬರು ಸಹೋದರರು ಹೌದಾದರೂ, ನಮ್ಮ ಜೀವನ ಬೇರೆ ಎಂದು ತಿಳಿಸಿದರು.

ಇದೇ ವೇಳೆ ಸಚಿವ ಸ್ಥಾನ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಉಮೇಶ್ ಕತ್ತಿ,  ಮುಂದೆ ನನಗೂ ಸಚಿವ ಸ್ಥಾನ ಸಿಗಬಹುದು. ಪ್ರತಿ ಬಾರಿ ಅಂತಿಮ ಪಟ್ಟಿಯಲ್ಲಿ ನನ್ನ ಹೆಸರು ಇರುತ್ತದೆ. ಆದರೆ, ಕಡೆ ಘಳಿಗೆಯಲ್ಲಿ ಪಟ್ಟಿಯಿಂದ ಹೊರಗಿರುತ್ತದೆ. ಹೈಕಮಾಂಡ್ ನಾಯಕರಿಗೆ ಎಲ್ಲವೂ ಗೊತ್ತಿದೆ. ಪಕ್ಷದಲ್ಲಿ ಹಿರಿಯನಿದ್ದೇನೆ. ಇನ್ನೂ 2 ಬಾರಿ ಚುನಾವಣೆಗೆ ಸ್ಪರ್ಧಿಸಲಿದ್ದೇನೆ. ಮುಂದೆ ಮಂತ್ರಿಯಾಗಬಹುದು, ಸಿಎಂ ಆಗಲೂಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Key words: Ramesh katti- Rajya Sabha- ticket –MLA- Umesh katti