ಮತ್ತೆ ಮುನ್ನಲೆಗೆ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣ ವಿಚಾರ: ಕೇಸ್ ವಾಪಸ್ ಪಡೆದು ಕ್ಷಮೆ ಕೇಳುವಂತೆ ಯದುವೀರ್ ಗೆ ಆಗ್ರಹ.

ಮೈಸೂರು,ಏಪ್ರಿಲ್,16,2024 (www.justkannada.in): ಮೈಸೂರಿನಲ್ಲಿ ಜೆಎಸ್ಎಸ್ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಈ ವಿಚಾರದ ಮೂಲಕ ಲೋಕಸಭಾ ಚುನಾವಣೆಯಲ್ಲಿ ವೀರಶೈವ ಮತ ಸೆಳೆಯಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ.

ನಗರದ ಗನ್ ಹೌಸ್ ಬಳಿ ರಾತ್ರೋರಾತ್ರಿ ರಾಜೇಂದ್ರ ಶ್ರೀಗಳ ಪ್ರತಿಮೆ ಪ್ರತಿಷ್ಠಾಪನೆಯಾಗಿತ್ತು. ಇದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಕುರಿತು ಕಾಂಗ್ರೆಸ್ ಮುಖಂಡ, ಮಾಜಿ ಮೇಯರ್ ಬಿ ಎಲ್ ಭೈರಪ್ಪ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.

ತ್ರಿವಿಧ ದಾಸೋಹಿ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣಕ್ಕೆ ಮೈಸೂರು ರಾಜಮನೆತನ ವಿರೋಧ ವ್ಯಕ್ತಪಡಿಸಿದೆ. ಈಗ ಚುನಾವಣೆಗೆ ಸ್ಪರ್ಧೆ ಮಾಡಿರುವ ಯದುವೀರ್ ಅವರು  ಸುತ್ತೂರು ಶ್ರೀಗಳ ಆಶೀರ್ವಾದ ಬೇಕು ಅಂತ ಮಠಕ್ಕೆ ಹೋಗ್ತಾರೆ. ನಿಮಗೆ ಶ್ರೀಗಳ ಆಶೀರ್ವಾದ ಪಡೆಯುವ ನೈತಿಕತೆ ಇಲ್ಲ. ರಾಜ್ಯದಲ್ಲಿ ಸುತ್ತೂರು ಮಠಕ್ಕೆ ಒಂದು ದೊಡ್ಡ ಹೆಸರಿದೆ. ಅವರ ಕೊಡುಗೆ ನಮ್ಮ ರಾಜ್ಯಕ್ಕೆ ಅಪಾರವಾಗಿದೆ. ಬಡ, ದೀನ ದಲಿತರಿಗೆ ಆಶ್ರಯ ವಿದ್ಯಾದಾನ, ಅನ್ನದಾನದ ಮೂಲಕ ಹೆಸರುವಾಸಿಯಾಗಿದೆ. ಭಿಕ್ಷೆ ಬೇಡಿ ಅನ್ನ ದಾಸೋಹ ನಡೆಸುತ್ತಿದ್ದ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣಕ್ಕೆ ನೀವು ಅವಕಾಶ ಕೊಟ್ಟಿಲ್ಲ ಎಂದು ಕಿಡಿಕಾರಿದರು.

ಈ ಕೂಡಲೇ ಸುಪ್ರೀಂ ಕೋರ್ಟಿನಲ್ಲಿರುವ ಕೇಸ್ ವಾಪಸ್ ಪಡೆಯಬೇಕು. ಜೊತೆಗೆ ಪ್ರತಿಮೆ ಅನಾವರಣಕ್ಕೆ ಅವಕಾಶ ಮಾಡಿಕೊಟ್ಟರೆ ನಿಮ್ಮ ಗೌರವ ಹೆಚ್ಚಾಗುತ್ತದೆ. ಪ್ರತಿಮೆ ಅನಾವರಣಕ್ಕೆ ಸರ್ಕಾರ, ಮೈಸೂರು ಮಹಾನಗರ ಪಾಲಿಕೆ ಅನುಮತಿಯೂ ಸಿಕ್ಕಿದ್ದರೂ ನೀವು ತಡೆಯೊಡ್ಡಿರುವುದು ಸರಿಯಲ್ಲ. ಈಗ ನೀವು ಬಹಿರಂಗ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಮಹಾಪೌರ ಬಿ.ಎಲ್ ಭೈರಪ್ಪ ಆಗ್ರಹಿಸಿದ್ದಾರೆ.

Key words:  Rajendra Shri,  statue,  BL Bhairappa