ರೈಲ್ವೆ ನಿಲ್ದಾಣದ ಆಹಾರದಲ್ಲಿ ಹಲ್ಲಿ ಪತ್ತೆ: ಸುಳ್ಳು ಆರೋಪ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿ ಬಂಧನ

ತೆಲಂಗಾಣ:ಜುಲೈ-25:(www.justkannada.in) ರೈಲ್ವೆ ನಿಲ್ದಾಣಗಳಲ್ಲಿ ಕಲಬೆರಕೆ ಆಹಾರ ಮತ್ತು ಆಹಾರದಲ್ಲಿ ಅಪಾಯಕಾರಿ ವಸ್ತುಗಳನ್ನು ನೀಡಲಾಗುತ್ತಿದೆ ಎಂಬ ಸುಳ್ಳು ಆರೋಪ ಮಾಡಿ ಹಣ ಸಂಪಾದಿಸುತ್ತಿದ್ದ ಬ್ಲ್ಯಾಕ್‌ಮೇಲರ್‌ನನ್ನು ಗುಂಟಕಲ್ ವಿಭಾಗದ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಬಂಧಿಸಿದೆ.

ಬಂಧಿತನನ್ನು ಸುಂದರ್ ಪಾಲ್ ಎಂದು ಗುರುತಿಸಲಾಗಿದೆ. ಈತ ರೈಲ್ವೆ ಸ್ಟೇಷನ್ ನಲ್ಲಿರುವ ಫುಡ್ ಸ್ಟಾಲ್ ನಲ್ಲಿ ಬಡಿಸಿದ ವೆಜಿಟೆಬಲ್ ಬಿರಿಯಾನಿಯಲ್ಲಿ ಹಲ್ಲಿಯಿತ್ತು ಎಂದು ಆರೋಪಿಸಿ ರೈಲ್ವೆ ಅಧಿಕಾರಿಗಳನ್ನು ವಂಚಿಸಲು ಯತ್ನಿಸಿದ್ದ.

ಈ ವಿಷಯುಕ್ತ ಆಹಾರವನ್ನು ಸೇವಿಸಿದವರು ರೈಲ್ವೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗಿ ಹೇಳಿದ್ದ. ಅತನನ್ನು ವಶಕ್ಕೆ ಪಡೆದು ತನಿಖೆ ನಡೆಸಿದ ರೈಲ್ವೆ ಪೊಲಿಸರಿಗೆ ಅನುಮಾನ ಆರಂಭವಾಗಿದೆ. ಇಂಥದ್ದೇ ಪ್ರಸಂಗವೊಂದು ಜಬಲ್ಪುರ ರೈಲ್ವೆ ಸ್ಟೇಷನ್ ನಲ್ಲಿ ಕೂಡ ನಡೆದಿತ್ತು. ಅಲ್ಲಿನ ರೈಲ್ವೆ ಸ್ಟೇಷನ್ ಫುಡ್ ಸ್ಟಾಲ್ ನಲ್ಲಿ ನೀಡಿದ ಸಮೋಸಾ ಪ್ಲೇಟ್ ನಲ್ಲಿ ಹಲ್ಲಿ ಸಿಕ್ಕಿದೆಯೆಂದು ವ್ಯಕ್ತಿಯೊಬ್ಬ ದೂರು ನೀಡಿದ್ದರು ಎಂಬುದನ್ನು ತಿಳಿದ ಪೊಲಿಸರು, ವಿಚಾರಿಸಿದಾಗ ಹೀಗೆ ದೂರು ನೀಡಿದ ವ್ಯಕ್ತಿ ಹೆಸರೂ ಪಾಲ್ ಎಂಬುದು ತಿಳಿದುಬಂದಿದೆ.

ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ, ಪುಣೆ ವಿಭಾಗದ ಮಿರಾಜ್ ರೈಲ್ವೆ ನಿಲ್ದಾಣದಲ್ಲಿ ಬಡಿಸಿದ ತಟ್ಟೆಯಲ್ಲಿ ಪತ್ತೆಯಾದ ಬ್ಲೇಡ್ ಬಗ್ಗೆ ಮತ್ತೊಂದು ದೂರು ಕೂಡ ಅವರ ಗಮನಕ್ಕೆ ಬಂದಿತು ಮತ್ತು ಇದು ಕೂಡ ಪಾಲ್ ಅವರ ದೂರು ಎಂದು ತಿಳಿದುಬಂದಿದೆ. ಎರಡೂ ಸಂದರ್ಭಗಳಲ್ಲಿ, ಅವರು ಸ್ಟಾಲ್ ಮಾಲೀಕರಿಗೆ ದೂರು ನೀಡಿ ಬೆದರಿಕೆ ಹಾಕಿದ್ದಾರೆ ಎಂದು ಹೇಳಲಾಗಿದೆ.

ಪಾಲ್ ನನ್ನು ಬಲೆಗೆ ಕೆಡವುವ ಉದ್ದೇಶದಿಂದಲೇ ರೈಲ್ವೆ ಪೊಲೀಸರು, ನಿಲ್ದಾಣದಲ್ಲಿನ ಫುಡ್ ಸ್ಟಾಲ್ ಮಾಲೀಕರ ಸಹಾಯವನ್ನು ಪಡೆದು ಹೊಂಚು ಹಾಕಿದ್ದರು. ಅಂತಿಮವಾಗಿ ಗುಂಟಕಲ್ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಪಾಲ್, ಹೀಗೆ ರೈಲ್ವೆ ನಿಲ್ದಾಣದ ಫುಡ್ ಸ್ಟಾಲ್ ಗಳಲ್ಲಿ ಆಹಾರ ಖರೀದಿಸಿ ಬಳಿಕ ಅದರಲ್ಲಿ ಅಪಾಯಕಾರಿ, ವಿಷಕಾರಿ ವಸ್ತುಗಳಿರುವುದಾಗಿ ರೈಲ್ವೆ ಅಧಿಕಾರಿಗಳಿಗೆ ದೂರು ನೀಡುತ್ತಿದ್ದ. ಬಳಿಕ ಸ್ಟಾಲ್ ಮಾಲೀಕರಿಗೆ ಕಂಪ್ಲೇಂಟ್ ವಾಪಸ್ ಪಡೆಯಲು ಹಣ ನೀಡಬೇಕೆಂದು ಕೇಳಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಿ.ಎಚ್. ರಾಕೇಶ್ ತಿಳಿಸಿದ್ದಾರೆ.

ರೈಲ್ವೆ ನಿಲ್ದಾಣದ ಆಹಾರದಲ್ಲಿ ಹಲ್ಲಿ ಪತ್ತೆ: ಸುಳ್ಳು ಆರೋಪ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿ ಬಂಧನ
Railway Protection Force arrest passenger for cooking up lizard-in-food story in Telangana