ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹಾಗೂ ಇತರೆ ಗಣ್ಯರಿಗೆ ಮೋಸ ಮಾಡಿದ್ದ ಕಂಪನಿಯ ಆಸ್ತಿ ಜಪ್ತಿ ಮಾಡಿದ ಜಾರಿ ನಿರ್ದೇಶನಾಲಯ.

ಬೆಂಗಳೂರು, ನವೆಂಬರ್ 4, 2021 (www.justkannada.in): 35.7 ಕೋಟಿ ರೂಪಾಯಿಗಳು…! ಇದು, ಹಗರಣಪೀಡಿತ ವಿಕ್ರಂ ಇನ್ವೆಸ್ಟ್ಮೆಂಟ್ಸ್ ಹಾಗೂ ಅದರ ಸಹಯೋಗಿ ಕಂಪನಿಗಳಿಗೆ ಸೇರಿದ ಆಸ್ತಿಯನ್ನು ಜಾರಿ ನಿರ್ದೇಶನಾಲಯ Prevention of Money Laundering Act ನಡಿ ಜಪ್ತಿ ಮಾಡಿರುವ ಮೊತ್ತ.

2018ರ ಮಾರ್ಚ್ ತಿಂಗಳಲ್ಲಿ ಈ ಮೋಸದ ಹಗರಣ ಬಯಲಾಗಿತ್ತು. ಈ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಜಾರಿ ನಿರ್ದೇಶನಾಲಯ ಬೆಂಗಳೂರಿನ ವಿವಿಧೆಡೆಗಳಲ್ಲಿರುವ ಕಂಪನಿಗೆ ಸೇರಿದ ಭೂಮಿ, ಕಚೇರಿ ಕಟ್ಟಡ ಹಾಗೂ ಫ್ಲ್ಯಾಟ್‌ ಗಳು ಒಳಗೊಂಡಂತೆ ಸುಮಾರು ರೂ.೩೪.೨೧ ಕೋಟಿ ಮೌಲ್ಯದ ಸ್ಥಿರ ಆಸ್ತಿಯನ್ನು ಜಪ್ತಿ ಮಾಡಿದೆ. ಜೊತೆಗೆ ಬ್ಯಾಂಕ್ ಬ್ಯಾಲೆನ್ಸ್ ಹಾಗೂ ಸ್ಥಿರ ಠೇವಣಿಗಳಲ್ಲಿದ್ದಂತಹ ರೂ.೧.೪೯ ಕೋಟಿಯನ್ನೂ ಸಹ ಜಪ್ತಿ ಮಾಡಿದೆ.

ಭಾರತದ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್, ಮಾಜಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಹಾಗೂ ಇನ್ನೂ ಹಲವಾರು ಗಣ್ಯರು ಸೇರಿದಂತೆ ಸುಮಾರು ೨,೪೨೦ ಜನರು ವಿಕ್ರಂ ಇನ್ವೆಸ್ಟ್ ಮೆಂಟ್ ನ ಮೋಸದ ಜಾಲದಲ್ಲಿ ಸಿಲುಕಿಕೊಂಡು ನಷ್ಟ ಅನುಭವಿಸಿದ್ದರು.

ಮೂಲಗಳ ಪ್ರಕಾರ ವಿಕ್ರಂ ಇನ್ವೆಸ್ಟ್ ಮೆಂಟ್ಸ್  commodity trading  ಹೆಸರಿನಲ್ಲಿ ವಾರ್ಷಿಕ ೩೦-೩೫%ರಷ್ಟು ಲಾಭವನ್ನು ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ರೂ.೪೧೭ ಕೋಟಿಯಷ್ಟು ಹಣವನ್ನು ಸಂಗ್ರಹಿಸಿತ್ತು. ಈ ಪೈಕಿ ‘ಲಾಭ’ ಎಂಬ ಹೆಸರಿನಲ್ಲಿ ರೂ.೩೩೧ ಕೋಟಿ ಮೊತ್ತವನ್ನು ಹಿಂದಿರುಗಿಸಿ, ಉಳಿದ ರೂ.೮೬ ಕೋಟಿ ಮೊತ್ತವನ್ನು ದುರುಪಯೋಗಪಡಿಸಿಕೊಳ್ಳಲಾಗಿತ್ತು.

ಸುಮಾರು ಮೂರು ವರ್ಷಗಳ ಹಿಂದೆ, ಈ ಕಂಪನಿಯಲ್ಲಿ ಬರೋಬ್ಬರಿ ರೂ.೧೧.೭ ಕೋಟಿಗಳಷ್ಟು ಬೃಹತ್ ಮೊತ್ತವನ್ನು ಹೂಡಿಕೆ ಮಾಡಿದ್ದ ದಕ್ಷಿಣ ಬೆಂಗಳೂರು ಭಾಗದ ಪಿ.ಆರ್. ಬಾಲಾಜಿ ಎಂಬ ಹೆಸರಿನ ಓರ್ವ ವ್ಯಾಪಾರಸ್ಥರು ಬನಶಂಕರಿ ಪೋಲಿಸರಿಗೆ ಮೋಸ ಹೋಗಿರುವ ದೂರನ್ನು ನೀಡಿದ ನಂತರ ಈ ಹಗರಣ ಬಯಲಿಗೆ ಬಂದಿತ್ತು. ಬಾಲಾಜಿ ಅವರ ದೂರನ್ನು ಆಧರಿಸಿ ಮಾರ್ಚ್ ೩, ೨೦೧೮ರಂದು ಪೊಲೀಸರು ಎಫ್‌ ಐಆರ್ ಅನ್ನು ದಾಖಲಿಸಿದ್ದರು. ಬಾಲಾಜಿ ಅವರು ತಮ್ಮ ದೂರಿನಲ್ಲಿ ವಿವರಿಸಿದ್ದಂತೆ ಕಂಪನಿ ಆರಂಭದಲ್ಲಿ ದೊಡ್ಡ ಮೊತ್ತದ ಲಾಭವನ್ನೇ ನೀಡಿತ್ತು. ಆದರೆ ಕ್ರಮೇಣ ಹಣ ಪಾವತಿಯನ್ನೇ ನಿಲ್ಲಿಸಿತ್ತು. ಮೂಲ ಮೊತ್ತವನ್ನು ಹಿಂದಿರುಗಿಸಲೇ ಇಲ್ಲ.

ಒಟ್ಟಾರೆಯಾಗಿ ಈ ಕಂಪನಿಗೆ ಸಂಬಂಧಪಟ್ಟಂತೆ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ೨೧ ವಿವಿಧ ಎಫ್‌ಐಆರ್‌ಗಳು ನೋಂದಣಿಯಾಗಿದ್ದವು. ನಂತರದಲ್ಲಿ ಈ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿತ್ತು.

ಪೊಲೀಸರು ವಿಕ್ರಂ ಇನ್ವೆಸ್ಟ್ ಮೆಂಟ್ಸ್ ನ ಪಾಲುದಾರರು ಹಾಗೂ ಸಹಯೋಗಿಗಳಾದ ರಾಘವೇಂದ್ರ ಶ್ರೀನಾಥ್, ಕೆ.ಪಿ. ನರಸಿಂಹಮೂರ್ತಿ, ಎಂ. ಪ್ರಹ್ಲಾದ, ಕೆ.ಸಿ. ನಾಗರಾಜ್, ಹಾಗೂ ಸೂತ್ರಂ ಸುರೇಶ್ ಎಂಬುವವರನ್ನು ಬಂಧಿಸಿತು.

ಜಾರಿ ನಿರ್ದೇಶನಾಲಯ ಆ ಎಫ್‌ ಐಆರ್ ಅನ್ನು ಆಧರಿಸಿ money-laundering ತಪಾಸಣೆಯನ್ನು ಕೈಗೊಂಡಿತು. ಸೆಂಟ್ರಲ್ ಏಜೆನ್ಸಿಯ ಪ್ರಕಾರ, ವಿಕ್ರಂ ಇನ್ವೆಸ್ಟ್ ಮೆಂಟ್ಸ್  ಸಾರ್ವಜನಿಕರಿಂದ ಠೇವಣಿಗಳನ್ನು ಸಂಗ್ರಹಿಸಲು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಅಥವಾ ಮತ್ಯಾವುದೇ ನಿಯಂತ್ರಣ ಏಜೆನ್ಸಿಯಿಂದ ಅಗತ್ಯ ಅನುಮೋದನೆ ಇರಲಿಲ್ಲವಂತೆ.

ದೊಡ್ಡ ಮೊತ್ತದ ಲಾಭವನ್ನು ನೀಡುವುದಾಗಿ ಆಶ್ವಾಸನೆ ನೀಡಿ ಸಂಭವನೀಯ ಹೂಡಿಕೆದಾರರನ್ನು ಆಕರ್ಷಿಸಲು ಕಂಪನಿಯು ವಿಮಾ ಏಜೆಂಟರು ಹಾಗೂ ಇತರೆ ಮಧ್ಯಸ್ಥಿಕೆದಾರರಿಗೆ ದೊಡ್ಡ ಮೊತ್ತದ ಕಮೀಷನ್ ಅನ್ನು ಪಾವತಿಸಿತ್ತು. ಆರಂಭದಲ್ಲಿ ಹೂಡಿಕೆದಾರರ ವಿಶ್ವಾಸ ಗಳಿಸಲು ದೊಡ್ಡ ಮೊತ್ತದ ಲಾಭವನ್ನು ನೀಡಿ ಇನ್ನೂ ಹೆಚ್ಚು ಹೂಡಿಕೆ ಮಾಡುವಂತೆ ಉತ್ತೇಜಿಸಲಾಯಿತು. ಹೆಚ್ಚಿನ ಸಂಖ್ಯೆಯ ಹೂಡಿಕೆದಾರರು ಸೇರುವವರೆಗೂ ಈ ರೀತಿ ಲಾಭವನ್ನು ನೀಡಲಾಯಿತು. ಆದರೆ ಒಮ್ಮೆ ಹೂಡಿಕೆಗಳ ಮೊತ್ತ ಕಡಿಮೆಯಾಗಲು ಆರಂಭವಾದಂತೆ ಕಂಪನಿಗೆ ಲಾಭವನ್ನು ನೀಡುವುದು ಸಾಧ್ಯವಾಗದೆ, ಅಂತಿಮವಾಗಿ ನಿಜ ಬಣ್ಣ ಬಯಲಾಯಿತು. ಈ ಪ್ರಕರಣದಲ್ಲಿ ಇನ್ನೂ ಅನೇಕ ಹೂಡಿಕೆದಾರರಿಗೆ ತಾವು ಹೂಡಿಕೆ ಮಾಡಿದ್ದ ಮೊತ್ತ ದೊರೆಯಬೇಕಿದೆ.

ಜಾರಿ ನಿರ್ದೇಶನಾಲಯದ ಪ್ರಕಾರ ಕಂಪನಿಯ ಓರ್ವ ಪಾಲುದಾರರಾದ ಶ್ರೀನಾಥ್ ಅವರು ಪಿ. ಕೃಷ್ಣ ಎಂಬ ಹೆಸರಿನ ಓರ್ವ ಹೂಡಿಕೆದಾರರಿಗೆ ನಂಬಲಸಾಧ್ಯ ಎನಿಸುವ ಹಾಗೆ ಬರೋಬ್ಬರಿ ರೂ.೩೫ ಕೋಟಿ ಹಣವನ್ನು ಲಾಭದ ರೂಪದಲ್ಲಿ ನೀಡಿದ್ದರಂತೆ.

ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್

jk

Key words: Rahul Dravid – other celebrity -cheating –company- Property – Siege-ED