ಮುಡಾ 5,000 ನಿವೇಶನಗಳ ಅಕ್ರಮ ಹಂಚಿಕೆ ತನಿಖೆ ಏನಾಯ್ತು..? ಸಾರ್ವಜನಿಕರಿಗೆ ಮಾಹಿತಿ ಕೊಡಿ-ಆರ್. ರಘುಕೌಟಿಲ್ಯ 

ಮೈಸೂರು,ಆಗಸ್ಟ್,25,2025 (www.justkannada.in): ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶೇ 50:50 ರ ಅನುಪಾತದ ನಿವೇಶನಗಳ ಹಗರಣ ರಾಜ್ಯ ಕಂಡ ಬಹುದೊಡ್ಡ ಭ್ರಷ್ಟಾಚಾರ ಹಾಗೂ ಲೂಟಿಕೋರತನದ ಹಗರಣವಾಗಿದೆ. 5,000 ನಿವೇಶನಗಳ ಅಕ್ರಮ ಹಂಚಿಕೆ ತನಿಖೆ  ಹಳ್ಳಹಿಡಿಯುತ್ತಿರುವ ಆತಂಕ ಎದುರಾಗಿದೆ. ಹೀಗಾಗಿ ಇದರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆರ್. ರಘುಕೌಟಿಲ್ಯ ಆಗ್ರಹಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಘು ಕೌಟಿಲ್ಯ,  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶೇ 50:50 ರ ಅನುಪಾತದ ನಿವೇಶನಗಳ ಹಗರಣ ರಾಜ್ಯ ಕಂಡ ಬಹುದೊಡ್ಡ ಭ್ರಷ್ಟಾಚಾರ ಹಾಗೂ ಲೂಟಿಕೋರತನದ ಹಗರಣವಾಗಿದೆ. ಮೈಸೂರಿನ ನಿವೇಶನ ರಹಿತರಿಗೆ ಸಿಗಬೇಕಾದ ಅಂದಾಜು ಐದು ಸಾವಿರದಷ್ಟು ನಿವೇಶನಗಳನ್ನು, ಕಾನೂನನ್ನು ಗಾಳಿಗೆ ತೂರಿ ಈ ಹಿಂದಿನ ಇಬ್ಬರು ಮುಡಾ ಆಯುಕ್ತರುಗಳು ಹಾಗೂ ಇತರ ಅಧಿಕಾರಿಗಳು ಸೇರಿ ವ್ಯವಸ್ಥಿತ ಜಾಲ ನಿರ್ಮಿಸಿಕೊಂಡು ನಿವೇಶನಗಳನ್ನು ಲೂಟಿ ಮಾಡಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ ಸಾವಿರಾರು ಕೋಟಿ ನಷ್ಟವಾಯಿತು.

ಮೊನ್ನೆ ನಡೆದ ಇ-ಹರಾಜಿನಲ್ಲಿ ಕೇವಲ 200 ನಿವೇಶನಗಳಿಗೆ 100 ಕೋಟಿಗೂ ಹೆಚ್ಚು ಹರಾಜಿನಲ್ಲಿ ಮಾರಾಟವಾಗಿದೆ. ಕೇವಲ 20X30 ನಿವೇಶನವೊಂದು ಎರಡು ಕೋಟಿಯವರೆಗೆ, 50X80 ನಿವೇಶನ 9 ಕೋಟಿಯವರೆಗೆ ಇ-ಹರಾಜಿನಲ್ಲಿ ಘೋಷಿಸಿಕೊಂಡಿದ್ದಾರೆ ಎಂಬ ಮಾಹಿತಿ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದೆ. ಆಶ್ಚರ್ಯಕರ ರೀತಿಯಲ್ಲಿ ಇ-ಹರಾಜಿನಲ್ಲಿ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಖರೀದಿಯಾಗಿರುವುದನ್ನು ಗಮನಿಸಿದರೆ, ಇ-ಹರಾಜಿನ ಪ್ರಕ್ರಿಯೆಯ ಹಿಂದೆ ಮೈಸೂರಿನ ರಿಯಲ್ ಎಸ್ಟೇಟ್ ಉದ್ಯಮವನ್ನು ಬೂಸ್ಟ್ ಮಾಡಿಸುವ ಪ್ರಯತ್ನವೂ ಯಾಕಿರಬಾರದೆಂಬ ಅನುಮಾನ ವ್ಯಕ್ತವಾಗುತ್ತಿದೆ. ಮುಡಾ ಹಗರಣದ ನಂತರ ಮೈಸೂರಿನ ರಿಯಲ್ ಎಸ್ಟೇಟ್ ಬೇಡಿಕೆ ಕುಸಿದಿದ್ದು, ಈ ಹಿನ್ನೆಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಚುರುಕುಗೊಳ್ಳಲಿ ಎಂಬ ತಂತ್ರವೂ ಇರಬಹುದಾದ ಅನುಮಾನ ವ್ಯಕ್ತವಾಗುತ್ತಿದೆ ಎಂದರು.

ಈಗಾಗಲೇ ಜಾರಿ ನಿರ್ದೇಶನಾಲಯ (ED) ಶೇ 50:50 ಅನುಪಾತದ ನಿವೇಶನಗಳನ್ನು ನೋಂದಣಿ ಮಾಡದಂತೆ ಉಪ ನೋಂದಣಿ ಅಧಿಕಾರಗಳಿಗೆ ಸೂಚನೆ ನೀಡಿದೆ. ಆದರೆ ನಗರಾಭಿವೃದ್ಧಿ ಪ್ರಾಧಿಕಾರ ಈ ಸಂಬಂಧವಾಗಿ ಯಾವುದೇ ಕ್ರಮವನ್ನು ಜರುಗಿಸುತ್ತಿಲ್ಲ. ನ್ಯಾಯಮೂರ್ತಿ ದೇಸಾಯಿ ಆಯೋಗ ಯಾವ ವರದಿ ಕೊಟ್ಟಿದೆ ಎನ್ನುವುದು ಇವರೆವಿಗೂ ಬಹಿರಂಗವಾಗಿಲ್ಲ. ಲೋಕಾಯುಕ್ತದ ತನಿಖೆ ಹಾಗೂ ಜನಪ್ರತಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆಯಾದರೂ ಮುಖ್ಯಮಂತ್ರಿಗಳ ಕುಟುಂಬದ 14 ನಿವೇಶನಗಳತ್ತಲೇ ಈವರೆವಿಗೂ ವಿಷಯ ಕೇಂದ್ರೀಕೃತವಾಗಿದೆಯೇ ಹೊರತು, ಲೂಟಿಯಾದ ಉಳಿದ ನಿವೇಶನಗಳನ್ನು ರಕ್ಷಿಸುವಲ್ಲಿ ಸರ್ಕಾರ ಮುಂದಾದಂತೆ ಕಾಣುತ್ತಿಲ್ಲ. ಈ 5,000 ನಿವೇಶನಗಳ ಲೂಟಿಕೋರತನದ ತನಿಖೆ ಹಳ್ಳಹಿಡಿಯುತ್ತಿದೆ ಎಂಬ ಆತಂಕ ಮೈಸೂರಿನ ನಿವೇಶನರಹಿತರನ್ನು ಕಾಡುತ್ತಿದೆ ಎಂದು ರಘು ಕೌಟಿಲ್ಯ ಕಳವಳ ವ್ಯಕ್ತಪಡಿಸಿದರು.

ಸದರಿ ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಂಡು, ಅಧಿಸೂಚನೆ ಹೊರಡಿಸಿ, ಆ ಮಂಜೂರಾತಿಯನ್ನು ರದ್ದು ಮಾಡಬೇಕಾಗಿತ್ತು.ಆದರೆ ಈವರೆವಿಗೂ ಅಂತಹ ಯಾವುದೇ ಹೆಜ್ಜೆ ಇಟ್ಟಂತೆ ಕಂಡುಬರುತ್ತಿಲ್ಲ. ಈ ನಿಟ್ಟಿನಲ್ಲಿ ಈ ಕೂಡಲೇ ನಗರಾಭಿವೃದ್ಧಿ ಇಲಾಖೆ ಮತ್ತು ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿ ಅಸ್ತಿತ್ವಕ್ಕೆ ಬಂದಿರುವ ನಗರ ಅಭಿವೃದ್ಧಿ ಪ್ರಾಧಿಕಾರ ಈ ನಿವೇಶನಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಈ ನಿವೇಶನಗಳು ರದ್ದು ಪಡಿಸುವ ಹಂತದಲ್ಲಿದೆಯೇ? ತನಿಖೆ ಹಂತದಲ್ಲಿದೆಯೇ? ಅಥವಾ ಈ ನಿವೇಶನಗಳು ಮಾರಾಟಕ್ಕೆ ಬಂದರೆ ಸಾರ್ವಜನಿಕರು ಮೋಸ ಹೋಗದಂತೆ ಯಾವ ಕ್ರಮ ಅನುಸರಿಸಬೇಕೆಂಬ ಸೂಚನೆಗಳನ್ನು ಇಲಾಖೆಯಿಂದ ನೀಡುತ್ತಿಲ್ಲ. ನೂತನವಾಗಿ ಅಸ್ತಿತ್ವ ಪಡೆದುಕೊಂಡಿರುವ ಅಭಿವೃದ್ಧಿ ಪ್ರಾಧಿಕಾರ ಏಕೆ ಮೌನ ವಹಿಸಿದೆ? ಎಂದು ರಘುಕೌಟಿಲ್ಯ ಪ್ರಶ್ನಿಸಿದರು.

ಈ ಬಹುದೊಡ್ಡ ಹಗರಣದ ಹಿನ್ನೆಲೆಯ ಬೆಳವಣಿಗೆಯನ್ನು ನೋಡುತ್ತಿದ್ದರೆ, ತನಿಖೆಯನ್ನು ಗಮನಿಸುತ್ತಿದ್ದರೆ, ಈ ಲೂಟಿಕೋರತನವನ್ನು ಮುಚ್ಚಿಬಿಡುವ ಹಾಗೂ ಸಂಬಂಧಿತ ಅಪರಾಧಿಗಳನ್ನು ರಕ್ಷಿಸುವ ಹುನ್ನಾರ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇಂತಹ ಬಹುದೊಡ್ಡ ಹಗರಣವನ್ನು ನಡೆಸಿದ ಯಾವ ಅಧಿಕಾರಿಗೂ ಸರ್ಕಾರ ಶಿಕ್ಷಿಸಲಿಲ್ಲ. ಏಕೆಂದರೆ ಸ್ವತಃ ಮುಖ್ಯಮಂತ್ರಿಗಳ ಕುಟುಂಬವೇ ಈ ಹಗರಣದಲ್ಲಿ ಸಿಲುಕಿಕೊಂಡ ಹಿನ್ನೆಲೆಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿಲ್ಲ. ಹೋಗಲಿ ಎಂದರೆ ಈ ನಿವೇಶನಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಯಾವುದೇ ಹೆಜ್ಜೆ ಇಡುತ್ತಿಲ್ಲ ಎಂದು ರಘು ಕೌಟಿಲ್ಯ ಕಿಡಿಕಾರಿದರು.

ಈ ಕೂಡಲೇ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸರ್ಕಾರ ಈ ಶೇ 50:50 ಅನುಪಾತದ ಅಕ್ರಮ ವಿತರಣೆಯ ನಿವೇಶನಗಳ ಗತಿ ಏನಾಗಿದೆ, ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆಯೇ ಎಂಬ ಬಗ್ಗೆ ಸ್ಪಷ್ಟನೆ ನೀಡಬೇಕು. ಈ ನಿವೇಶನಗಳನ್ನು ಪಡೆದಿರುವ ನಿವೇಶನದಾರರು ಯಾರು, ಅವರ ಹಿನ್ನೆಲೆ ಏನು ಎಂಬ ಬಗ್ಗೆ ಸರ್ಕಾರ ವಿಸ್ತ್ರತ ತನಿಖೆ ನಡೆಸಬೇಕು. ಒಂದು ವೇಳೆ ಸರ್ಕಾರ ಈ ನಿಟ್ಟಿನಲ್ಲಿ ಇದೇ ರೀತಿಯಾದಂತಹ ನಡುವಳಿಕೆ ಮುಂದುವರಿಸಿದರೆ ಉಚ್ಚ ನ್ಯಾಯಾಲಯದಲ್ಲಿ ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡುವುದು ಅನಿವಾರ್ಯವಾದೀತು ಎಂದು ರಘುಕೌಟಿಲ್ಯ ಎಚ್ಚರಿಕೆ ನೀಡಿದ್ದಾರೆ.

Key words: investigation illegal allocation, Muda, sites , Raghu koutilya