ಮೈಸೂರು,ಜೂನ್,5,2025 (www.justkannada.in): ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿದ ಘಟನೆ ಸಂಬಂಧ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಣೆ ಹೊರಲೇ ಬೇಕು. ಕನಿಷ್ಠ ನೈತಿಕತೆ ಉಳಿಸಿಕೊಂಡಿದ್ದರೆ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಡಾ ಪರಮೇಶ್ವರ್ ಅವರುಗಳು ತಮ್ಮ ಪದವಿಗಳಿಗೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮುಖಂಡ ಆರ್.ರಘು ಕೌಟಿಲ್ಯ ಆಗ್ರಹಿಸಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ಆರ್. ರಘು ಕೌಟಿಲ್ಯ, RCB ಗೂ ಕನ್ನಡ, ಕನ್ನಡಿಗ, ಕರ್ನಾಟಕಕ್ಕೂ ಏನು ಸಂಬಂಧ? ನಮ್ಮ ಜನ ಯಾಕೆ ಇಷ್ಟೊಂದು ಉನ್ಮಾದದಲ್ಲಿ ತೇಲಿದರು, ಪ್ರಾಣಕಳೆದುಕೊಂಡರು? ಎಂಬ ಪ್ರಶ್ನೆಗೆ ಈಗಲೂ ನನಗೆ ಉತ್ತರ ಸಿಗುತ್ತಿಲ್ಲ?
ಬ್ರಿಟನ್‌ನ ಮದ್ಯ ತಯಾರಿಕಾ ಕಂಪನಿ ‘ಡಿಯಾಜಿಯೊ’ RCB ತಂಡದ ಮಾಲೀಕತ್ವ ಹೊಂದಿದೆ. ಐಪಿಎಲ್ ಎಂಬುದು ಸಂಪೂರ್ಣವಾಗಿ ಮನರಂಜನೆ ಮತ್ತು ವಾಣಿಜ್ಯ ಉದ್ದೇಶವನ್ನು ಹೊಂದಿದೆ. ಜನರ ಅತಿರೇಕದ ಅಭಿಮಾನವನ್ನು ಬಂಡವಾಳ ಮಾಡಿಕೊಳ್ಳಲು ಅವಿವೇಕಿ ನಿರ್ಧಾರ ಕೈಗೊಂಡು ಸರ್ಕಾರವು ಸನ್ಮಾನ ಕಾರ್ಯಕ್ರಮ ಆಯೋಜಿಸಿದ್ದು ಎಷ್ಟು ಸರಿ?ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ನಡೆಯುತ್ತಿದ್ದಾಗಲೇ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಕಾಲ್ತುಳಿತ ನಡೆದು ಕೆಲವರು ಮೃತಪಟ್ಟ ಸುದ್ದಿ ತಲುಪಿದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಗೃಹ ಸಚಿವ ಮತ್ತು ಇತರ ಸಚಿವರು ಹಾಜರಿದ್ದು ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ. ಇದು ಮಾನವೀಯ ಸಂವೇದನೆಯೇ ಇಲ್ಲದ ಭಂಡ ನಡವಳಿಕೆ. 11 ಮಂದಿ ಸತ್ತಿದ್ದಾರೆ ಎಂಬುದು ಗೊತ್ತಾದ ಬಳಿಕವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸನ್ಮಾನ ಕಾರ್ಯಕ್ರಮ ನಡೆದಿರುವುದು ಸಾವಿನಮನೆಯಲ್ಲಿ ಆಚರಿಸಿದ ಹಬ್ಬ ವಲ್ಲದೇ ಬೇರೇನೂ ಅಲ್ಲ ಎಂದು ರಘು ಕೌಟಿಲ್ಯ ಟೀಕಿಸಿದ್ದಾರೆ.
ಜನರ ಜೀವ ಬಲಿ ಪಡೆದುದರ ಹೊಣೆ ಹೊರಬೇಕಾಗಿದ್ದ ಆರ್‌ಸಿಬಿ ತಂಡದ ಮಾಲೀಕರು ಸನ್ಮಾನ ಮಾಡಿ ಸಂಭ್ರಮಿಸಿದ್ದು ಅಕ್ಷಮ್ಯ. ಈ ಎಲ್ಲದಕ್ಕೂ ಉತ್ತರದಾಯಿತ್ವ ನಿರ್ಣಯವಾಗಲೇಬೇಕು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೊಣೆ ಹೊರಲೇ ಬೇಕು. ಕನಿಷ್ಠ ನೈತಿಕತೆ ಉಳಿಸಿಕೊಂಡಿದ್ದರೆ, ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಡಾ ಪರಮೇಶ್ವರ್ ಅವರುಗಳು ತಮ್ಮ ಪದವಿಗಳಿಗೆ ರಾಜೀನಾಮೆ ನೀಡಬೇಕು.
ಘನ ಉಚ್ಚ ನ್ಯಾಯಾಲಯ ಸ್ವಯಂ ಪ್ರೇರಿತ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸಿದರೆ ನ್ಯಾಯವಲ್ಲದ ಸಾವು, ನೋವು ಅನುಭವಿಸಿದ ಜೀವಗಳಿಗೆ ಕನಿಷ್ಠಪಕ್ಷ ನ್ಯಾಯವಾದರೂ ದೊರಕಬಹುದು. ಭವಿಷ್ಯತ್ತಿನಲ್ಲಿ ಸರ್ಕಾರಗಳ ‘ತುಘಲಕ್’ ನಿರ್ಧಾರಗಳಿಗೆ ಅಂಕುಶ ಬೀಳಬಹುದು ಎಂದು ರಘು ಕೌಟಿಲ್ಯ ಹೇಳಿದ್ದಾರೆ.
Key words: government, responsibility, stampede, Raghu Kautilya