ಪಂಜಾಬ್ ವಿಧಾನಸಭಾ ಚುನಾವಣೆ: ಘಟಾನುಘಟಿ ನಾಯಕರಿಗೆ ಸೋಲು.

ಪಂಜಾಬ್,ಮಾರ್ಚ್,10,2022(www.justkannada.in): ಪಂಜಾಬ್ ಸೇರಿ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಈ ಮಧ್ಯೆ ಪಂಜಾಬ್ ನಲ್ಲಿ ಘಟಾನುಘಟಿ ನಾಯಕರೇ ಸೋಲನುಭವಿಸಿದ್ದಾರೆ.

ಹೌದು, ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್​ ಅಮರೀಂದರ್​ ಸಿಂಗ್, ​ ಪಂಜಾಬ್ ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ, ಕಾಂಗ್ರೆಸ್ ಅಭ್ಯರ್ಥಿ ನವಜೋತ್ ಸಿಂಗ್ ಸಿಧು ಸೇರಿ ಹಲವು ನಾಯಕರು ಸೋಲಿನ ರುಚಿ ಅನುಭವಿಸಿದ್ದಾರೆ.

ಕ್ಯಾಪ್ಟನ್​ ಅಮರೀಂದರ್​ ಸಿಂಗ್​  ಪಟಿಯಾಲ ಕ್ಷೇತ್ರದಲ್ಲಿ ಸೋಲನುಭವಿಸಿದ್ದಾರೆ. ಎರಡು ಬಾರಿ ಸಿಎಂ ಆಗಿದ್ದ ಅಮರೀಂದರ್​ ಸಿಂಗ್ ​ರನ್ನು ಆಮ್​ ಆದ್ಮಿ ಪಕ್ಷದ ಅಜಿತ್​ ಪಾಲ್​ ಸಿಂಗ್​ ಕೊಹ್ಲಿ ವಿರುದ್ಧ ಸೋಲಿಗೆ ಶರಣಾಗಿದ್ದಾರೆ.

ಹಿಂದಿನ ಬಾರಿ ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಅಮರೀಂದರ್​ ಸಿಂಗ್​ ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ​ ಕಾಂಗ್ರೆಸ್​ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಬಳಿಕ ಪಂಜಾಬ್​ ಲೋಕ್​ ಕಾಂಗ್ರೆಸ್​ ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ. ಇದೇ ಪಕ್ಷದಿಂದ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು.

ಹಾಗೆಯೇ ಇನ್ನೊಂದೆಡೆ ಕಾಂಗ್ರೆಸ್ ಪ್ರಬಲ ಅಭ್ಯರ್ಥಿ  ನವಜೋತ್ ಸಿಂಗ್ ಸಿಧು ಅವರು ಸಹ ಅಮೃತಸರ ಪೂರ್ವ ಕ್ಷೇತ್ರದಿಂದ ಎಎಪಿಯ ಜೀವನ್ ಜ್ಯೋತ್ ಕೌರ್ ವಿರುದ್ಧ  ಸೋಲನುಭವಿಸಿದ್ದಾರೆ. ಸಿಧು 23,488 ಮತಗಳನ್ನು ಪಡೆದಿದ್ದರೆ ಜೀವನ್ ಜ್ಯೋತ್ ಕೌರ್ 28,289 ಮತ್ತು ಮಜಿತಿಯಾ 18,799 ಮತಗಳನ್ನು ಪಡೆದಿದ್ದಾರೆ.

ಪಂಜಾಬ್ ಸಿಎಂ ಚರಣ್‍ ಜಿತ್ ಸಿಂಗ್ ಚನ್ನಿ ಅವರು ಚಮ್ಕಾರ್ ಸಾಹೀಬ್ ಹಾಗೂ ಬಾದೂರು ಕ್ಷೇತ್ರಗಳಿಂದ ಸ್ಪರ್ಧಿಸಿದ್ದು, ಎರಡು ಕ್ಷೇತ್ರಗಳಲ್ಲೂ ಸೋಲು ಕಂಡಿದ್ದಾರೆ. ಅದೇ ರೀತಿ ತಮ್ಮ ಸಾಮಾಜಿಕ ಕಳಕಳಿಯಿಂದ ಇಡೀ ದೇಶದ ಗಮನ ಸೆಳೆದಿದ್ದ ಬಾಲಿವುಡ್ ನಟ ಸೋನುಸೂದ್ ಅವರ ಸಹೋದರಿ ಮಾಳವಿಕಾ ಸೂದ್ ಅವರು ಪಂಜಾಬ್‍ ನ ಮೋಗಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಅವರಿಗೂ ಸೋಲಿನ ರುಚಿಯಾಗಿದೆ.

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ. 117 ಕ್ಷೇತ್ರಗಳ ಪೈಕಿ ಆಪ್ 92 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ ಕಾಂಗ್ರೆಸ್ 18, ಶಿರೋಮಣಿ ಅಕಾಲಿ ದಳ 4 ಸ್ಥಾನ, ಬಿಜೆಪಿ 2 ಹಾಗೂ ಓರ್ವ ಪಕ್ಷೇತರ ಮುನ್ನಡೆ ಸಾಧಿಸಿದ್ದಾರೆ.

Key words: Punjab –Assembly- Elections.