ತುಮಕೂರು,ಜನವರಿ,31,2026 (www.justkannada.in): ಲಂಚ ಸ್ವೀಕರಿಸುವ ವೇಳೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ಗ್ರಾಮಾಂತರ ಠಾಣೆ ಪಿಎಸ್ ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದವರು. 40 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಠಾಣೆ ವ್ಯಾಪ್ತಿಯಲ್ಲಿ ಕಾರೊಂದನ್ನು ವಶಕ್ಕೆ ಪಡೆದಿದ್ದ ಪಿಎಸ್ ಐ ಚೇತನ್ ಕುಮಾರ್, ಬೆಂಗಳೂರು ಮೂಲದ ವ್ಯಕ್ತಿಯೊಬ್ಬರ ಕಾರಿನಲ್ಲಿ ಅನುಮಾನಾಸ್ಪದ ವಸ್ತುಗಳು ಇವೆ ಎಂದು ಠಾಣೆಗೆ ತಂದಿದ್ದಾರೆ. ಬಳಿಕ ಕಾರು ಬಿಡದೇ ಪ್ರಕರಣವನ್ನೂ ದಾಖಲಿಸದೇ 1 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟು 40 ಸಾವಿರ ರೂಪಾಯಿ ಫೈನಲ್ ಮಾಡಿದ್ದರು ಎನ್ನಲಾಗಿದೆ.
ಈ ಮಧ್ಯೆ ಹಣ ಪಡೆಯುತ್ತಿದ್ದಾಗ ಪಿಎಸ್ ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಟೋಲ್ ನ ಅಂಗಡಿಯೊಂದರಲ್ಲಿ ಹಣ ಕೊಡಲು ಪಿಎಸ್ ಐ ಹೇಳಿದ್ದರು. ಅಂಗಡಿಗೆ ಹಣ ಕೊಡಲು ಬರುವವನ ಫೋಟೋವನ್ನು ಅಂಗಡಿಯವನಿಗೆ ರವಾನಿಸಿದ್ದರು. ಅಂಗಡಿಯವನ ಮೊಬೈಲ್ ಪರಿಶೀಲಿಸಿದಾಗ ಪಿಎಸ್ ಐ ಪಾತ್ರ ಬಯಲಾಗಿದೆ. ಸದ್ಯ ಪಿಎಸ್ ಐ ಚೇತನ್ ಕುಮಾರ್ ನನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಕಳೆದ ಎರಡು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಇನ್ಸ್ ಪೆಕ್ಟರ್ ಗೋವಿಂದರಾಜು ಎಂಬುವವರು 4 ಲಕ್ಷ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯಕ್ತ ಬಲೆಗೆ ಬಿದ್ದಿದ್ದರು. ಈ ವೇಳೆ ಇನ್ಸ್ ಪೆಕ್ಟರ್ ಗೋವಿಂದರಾಜು ಕಿರುಚಿ ಹೈಡ್ರಾಮಾ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು.
Key words: PSI, Lokayukta, trap, bribe







