ಸಿಎಂ ಕ್ಷೇತ್ರದಲ್ಲೇ ಶಾಲೆಗೆ ಸರ್ಕಾರಿ ಜಾಗ ಒದಗಿಸಲು ಮೀನಮೇಷ: ಒತ್ತುವರಿ ತೆರವಿಗೆ ಮುಂದಾಗದ ಅಧಿಕಾರಿಗಳು.

ಮೈಸೂರು,ಸೆಪ್ಟಂಬರ್,9,2023(www.justkannada.in):  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವರುಣ ಕ್ಷೇತ್ರದಲ್ಲೆ ಗ್ರಾಮವೊಂದರ ಸರ್ಕಾರಿ ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ಬೆಂಬಲ ಸಿಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಹೌದು, ಕ್ಷೇತ್ರದ ದಂಡಿಕೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಹಳೆಯದಾಗಿದ್ದು, ಶಿಥಿಲಗೊಂಡಿದೆ. ಹೀಗಾಗಿ  ಹೊಸ ಕಟ್ಟಡ ನಿರ್ಮಿಸಲು ಸರ್ಕಾರಿ ಜಾಗ (ಸರ್ಕಾರಿ ಖರಾಬು) ಒದಗಿಸಲು ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದು, ಈ ಬಗ್ಗೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಾಲೆಗೆ ಹೊಸ ಕಟ್ಟಡ ನಿರ್ಮಿಸಲು ಸರ್ಕಾರಿ ಜಾಗವಿದ್ದು,  ಹಾಲಿ ವರುಣ ವಿಧಾನಸಭಾ ಕ್ಷೇತ್ರದ ಕೆಡಿಪಿ ಸದಸ್ಯರಾಗಿರುವ ಡಾ.ಯತೀಂದ್ರ ಸಿದ್ದರಾಮಯ್ಯ ಶಾಸಕರಾಗಿದ್ದಾಗ  2022ರಲ್ಲೇ ಅನುದಾನ ಬಿಡುಗಡೆ ಮಾಡಿಸಿದ್ದರು. ಆದರೆ ಆ ಜಾಗದಲ್ಲಿ ಒತ್ತುವರಿ ತೆರವುಗೊಳಿಸಿ  ಅದನ್ನ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿ ಬಂದಿದೆ.  ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಸರ್ಕಾರಿ ಜಾಗವನ್ನು ಉಳಿಸಿಕೊಳ್ಳಲು ಕ್ರಮ ಕೈಗೊಳ್ಳುತ್ತಿಲ್ಲವೇಕೆ’ ಎಂಬ ಪ್ರಶ್ನೆ  ಗ್ರಾಮಸ್ಥರದ್ದಾಗಿದೆ.

ಈ ಸಂಬಂಧ ಅಲ್ಲಿನ ಮುಖಂಡ ದಂಡಿಕೆರೆ ನಾಗರಾಜ್ ದಾಖಲೆಗಳನ್ನು ಸಲ್ಲಿಸಿದ್ದು, ಮಾಹಿತಿ ಹಕ್ಕು ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಕೂಡ ಸರ್ಕಾರಕ್ಕೆ ಪತ್ರ ಬರೆದಿದ್ದು, ಮುಖ್ಯಮಂತ್ರಿ ಕಚೇರಿಯ ಗಮನಕ್ಕೂ ತರಲಾಗಿದೆ. ಆದರೆ ಇದಕ್ಕೆ  ಅಧಿಕಾರಿಗಳಿಂದ ಸ್ಪಂದನೆ ದೊರೆತಿಲ್ಲ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ದಂಡಿಕೆರೆ ನಾಗರಾಜ್‌, ಸರ್ಕಾರಿ ಶಾಲೆಯ ಕಟ್ಟಡ  ಶಿಥಿಲಗೊಂಡಿದ್ದು ಈ ಹಿನ್ನೆಲೆಯಲ್ಲಿ  ಹೊಸದಾಗಿ ಕಟ್ಟಡ ನಿರ್ಮಿಸಿಕೊಡುವಂತೆ ಹಿಂದಿನ ಶಾಸಕ ಡಾ.ಯತೀಂದ್ರ ಸಿದ್ಧರಾಮಯ್ಯ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದೆವು. ಇದಕ್ಕೆ ಸ್ಪಂದಿಸಿದ ಅವರು, ತಮ್ಮ ಅನುದಾನದಲ್ಲಿ 27.80 ಲಕ್ಷ ರೂ. ಬಿಡುಗಡೆ ಮಾಡಿಸಿದ್ದಾರೆ. ಅದನ್ನು ಬಳಸಿಕೊಳ್ಳಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದ್ದಾರೆ.

ಈಗಿನ ಶಾಲೆ ಇರುವ ಜಾಗದಲ್ಲಿ ಕಟ್ಟಡ ನಿರ್ಮಿಸಲು ಮತ್ತು ಆಟದ ಮೈದಾನಕ್ಕೆ ಯೋಗ್ಯವಾಗಿಲ್ಲ. ಜನವಸತಿ ಪ್ರದೇಶದಲ್ಲಿರುವುದರಿಂದ ಮಕ್ಕಳ ಕಲಿಕೆಗೆ ಬಹಳ ಕಿರಿಕಿರಿಯಾಗುತ್ತದೆ. ಪ್ರಾರ್ಥನೆಗೂ ಜಾಗ ಸಾಕಾಗದಂತಾಗಿದೆ. ಈ ವಿಷಯವನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದಾಗ ಗ್ರಾಮದ ಸಮೀಪದಲ್ಲಿ ಯಾವುದಾದರೂ ಸರ್ಕಾರಿ ಜಮೀನಿದ್ದರೆ ತಿಳಿಸುವಂತೆ ಹೇಳಿದ್ದರು. ಅದರಂತೆ ಸರ್ವೆ ನಂಬರ್ 107ರಲ್ಲಿ 2.23 ಎಕರೆ ಜಮೀನಿರುವುದು ಆರ್‌ಟಿಸಿ ಮತ್ತು ನಕ್ಷೆಯಲ್ಲಿ ಕಂಡುಬಂದಿದೆ. ಆದರೆ, ಆ ಜಾಗದಲ್ಲಿ ಕೆಲವರು ಅನಧಿಕೃತವಾಗಿ ಬೇಲಿ ಹಾಕಿಕೊಂಡಿದ್ದಾರೆ. ಈ ವಿಷಯವನ್ನು ಮೈಸೂರು ತಹಶೀಲ್ದಾರ್ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರಿ ಜಾಗ ಉಳಿಸಿಕೊಳ್ಳಲು ಅಧಿಕಾರಿಗಳು ಉತ್ಸುಕತೆ ತೋರುತ್ತಿಲ್ಲ. ಖಾಲಿ ಜಾಗವನ್ನು ಶಾಲೆಗೆ ಹಸ್ತಾಂತರಿಸಲು ಇರುವ ತೊಡಕು ಏನು ಎಂದು ದಂಡಿಕೆರೆ ನಾಗರಾಜ್‌  ಪ್ರಶ್ನಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ತಹಶೀಲ್ದಾರ್ ಬಿ.ಎಸ್. ಗಿರೀಶ್,  ಈ ವಿಚಾರ ಗಮನಕ್ಕೆ ಬಂದಿದ್ದು,  ಸರ್ಕಾರಿ ಜಾಗದಲ್ಲಿ ಕಟ್ಟಡ ಅಥವಾ ಮನೆ ನಿರ್ಮಿಸಲು ಅವಕಾಶವಿರುವುದಿಲ್ಲ. ಈ ಬಗ್ಗೆ ಸಮೀಕ್ಷೆ ನಡೆಸಿ ಸ್ಕೆಚ್ ಸಮೇತ ವರದಿ ಸಲ್ಲಿಸುವಂತೆ ಸರ್ವೇಯರ್, ಆರ್‌ಐ  ಹಾಗೂ ವಿಎಗೆ ಸೂಚಿಸಲಾಗಿದೆ. ವರದಿ ಸಲ್ಲಿಕೆಯಾದ ಬಳಿಕ ಜಿಲ್ಲಾಧಿಕಾರಿ ಜೊತೆ ಚರ್ಚಿಸಿ ಮುಂದಿನ ಕ್ರಮ ವಹಿಸಲಾಗುತ್ತದೆ. ಒತ್ತುವರಿ ಮಾಡಿಕೊಂಡಿದ್ದು ಕಂಡುಬಂದಲ್ಲಿ ನಿಯಮಾನುಸಾರ ಕ್ರಮ ವಹಿಸಲಾಗುತ್ತದೆ ಎಂದು ಹೇಳಿದರು.

Key words: provide- government- land – school – CM constituency-varuna