ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ: ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ.

ಮೈಸೂರು,ನವೆಂಬರ್,29,2023(www.justkannada.in): ಪರೀಕ್ಷೆಗಳನ್ನು ಮುಂದೂಡುವಂತೆ ಹಾಗೂ ವಿವಿಧ ಬೇಡಿಕೆಗಳನ್ನ ಈಡೇರಿಸುವಂತೆ  ಒತ್ತಾಯಿಸಿ ಮೈಸೂರು ಮಹಾರಾಜ ಕಾಲೇಜಿನ ವಿದ್ಯಾರ್ಥಿಗಳು ಇಂದು  ಪ್ರತಿಭಟನೆ ನಡೆಸಿದರು.

AIDSO ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕ್ರಾಂಫರ್ಡ್ ಹಾಲ್ ಎದುರಗಡೆ ಪ್ರತಿಭಟನಾ ಧರಣಿ ನಡೆಸಿದ ವಿದ್ಯಾರ್ಥಿಗಳು, ಅಗತ್ಯ ಪ್ರಾಧ್ಯಾಪಕ, ಉಪನ್ಯಾಸಕರ ನೇಮಕಾತಿಗೆ ಹಾಗೂ ತರಗತಿಗಳನ್ನು ಸರಿಯಾಗಿ ನಡೆಸುವಂತೆ ಆಗ್ರಹಿಸಿದರು.

ಕಾಲೇಜು ಪ್ರಾರಂಭವಾಗಿ ಒಂದು ತಿಂಗಳು ಕಳೆದರೂ ಪ್ರಾಧ್ಯಾಪಕ ನೇಮಕವಾಗದೇ ಸರಿಯಾಗಿ ಪಾಠಗಳೂ ನಡೆಯುತ್ತಿಲ್ಲ. ತರಗತಿಗಳೇ ನಡೆಯದೇ ಪರೀಕ್ಷೆ ವೇಳಾಪಟ್ಟಿ ಪ್ರಕಟ ಮಾಡಲಾಗಿದೆ. ಬಿ.ಕಾಂ, ಬಿಬಿಎ ವಿದ್ಯಾರ್ಥಿಗಳಿಗೆ ಫೈನಾನ್ಸಿಯಲ್ ಅಕೌಂಟ್, ಫಿಸಿಕಲ್ ಎಜುಕೇಶನ್, ಎನ್ವೈಯರ್ನಮೆಂಟಲ್ ಸ್ಟಡೀಸ್, ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ವಿಷಯಗಳಿಗೆ ಒಂದೇ ಒಂದು ತರಗತಿ ನಡೆದಿಲ್ಲ, ಉಪನ್ಯಾಸಕರನ್ನು ಕೂಡ ನೇಮಕಾತಿ ಮಾಡಿಲ್ಲ. ಒಂದು ವಾರದ ಹಿಂದೆ ಕೂಡ ಗಮನಕ್ಕೆ ತಂದರೂ ವಿಶ್ವವಿದ್ಯಾನಿಲಯ ಕ್ರಮ ಕೈಗೊಂಡಿಲ್ಲ . ಡಿಸೆಂಬರ್ 15ರಂದು ಪರೀಕ್ಷೆ ನಡೆಸುತ್ತೇವೆ ಎಂದು ಆದೇಶ ಹೊರಡಿಸಿದ್ದಾರೆ.  ಇದನ್ನು ಈ ಕೂಡಲೇ ಹಿಂಪಡೆಯಬೇಕೆಂದು ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆಗ್ರಹಿಸಿದರು.
ಪ್ರತಿಭಟನೆ ಸ್ಥಳಕ್ಕೆ ರಿಜಿಸ್ಟರ್ ಪ್ರೊಫೆಸರ್ ಮಹದೇವನ್ ಭೇಟಿ ನೀಡಿದ್ದು, ಮೈಸೂರು ವಿವಿಯ ಕುಲಪತಿಗಳಾದ ಪ್ರೊ.ಲೋಕನಾಥ್ ಹಾಗೂ ರಿಜಿಸ್ಟರ್ ಪ್ರೊ. ಮಹಾದೇವನ್ ಮನವಿ ಪತ್ರ ಸ್ವೀಕಾರ ಮಾಡಿದರು.  ಪರೀಕ್ಷೆಗಳನ್ನು ಮುಂದುಡುತ್ತೇವೆ ಹಾಗೂ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಆಶ್ವಾಸನೆ ನೀಡಿದರು. ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಕೈಬಿಟ್ಟರು.

Key words: Protest – students –Mysore- Maharaja College.